ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಕಾರರಿಗೆ ‘ಶಿಕ್ಷೆ’: ಮತ್ತೆ ಬುಲ್ಡೋಜರ್‌ ಕಾರ್ಯಾಚರಣೆ

ಆರೋಪಿಯ ಮನೆ ನೆಲಸಮ
Last Updated 12 ಜೂನ್ 2022, 19:20 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಾದ್ಯಂತ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು ಎನ್ನಲಾದ ಮುಸ್ಲಿಂ ವ್ಯಕ್ತಿ
ಗಳ ಮನೆಗಳನ್ನು ನೆಲಸಮ ಮಾಡಲಾಗಿದೆ. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ನೀಡಿದ ‘ಅವಹೇಳನಕಾರಿ’ ಹೇಳಿಕೆಯನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗಿದೆ. ಈ ಮನೆಗಳು ‘ಅಕ್ರಮ’ ಎಂಬ ಕಾರಣಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳು ಮನೆ ಧ್ವಂಸ ಕಾರ್ಯಾಚರಣೆ ನಡೆಸಿವೆ.

ಪ್ರಯಾಗರಾಜ್‌ನಲ್ಲಿ ನಡೆದ ಪ್ರತಿಭಟನೆಯ ಪಿತೂರಿ ರೂಪಿಸಿದ ಆರೋಪ ಹೊತ್ತಿರುವ ಜಾವೇದ್‌ ಮಹಮ್ಮದ್‌ ಅವರ ಮನೆಯ ಒಂದು ಭಾಗವನ್ನು ಬುಲ್ಡೋಜರ್ ಬಳಸಿ ಭಾನುವಾರ ಉರುಳಿಸಲಾಗಿದೆ. ಈ ಮನೆಯ ಒಂದು ಭಾಗವು ‘ಅಕ್ರಮ’ ಎಂದು ಹೇಳಲಾಗಿದೆ. ಅವರಿಗೆ ಹಲವು ಬಾರಿ ನೋಟಿಸ್‌ ನೀಡಲಾಗಿದೆ ಎಂದು ಸ್ಥಳೀಯಾಡಳಿತ ಹೇಳಿದೆ.

ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾಕ್ಕೆ ಸಂಬಂಧಿಸಿದ ಸಾಹಿತ್ಯ, ಬಾವುಟ ಸೇರಿ ‘ಆಕ್ಷೇಪಾರ್ಹ’ವಾದ ಕೆಲವು ವಸ್ತುಗಳು ಜಾವೇದ್‌ ಮನೆಯಲ್ಲಿ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ಕಾನ್ಪುರ ಮತ್ತು ಸಹಾರನ್‌ಪುರದಲ್ಲಿ ಕೂಡ ಪ್ರತಿಭಟನಕಾರರಲ್ಲಿ ಕೆಲವರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ‘ಸಿ.ಸಿ.ಟಿ.ವಿ ಕ್ಯಾಮರಾ ದೃಶ್ಯಗಳ ಆಧಾರದಲ್ಲಿ ಪ್ರತಿಭಟನಕಾರರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಪ್ರತಿಭಟನಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆದ ಪ್ರಯಾಗರಾಜ್‌, ಸಹಾರನ್‌ಪುರ, ಮೊರಾದಾಬಾದ್‌, ಹಾಥರಸ್‌, ಕಾನ್ಪುರ ಮತ್ತು ಇತರ ಸ್ಥಳಗಳಲ್ಲಿ ಇನ್ನಷ್ಟು ಮನೆಗಳನ್ನು ಉರುಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ‘ಗಲಭೆಕೋರ’ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಗಲಭೆಕೋರರಿಗೆ ಏಟಿನ ಉಡುಗೊರೆ’

ಶುಕ್ರವಾರದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮುಸ್ಲಿಮರಿಗೆ ಪೊಲೀಸರು ಥಳಿಸಿದ್ದಾರೆ ಎಂಬುದನ್ನು ಬಿಂಬಿಸುವ ವಿಡಿಯೊವನ್ನು ಬಿಜೆಪಿ ಶಾಸಕ ಶಲಭ್‌ ಮಣಿ ತ್ರಿಪಾಠಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಥಳಿಸುತ್ತಿರುವ ಸ್ಥಳವು ಪೊಲೀಸ್ ಠಾಣೆಯಂತೆ ಕಾಣಿಸುತ್ತಿದೆ. ಇದು ‘ಗಲಭೆಕೋರರಿಗೆ ಸಿಕ್ಕ ಉಡುಗೊರೆ’ ಎಂದು ತ್ರಿಪಾಠಿ ಅವರು ಹೇಳಿದ್ದಾರೆ.

ಒಂಬತ್ತು ಮಂದಿಗೆ ಮೂವರು ಪೊಲೀಸರು ಲಾಠಿಯಿಂದ ಮನಬಂದಂತೆ ಥಳಿಸುವ ದೃಶ್ಯ ವಿಡಿಯೊದಲ್ಲಿದೆ. ‘ಥಳಿಸಬೇಡಿ’ ಎಂದು ಪ್ರತಿಭಟನಕಾರರು ಕೈಮುಗಿಯುವ ಮತ್ತು ಕೈಯಿಂದ ಹೊಡೆತವನ್ನು ತಡೆಯುವ ದೃಶ್ಯಗಳೂ ವಿಡಿಯೊದಲ್ಲಿ ಇವೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಘಟನೆ ನಡೆದಿದೆ ಎನ್ನಲಾದ ಠಾಣೆಯು ಸಹಾರನ್‌ಪುರ ಜಿಲ್ಲೆಯದ್ದು ಎಂದು ಮೂಲಗಳು ಹೇಳಿವೆ. ಉತ್ತರ ಪ್ರದೇಶ ಪೊಲೀಸರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ‘ಇಂತಹ ಘಟನೆ
ಗಳನ್ನು ಖಂಡಿಸಿದೇ ಇದ್ದರೆ ನ್ಯಾಯವು ಅದರ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT