ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನೀತಿಯಲ್ಲ, ರಾಷ್ಟ್ರನೀತಿಗೆ ಮೊದಲ ಆದ್ಯತೆ –ಪ್ರಧಾನಿ

ದೀನ್‌ದಯಾಳ್ ಉಪಾಧ್ಯಾಯ ಪುಣ್ಯತಿಥಿ ಸಮಾರಂಭ – ಒಮ್ಮತ ನಿಲುವಿಗೆ ಒಲವು –ಪ್ರಧಾನಿ
Last Updated 11 ಫೆಬ್ರುವರಿ 2021, 12:19 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿಗೆ ರಾಜಕೀಯ ಅಸ್ಪೃಶ್ಯತೆಯ ಮೇಲೆ ನಂಬಿಕೆ ಇಲ್ಲ. ದೇಶವನ್ನು ಮುನ್ನಡೆಸುವುದರಲ್ಲಿ, ಆಡಳಿತ ನಡೆಸುವಲ್ಲಿ ಎಂದಿಗೂ ಒಮ್ಮತದ ನಿರ್ಧಾರವನ್ನು ಗೌರವಿಸಲಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

‘ಸರ್ಕಾರವನ್ನು ಬಹುಮತದ ಆಧಾರದಲ್ಲಿ ನಡೆಸಬಹುದು. ಆದರೆ, ದೇಶವನ್ನು ಒಮ್ಮತದ ನಿಲುವು ಆಧರಿಸಿಯೇ ನಡೆಸಬೇಕಾಗುತ್ತದೆ’ ಎಂದು ಹಿಂದೆ ಸಂಸತ್ತಿನಲ್ಲಿ ಹೇಳಿದ್ದ ಮಾತನ್ನೂ ಅವರು ಉಲ್ಲೇಖಿಸಿದರು.

ಜನಸಂಘದ ಸ್ಥಾಪಕ ದೀನದಯಾಳ್‌ ಉಪಾಧ್ಯಾಯ ಅವರ 53ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಕ್ಷವು ಎಂದಿಗೂ ರಾಜನೀತಿಗಿಂತಲೂ ರಾಷ್ಟ್ರನೀತಿಗೆ ಮೊದಲ ಆದ್ಯತೆ ನೀಡಲಿದೆ. ರಾಜಕೀಯ ವಿರೋಧಿಗಳನ್ನೂ ಗೌರವಿಸಲಿದೆ’ ಎಂದು ಹೇಳಿದರು.

ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಅವರಿಗೆ ‘ಭಾರತ ರತ್ನ’ ಗೌರವ ನೀಡಿತು. ಕಾಂಗ್ರೆಸ್ಸಿನವರೇ ಆಗಿರುವ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೋಗೊಯ್ ಮತ್ತು ನಾಗಲ್ಯಾಂಡ್‌ನ ಮಾಜಿ ಸಿ.ಎಂ ಎಸ್.ಸಿ.ಜಮೀರ್ ಅವರಿಗೆ ‘ಪದ್ಮ ಪ್ರಶಸ್ತಿ’ ನೀಡಿ ಗೌರವಿಸಿತ್ತು ಎಂದು ತಮ್ಮ ಮಾತಿಗೆ ಉದಾಹರಣೆ ನೀಡಿದರು.

ಅಲ್ಲದೆ, ಹೆಸರಾಂತ ನಾಯಕರಾಗಿದ್ದ ಸುಭಾಷ್ ಚಂದ್ರ ಬೋಸ್, ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೂ ತಮ್ಮ ಸರ್ಕಾರ ಗೌರವ ಸಲ್ಲಿಸಿದೆ ಎಂದೂ ಹೇಳಿದರು.

ಉಪಾಧ್ಯಾಯ ಅವರ ‘ಅಂತ್ಯೋದಯ’ ಯೋಜನೆ ಮತ್ತು ಅವರ ಮಾನವೀಯ ಚಿಂತನೆಗಳು, ಸರ್ಕಾರವು ಕೈಗೊಂಡಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಆರ್ಥಿಕತೆಗೆ ಉತ್ತೇಜನ ನೀಡುವ ಆತ್ಮನಿರ್ಭರ್ ಭಾರತ್ ಯೋಜನೆಗೆ ಪ್ರೇರೇಪಣೆ ಆಗಿವೆ. ಬಾಹ್ಯ ನೀತಿಗಳಲ್ಲಿಯೂ ಎಂದಿಗೂ ದೇಶ ಮೊದಲು ಚಿಂತನೆಗೇ ಒತ್ತು ನೀಡಲಾಗಿದೆ ಎಂದು ಪ್ರತಿಪಾದಿಸಿದರು.

ದೇಶ 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ ಬಿಜೆಪಿ ಘಟಕಗಳು ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದಂತೆ 75 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಪಕ್ಷದ ಸಂಸದರು ಮತ್ತು ನಾಯಕರು ತಾವು ನಿತ್ಯ ಬಳಸುವ ವಸ್ತುಗಳನ್ನು ಪಟ್ಟಿ ಮಾಡಬೇಕು. ಅದರಲ್ಲಿ ವಿದೇಶಿ ಮೂಲದ ವಸ್ತುಗಳಿದ್ದರೆ ಅದರ ಬದಲಾಗಿ ಭಾರತದ್ದೇ ಆದ ಪರ್ಯಾಯವನ್ನು ಬಳಸಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT