ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಧನೆ–ಆಯ್ಕೆ ಸಮಿತಿಯ ಸದಸ್ಯರ ಮೂಲಕವಷ್ಟೇ ಕುಲಪತಿ ನೇಮಕಾತಿ : ಸುಪ್ರೀಂ ಕೋರ್ಟ್‌

Last Updated 12 ನವೆಂಬರ್ 2022, 14:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಆಯ್ಕೆ ಮತ್ತು ನೇಮಕಾತಿಯು ‘ಶೋಧನೆ ಮತ್ತು ಆಯ್ಕೆ’ ಸಮಿತಿಯ ಮೂರರಿಂದ ಐವರು ಸದಸ್ಯರ ತಂಡದ ಮೂಲಕ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಉತ್ತರಾಖಂಡದ ಸೋಬನ್‌ ಸಿಂಗ್‌ ಜೀನಾ ವಿಶ್ವವಿದ್ಯಾಲಯದ ಕುಲಪತಿಯಾಗಿ ತಮ್ಮ ನೇಮಕಾತಿಯನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಪ್ರೊ. ನರೇಂದ್ರ ಸಿಂಗ್‌ ಭಂಡಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಎಂ.ಆರ್‌ ಶಾ ಮತ್ತು ಎಂ.ಎಂ ಸುಂದ್ರೇಶ್‌ ಅವರಿದ್ದ ಪೀಠವು ಹೀಗೆ ಹೇಳಿದೆ.

ಅರ್ಜಿದಾರಭಂಡಾರಿ ಅವರ ನೇಮಕಾತಿಯು ವಿಶ್ವವಿದ್ಯಾಲಯಗಳ ಕಾಯ್ದೆ– 2019 ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಕಾನೂನು–2018ರ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.

ಈ ನೇಮಕಾತಿಗೆ ಸಂಬಂಧಿಸಿ ಯಾವುದೇ ಜಾಹಿರಾತನ್ನು ಪ್ರಕಟಿಸಲಾಗಿಲ್ಲ. ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿಲ್ಲ. ಶೋಧನ ಮತ್ತು ನೇಮಕಾತಿ ಸಮಿತಿಯಿಂದ ಅವರ ಹೆಸರು ಶಿಫಾರಸುಗೊಂಡಿಲ್ಲ. ಈ ಕುರಿತು ಯಾವುದೇ ಶೋಧ ಸಮಿತಿಯನ್ನೂ ರಚಿಸಲಾಗಿಲ್ಲ. ನೇಮಕಾತಿ ಅನುಮೋದನೆಗಾಗಿ ಕೇವಲ ಒಂದು ಹೆಸರನ್ನು ರಾಜ್ಯ ಸರ್ಕಾರದ ಮುಂದೆ ಇರಿಸಲಾಗಿತ್ತು ಎಂದು ಪೀಠ ಹೇಳಿದೆ.

ತಾವು ಅರ್ಹ ಅಭ್ಯರ್ಥಿ ಎಂದು ಹೇಳುವ ಮೂಲಕ ಭಂಡಾರಿ ಅವರು ತಮ್ಮ ನೇಮಕಾತಿಯನ್ನು ಸಮರ್ಥಿಸಿಕೊಂಡಿದ್ದರು. ಅದನ್ನು ತಳ್ಳಿಹಾಕಿರುವ ಪೀಠವು, ‘ಅವರನ್ನು ಬೇರೆ ಅಭ್ಯರ್ಥಿಗಳ ಜೊತೆ ಹೋಲಿಸಲು ಸಾಧ್ಯವಾಗದ ಕಾರಣ ಅವರನ್ನು ಅರ್ಹ ಅಭ್ಯರ್ಥಿ ಎಂದು ಕರೆಯಲು ಸಾಧ್ಯವಿಲ್ಲ’ ಎಂದು ಹೇಳಿದೆ.

ಕುಲಪತಿ ಅಭ್ಯರ್ಥಿಗಳು 10 ವರ್ಷಗಳ ಕಾಲ ಪ್ರೊಫೆಸರ್‌ ಆಗಿ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡಿರುವ ಅನುಭವ ಹೊಂದಿರಬೇಕು ಎಂದುಯುಜಿಸಿ ಕಾನೂನು–2018ರಲ್ಲಿ ಹೇಳಲಾಗಿದೆ. ಆದರೆ ಅರ್ಜಿದಾರ ಭಂಡಾರಿ ಅವರು ಈ ಅರ್ಹತೆಯನ್ನು ಹೊಂದಿಲ್ಲ. 2009ರಿಂದ 2017ರ ವರೆಗೆ ಪ್ರೋಫೆಸರ್‌ ಆಗಿ ಸೇವೆ ಸಲ್ಲಿಸಿದ್ದಾಗಿ ಅವರು ಹೇಳಿದ್ದಾರೆ. ಆದರೆ, 2017ರ ಅಕ್ಟೋಬರ್‌ 7ರಂದು ಅವರನ್ನು ಉತ್ತರಾಖಂಡ ಲೋಕ ಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಯಿತು. 2020ರ ಆಗಸ್ಟ್‌ 13ರಂದು ಅವರನ್ನು ವಿ.ವಿಯ ಕುಲಪತಿಯನ್ನಾಗಿ ನೇಮಕ ಮಾಡುವವರೆಗೆ ಅವರು ಅಲ್ಲಿಯೇ ಸೇವೆ ಸಲ್ಲಿಸಿದ್ದರು.ಸಾರ್ವಜನಿಕ ಸೇವಾ ಆಯೋಗದಲ್ಲಿ ಸದಸ್ಯರಾಗಿದ್ದ ವೇಳೆ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾಗಿ ಮತ್ತು ಅದು ಬೋಧನಾ ವೃತ್ತಿಯ ಅನುಭವವೆಂದು ಪರಿಗಣಿಸಲ್ಪಡುತ್ತದೆ ಎಂದು ಭಂಡಾರಿ ಹೇಳಿದ್ದಾರೆ.ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದನ್ನು ವಿ.ವಿಯಲ್ಲಿ ಪ್ರೊಫೆಸರ್‌ ಆಗಿ ಪಡೆದ ಅನುಭವ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್‌ಹೇಳಿದೆ.

ಕುಲಪತಿಯಾಗಿ ಭಂಡಾರಿ ಅವರ ನೇಮಕಾತಿಯನ್ನು ಅಕ್ರಮ ಮತ್ತು ಶಾಸನಬದ್ಧ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಪೀಠ ಹೇಳಿದೆ.

ತಾವು ವಿ.ವಿಯ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಲು ತಯಾರಿರುವುದಾಗಿ ಅರ್ಜಿದಾರರು ಕಡೆಗೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT