ಮಂಗಳವಾರ, ಮಾರ್ಚ್ 9, 2021
31 °C

ವೈರಲ್ ವಿಡಿಯೊ.. ಜನರ ಗುಂಪಿನ ಬಳಿ ಬಂದ ಚಿರತೆ ಮಾಡಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಮ್ಲಾ: ಜನರ ಗುಂಪಿನ ಬಳಿಗೆ ಬರುವ ಚಿರತೆಯೊಂದು ಅವರ ಜೊತೆ ಆಟವಾಡಲು ಪ್ರಯತ್ನಿಸುವ ಅಚ್ಚರಿಕರ ವಿಡಿಯೊವೊಂದು ನಿನ್ನೆಯಿಂದ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಡು ಪ್ರಾಣಿಗಳ ಈ ಅಸಾಮಾನ್ಯ ನಡವಳಿಕೆಯು ವನ್ಯಜೀವಿ ತಜ್ಞರು ಮತ್ತು ಅರಣ್ಯ ಅಧಿಕಾರಿಗಳಲ್ಲಿ ಕಳವಳ ಉಂಟುಮಾಡಿದೆ.

ಆದರೆ, ಈ ಚಿರತೆಯನ್ನು ಯಾರೋ ಸಾಕಿರಬಹುದು. ಹೀಗಾಗಿಯೇ ಚಿರತೆ ಮಾನವರ ಬಳಿಗೆ ಬರುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಭಾರತದಲ್ಲಿ ಚಿರತೆ ಸೇರಿದಂತೆ ಅಳಿವಿನಂಚಿನಲ್ಲಿರುವ ಕ್ಯಾಟ್ಸ್ ಫ್ಯಾಮಿಲಿಯ ಪ್ರಾಣಿಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ. 

ಹಿಮಾಚಲಪ್ರದೇಶದ ತೀರ್ಥನ್ ಕಣಿವೆಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿರುವ ವಿಡಿಯೊದಲ್ಲಿ ರಸ್ತೆ ಬದಿ ನಿಂತಿರುವ ಜನರ ಗುಂಪಿನ ಬಳಿಗೆ ಚಿರತೆ ಬರುತ್ತದೆ. ಅಲ್ಲಿದ್ದ ಕೆಲವರು ಚಿರತೆ ಕಂಡು ಕಾಲ್ಕಿತ್ತರೆ ಒಬ್ಬ ವ್ಯಕ್ತಿ ಅಲ್ಲಿಯೇ ನಿಂತು ಚಿರತೆ ಜೊತೆ ಆಟವಾಡುತ್ತಾನೆ. ಚಿರತೆ ಆತನ ಮೇಲೆ ಹತ್ತಲು ಪ್ರಯತ್ನಿಸುತ್ತದೆ. ಸ್ಥಳದಲ್ಲಿದ್ದ ಮತ್ತೊಬ್ಬ ಈ ದೃಶ್ಯವನ್ನು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿದ್ದು, ಜನ ಹುಬ್ಬೇರಿಸುತ್ತಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಇದನ್ನು ಗಮನಿಸಿರುವ ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಯ ಅಧಿಕಾರಿ ಪ್ರವೀಣ್ ಕಸ್ವಾನ್, ಈ ಚಿರತೆ ವರ್ತನೆ ಬಗ್ಗೆ ಅರಿಯಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಚಿರತೆ ಸುತ್ತ ಇದ್ದ ಜನರ ನಡವಳಿಕೆ ಬಗ್ಗೆ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್ ವಿಭಾಗದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿ, ಈ ಚಿರತೆಯನ್ನು ಯಾರೋ ಸಾಕಿದಂತೆ ಕಾಣುತ್ತದೆ. ಹತ್ತಿರದ ಎಸ್ಟೇಟ್‌ನಿಂದ ತಪ್ಪಿಸಿಕೊಂಡಿರಬಹುದು ಎಂದಿದ್ಧಾರೆ.

ಇದೇ ಅಭಿಪ್ರಾಯವನ್ನು ಹಿರಿಯ ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಸಹ ವ್ಯಕ್ತಪಡಿಸಿದ್ದು, ಈ ಚಿರತೆಯನ್ನು ಎತ್ತಿ ಆಡಿಸಿ ಬೆಳೆಸಿದ್ದಾರೆ. ಈ ಬಗ್ಗೆ ಮತ್ತಷ್ಟು ತನಿಖೆಯ ಅಗತ್ಯವಿದೆ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು