ಲಖನೌ: ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸುತ್ತಿದ್ದ ರೈತರು, ಹಿಂದಿನಿಂದ ಬಂದ ಫೋರ್‌ವೀಲ್ ವಾಹನ (ಮಹೀಂದ್ರಾ ಥಾರ್‌ನಂತೆ ಕಾಣುವ ವಾಹನ) ರೈತರನ್ನು ಲೆಕ್ಕಿಸದೆ ಅಡ್ಡಸಿಕ್ಕವರನ್ನು ಗುದ್ದುತ್ತ ಮುನ್ನುಗ್ಗುತ್ತದೆ.... ಅಲ್ಲಿ ನಾಲ್ಕು ಮಂದಿ ಪ್ರತಿಭಟನಾ ನಿರತರು ಸಾವಿಗೀಡಾಗುತ್ತಾರೆ.
ಲಖಿಂಪುರ–ಖೇರಿಯ ದುರ್ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 27 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಅಮಾನವೀಯ ಘಟನೆಯ ಅನಾವರಣವಾಗಿದೆ. ಫೋರ್‌ವೀಲ್ ವಾಹನ ಹಿಂದಿನಿಂದ ಗುದ್ದುತಿದ್ದಂತೆ ರೈತರು ಚೆಲ್ಲಾಪಿಲ್ಲಿಯಾಗಿ ಹಾದಿಯಲ್ಲಿ ಬೀಳುತ್ತಾರೆ. ರೈತರೊಬ್ಬರು ವಾಹನದ ಬಾನೆಟ್ ಮೇಲೆ ಬಿದ್ದು, ಅಲ್ಲಿಂದ ರಸ್ತೆಗೆ ಬೀಳುತ್ತಾರೆ. ಅದರ ಹಿಂದೆಯೇ ಮತ್ತೊಂದು ಎಸ್‌ಯುವಿ ಸೈರನ್ ಮಾಡುತ್ತ, ಬಿದ್ದ ರೈತರನ್ನು ಗಮನಿಸದೆಯೇ ಸಾಗುತ್ತದೆ.
ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲೂ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಇದು ಲಖಿಂಪುರ–ಖೇರಿಯ ಘಟನೆಯೇ ಅಥವಾ ಇಲ್ಲವೇ ಎಂಬುದನ್ನು ಪೊಲೀಸರು ಇನ್ನಷ್ಟೇ ಪರಿಶೀಲಿಸಬೇಕಿದೆ. ವಿಡಿಯೊ ಗುಣಮಟ್ಟ ಕಡಿಮೆ ಇರುವುದರಿಂದ ವಾಹನವನ್ನು ಯಾರು ಚಲಾಯಿಸುತ್ತಿದ್ದರು ಎಂಬುದು ಸ್ಪಷ್ಟವಾಗಿ ಕಾಣುವುದಿಲ್ಲ.
ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಅವರನ್ನು ತಡೆಯಲು ನೂರಾರು ರೈತರು ಭಾನುವಾರ ಯತ್ನಿಸಿದ್ದರು. ಈ ಗುಂಪಿನ ಮೇಲೆ ಮಿಶ್ರಾ ಅವರಿಗೆ ಸಂಬಂಧಿಸಿದ ಎಸ್‌ಯುವಿ ಹರಿದು ನಾಲ್ವರು ರೈತರು ಮೃತಪಟ್ಟರು. ನಂತರ ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಚಾಲನೆ ಮಾಡಿದ್ದರು ಎಂದು ರೈತರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಸರ್ಕಾರದ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದೆ. ಮೃತರ ಕುಟುಂಬಕ್ಕೆ ತಲಾ ₹45 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹10 ಲಕ್ಷ ಪರಿಹಾರ ನೀಡಲು ಸರ್ಕಾರ ಒಪ್ಪಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ, ರೈತರ ಮೇಲೆ ಎಸ್‌ಯುವಿ ಹರಿಸಿದ ಆರೋಪ ಹೊತ್ತಿರುವ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮೃತ ರೈತರ ಅಂತ್ಯ ಸಂಸ್ಕಾರಕ್ಕೆ ರೈತ ನಾಯಕರು ಒಪ್ಪಿದ್ದಾರೆ, ಜತೆಗೆ ಅವರು ಪ್ರತಿಭಟನೆಯನ್ನೂ ಕೊನೆಗೊಳಿಸಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಲಖಿಂಪುರ–ಖೇರಿಯಲ್ಲಿ ಸೋಮವಾರ ಪ್ರಕಟಿಸಿದ್ದಾರೆ.
ನಾಲ್ವರು ರೈತರು ಸೇರಿ ಎಂಟು ಮಂದಿಯ ಸಾವಿಗೆ ಕಾರಣವಾದ ಪ್ರಕರಣದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.