ಸೋಮವಾರ, ಅಕ್ಟೋಬರ್ 18, 2021
23 °C

ಪಂಜಾಬ್‌ ನೂತನ ಸಿಎಂ ಚನ್ನಿ ವಿರುದ್ಧ ಮೀಟೂ ಆರೋಪ: ‘ವೆಲ್ ಡನ್ ರಾಹುಲ್’ಎಂದ ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚಂಡೀಗಡ: ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ 2018ರಲ್ಲಿ ಐಎಎಸ್‌ ಮಹಿಳಾ ಅಧಿಕಾರಿ ಒಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೀಟೂ ಆರೋಪವಿದೆ.

ರಾಷ್ಟ್ರದಲ್ಲಿ ಮೀಟೂ ಅಭಿಯಾನ ಸದ್ದು ಮಾಡಿದ ಸಂದರ್ಭ ಚನ್ನಿ ಅವರ ಮೇಲೆ ಈ ಆರೋಪ ಕೇಳಿ ಬಂದಿತ್ತು. 'ಮಹಿಳೆ ದೂರು ನೀಡಿಲ್ಲ, ಪ್ರಕರಣ ಇತ್ಯರ್ಥವಾಗಿದೆ' ಎಂದು ಮಾಜಿ ಸಿಎಂ ಅಮರಿಂದರ್‌ ಸಿಂಗ್‌ ಸಮಜಾಯಿಷಿ ನೀಡಿದ್ದರು. ಆದರೆ, ಪಂಜಾಬ್‌ ಮಹಿಳಾ ಆಯೋಗವು ಈ ವರ್ಷ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಆರೋಪದ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಕಳುಹಿಸಿತ್ತು.

ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ತರಾಟೆಗೆ ತೆಗೆದುಕೊಂಡಿದ್ದಾರೆ, ‘ಕಾಂಗ್ರೆಸ್ ಪಕ್ಷವು ಪಂಜಾಬ್ ಸಿಎಂ ಆಗಿ ಆಯ್ಕೆ ಮಾಡಿರುವ ಚರಣ್‌ಜಿತ್ ಸಿಂಗ್ ಚನ್ನಿ ಅವರು 3 ವರ್ಷಗಳ ಹಿಂದಿನ ಮೀಟೂ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಮೇಲೆ 2018 ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪವಿದೆ. ಅದನ್ನು ಮುಚ್ಚಿಹಾಕುವ ಯತ್ನ ನಡೆದಿತ್ತು. ಆದರೆ, ಮಹಿಳಾ ಆಯೋಗವು ನೋಟಿಸ್ ಕಳುಹಿಸಿದ ಬಳಿಕ ಪ್ರಕರಣ ಮರುಜೀವ ಪಡೆದಿದೆ.. ವೆಲ್ ಡನ್ ರಾಹುಲ್’ ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.

ಚನ್ನಿ ವಿರುದ್ಧದ ಮೀಟೂ ಆರೋಪದ ಬಗ್ಗೆ ಪಂಜಾಬ್ ಸರ್ಕಾರವು ವಾರದೊಳಗೆ ತನ್ನ ನಿಲುವು ಪ್ರಕಟಿಸಬೇಕು. ಇಲ್ಲವಾದರೆ, ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಈ ವರ್ಷದ ಮೇ ತಿಂಗಳ ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಎಚ್ಚರಿಕೆ ನೀಡಿದ ಬಳಿಕ ಪ್ರಕರಣ ಮತ್ತೆ ಸುದ್ದಿಗೆ ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ವರದಿ ಕೋರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಅವರು ಹೇಳಿದ್ದರು.

2018ರಲ್ಲಿ ಕೇಳಿ ಬಂದ ಮೀಟೂ ಆರೋಪದ ಬಳಿಕ, ಪಂಜಾಬ್ ಮಹಿಳಾ ಆಯೋಗವು ಈ ವಿಷಯದ ಬಗ್ಗೆ ಸುಮೊಟೊ ಪ್ರಕರಣ ದಾಖಲಿಸಿಕೊಂಡಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು