ಶುಕ್ರವಾರ, ಮೇ 14, 2021
31 °C
ಕೋವಿಡ್‌

ಕೋವಿಡ್‌ 19 ನಿಯಂತ್ರಣಕ್ಕೆ ಕಠಿಣ ಕ್ರಮ: ಮಹಾರಾಷ್ಟ್ರದಲ್ಲಿ ವಾಕಿಂಗ್‌ಗೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋವಿಡ್–19 ಸೋಂಕು ಪ್ರಕರಣಗಳನ್ನು ನಿಯಂತ್ರಿಸುವುದಕ್ಕಾಗಿ ಮಹಾರಾಷ್ಟ್ರದಲ್ಲಿ 15 ದಿನಗಳ ಕಾಲ ಲಾಕ್‌ಡೌನ್ ಮಾದರಿಯ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, ಆ ಪ್ರಕಾರ ವಾಯುವಿಹಾರ, ಜಾಗಿಂಗ್ ಮತ್ತು ಸೈಕ್ಲಿಂಗ್‌ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ.

ಅಗತ್ಯ ಸೇವೆಗಳ ವ್ಯಾಪ್ತಿಗೆ ಒಳಪಡುವ ಕೊರಿಯರ್‌ ಸೇವೆಗೆ ಅನುಮತಿ ನೀಡಲಾಗಿದೆ. ಮದ್ಯದ ಅಂಗಡಿಗಳು ಮತ್ತು ಸಿಗರೇಟ್ ಮಾರಾಟ ಮಳಿಗೆಗಳನ್ನು ತೆರೆಯದಂತೆ ಆದೇಶಿಸಲಾಗಿದೆ. ದಾಸಿಯರು, ಚಾಲಕರು, ಅಡುಗೆಯವರು ಮತ್ತು ಸಹಾಯಕರ ಬಗ್ಗೆ ಆಯಾ ಸ್ಥಳೀಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ.

ಲಾಕ್‌ಡೌನ್ ಜಾರಿಗೊಳಿಸಿದರೆ ಸಾಮಾನ್ಯ ಜನರ ನಿತ್ಯದ ಬದುಕಿಗೆ ತೊಂದರೆಯಾಗುತ್ತದ ಎಂಬುದರ ಕುರಿತು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ, ಲಾಕ್‌ಡೌನ್ ಮಾದರಿಯ ಕಠಿಣ ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ಸ್ಪಷ್ಟೀಕರಣ ನೀಡಲು ಸಾಮಾನ್ಯ ಪ್ರಶ್ನೋತ್ತರಗಳಿರುವ ಆರು ಪುಟಗಳ ಮಾಹಿತಿಯನ್ನು ಸಿದ್ಧಪಡಿಸಿದೆ.

ಸರ್ಕಾರ ವಿಧಿಸಿರುವ ಹೊಸ ನಿಯಮಗಳ ಪ್ರಕಾರ ‘ನಿರ್ದಿಷ್ಟ ಕಾರಣವಿಲ್ಲದೇ ಖಾಸಗಿ ವಾಹನಗಳು ರಾಜ್ಯದೊಳಗೆ ಸಂಚರಿಸುವಂತಿಲ್ಲ. ಸರ್ಕಾರದ ಸಾರಿಗೆ ಸಂಸ್ಥೆಯ ವಾಹನಗಳನ್ನು ಬಳಸುವ ನಾಗರಿಕರು ತಾವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದೇವೆ ಎಂಬುದಕ್ಕೆ ದಾಖಲೆಯಾಗಿ ಟಿಕೆಟ್‌ ನೀಡಬೇಕು‘

ಕಟ್ಟಡ ಕಾರ್ಮಿಕರು, ಕಾರ್ಪೆಂಟರ್‌ಗಳು, ಪ್ಲಂಬರ್‌ಗಳು, ಎಲೆಕ್ಟ್ರೀಷಿಯನ್‌ಗಳ ಓಡಾಟಕ್ಕೆ ನಿರ್ಬಂಧ ವಿಧಿಸುವುದು ಕಷ್ಟ. ಹಾಗಾಗಿ ಅವರನ್ನು ಸ್ವಚ್ಛತಾ ಕಾರ್ಮಿಕರು, ಸೋಂಕು ನಿವಾರಕರು ಮತ್ತು ಕೀಟ ನಿಯಂತ್ರಕರ ಸೇವೆಯಂತೆ ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ.

ಹೊಸ ಆದೇಶದ ಅನ್ವಯ, ಸ್ಟೇಷನರಿ ಅಂಗಡಿಗಳನ್ನು ಬಂದ್‌ ಮಾಡಲು ಸೂಚಿಸಲಾಗಿದೆ. ಟ್ರಾವಲ್‌ ಏಜೆನ್ಸಿಗಳು ಕಚೇರಿಗಳನ್ನು ತೆರೆಯುವಂತಿಲ್ಲ. ಈ ಕಚೇರಿಗಳು ಆನ್‌ಲೈನ್ ಮೂಲಕ ಕಾರ್ಯನಿರ್ವಹಿಸಬಹುದು.

ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ನೀಡುವ ಅಗತ್ಯ ಸೇವೆಗಳ ಬಗ್ಗೆ ಆದೇಶದಲ್ಲಿ ಹೀಗೆ ಉಲ್ಲೇಖಿಸಲಾಗಿದೆ; ‘ಈ ಸೇವೆಗಳಿಗೆ ದಿನವಿಡೀ ಅನುಮತಿ ನೀಡಲಾಗಿದೆ. ಸ್ಥಳೀಯ ಪ್ರಾಧಿಕಾರಗಳು ಬೇರೆ ಯಾವುದಾದರೂ ಕಾಯಿದೆಯಡಿ (ನಿಯಮಿತ ದಿನಗಳಲ್ಲಿ ರೆಸ್ಟೋರೆಂಟ್‌ಗಳಿಗೆ ಸಮಯ ನಿಗದಿಪಡಿಸಿದಂತೆ) ಸಮಯವನ್ನು ನಿಗದಿಪಡಿಸಲು ಅವಕಾಶವಿದೆ‘.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು