ಶುಕ್ರವಾರ, ಮೇ 7, 2021
19 °C

ಪಶ್ಚಿಮಬಂಗಾಳ ಫಲಿತಾಂಶ: ಬಿಜೆಪಿಗೆ ಕೈಕೊಟ್ಟ ಟಿಎಂಸಿ ವಲಸಿಗರು, ಘಟಾನುಘಟಿ ನಾಯಕರು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸ್ಪಷ್ಟ ಬಹುಮತದತ್ತ ಸಾಗುವ ಖಚಿತ ಸುಳಿವು ನೀಡಿದೆ.

ಮಧ್ಯಾಹ್ನದ ವೇಳೆಗೆ ಟಿಎಂಸಿ 210 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿಯು ಕೇವಲ 28 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಓದಿ: 

ಪ್ರಮುಖ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜತೆಗೆ ಟಿಎಂಸಿಯಿಂದಲೇ ಘಟಾನುಘಟಿ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಚುನಾವಣೆ ಎದುರಿಸಿದರೂ ಯಶಸ್ಸು ಕಾಣುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ;

ರಾಜೀವ್ ಬ್ಯಾನರ್ಜಿ

ಟಿಎಂಸಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಇವರು ಜನವರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2011 ಮತ್ತು 2016ರಲ್ಲಿ ಡೊಮ್‌ಜುರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು ಹೌರಾ ಜಿಲ್ಲೆಯಲ್ಲಿ ಪಕ್ಷದ ಉಸ್ತುವಾರಿಯಾಗಿದ್ದರು. ಬಿಜೆಪಿ ಸೇರಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಪ್ರತಿಸ್ಪರ್ಧಿ ಟಿಎಂಸಿಯ ಕಲ್ಯಾಣ್ ಘೋಷ್ ವಿರುದ್ಧ 4000 ಮತಗಳ ಹಿನ್ನಡೆಯಲ್ಲಿದ್ದಾರೆ.

ರತಿನ್ ಚಕ್ರವರ್ತಿ

ಹೌರಾದ ಮಾಜಿ ಮೇಯರ್, ಬಿಜೆಪಿ ಸೇರಿರುವ ರತಿನ್ ಚಕ್ರವರ್ತಿ ಟಿಎಂಸಿಯ ಮನೋಜ್ ತಿವಾರಿ ವಿರುದ್ಧ ಶಿವಪುರ ಕ್ಷೇತ್ರದಲ್ಲಿ 6000 ಮತಗಳ ಹಿನ್ನಡೆ ಕಂಡಿದ್ದಾರೆ.

ವೈಶಾಲಿ ದಾಲ್ಮಿಯ

ಬಾಲಿ ವಿಧಾನಸಭಾ ಕ್ಷೇತ್ರದ ಮಾಜಿ ಟಿಎಂಸಿ ಶಾಸಕಿ, ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಪುತ್ರಿ ವೈಶಾಲಿ ದಾಲ್ಮಿಯ ಅವರು ಟಿಎಂಸಿಯಿಂದ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಚಾಟನೆಗೊಂಡಿದ್ದರು. ಬಳಿಕ ಬಿಜೆಪಿ ಸೇರಿದ್ದ ಅವರಿಗೆ ಬಾಲಿ ಕ್ಷೇತ್ರದಿಂದಲೇ ಟಿಕೆಟ್ ದೊರೆತಿತ್ತು. 5ನೇ ಸುತ್ತಿನ ಮತ ಎಣಿಕೆ ಮುಗಿದಾಗ ಅವರು 7000 ಮತಗಳ ಅಂತರದಿಂದ ಹಿನ್ನಡೆ ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಇವರ ಪ್ರತಿಸ್ಪರ್ಧಿಯಾಗಿ ಟಿಎಂಸಿ ರಾಣ ಚಟರ್ಜಿ ಕಣದಲ್ಲಿದ್ದಾರೆ.

ಪ್ರಬೀರ್ ಕುಮಾರ್ ಘೋಷಾಲ್ಟಿ

ಎಂಸಿ ತೊರೆದು ಬಿಜೆಪಿ ಸೇರಿರುವ ಮಾಜಿ ಶಾಸಕ ಪ್ರಬೀರ್ ಕುಮಾರ್ ಘೋಷಾಲ್ ಅವರು ಉತ್ತರ್‌ಪರಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಕಾಂಚನ್ ಮಲಿಕ್ ವಿರುದ್ಧ ಹಿನ್ನಡೆ ಅನುಭವಿಸುತ್ತಿದ್ದಾರೆ.

ರುದ್ರಾನಿಲ್‌ ಘೋಷ್

ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ರುದ್ರಾನಿಲ್‌ ಘೋಷ್ ಸಹ ಟಿಎಂಸಿ ಅಭ್ಯರ್ಥಿ ಶೋಭಾನ್‌ದೇವ್ ಚಟ್ಟೋಪಾಧ್ಯಾಯ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮತಗಳ ಹಿನ್ನಡೆ ಕಂಡಿದ್ದಾರೆ.

ಬಿಜೆಪಿ ನಾಯಕರಿಗೂ ಹಿನ್ನಡೆ

ಟಿಎಂಸಿ ವಲಸಿಗರು ಮಾತ್ರವಲ್ಲದೇ ಬಿಜೆಪಿಯ ಘಟಾನುಘಟಿ ನಾಯಕರೇ ಹಿನ್ನಡೆ ಅನುಭವಿಸಿದ್ದಾರೆ.

ಬಿಜೆಪಿ ಎಂಪಿ ಬಾಬುಲ್ ಸುಪ್ರಿಯೊ ಟಿಎಂಸಿಯ ಪ್ರಮುಖ ನಾಯಕ, ಪಿಡಬ್ಲ್ಯುಡಿ ಸಚಿವ ಅರೂಪ್‌ ಬಿಸ್ವಾಸ್ ವಿರುದ್ಧ ಟಾಲಿಗುಂಜೆ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ 4000 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಓದಿ: 

ತಾರಕೇಶ್ವರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿಯ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್‌ಗುಪ್ತಾಗೆ ಟಿಎಂಸಿಯ ರಮೇಂದು ಸಿನ್ಹಾರೇ ವಿರುದ್ಧ 1900ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆಯಾಗಿದೆ. ಸ್ವಪನ್ ದಾಸ್‌ಗುಪ್ತಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಟಿವಿ ನಟ ಲಾಕೆಟ್ ಚಟರ್ಜಿ ಅರಿಗೂ ಚುಂಚುರಾ ಕ್ಷೇತ್ರದಲ್ಲಿ ಟಿಎಂಸಿಯ ಅಸೀತ್ ಮಜುಂದಾರ್ ವಿರುದ್ಧ 1500ಕ್ಕೂ ಹೆಚ್ಚು ಮತಗಳ ಹಿನ್ನಡೆಯಾಗಿದೆ.

ಬಂಗಾಳಿ ನಟ ಶ್ರಬಂತಿ ಚಟರ್ಜಿ ಅವರನ್ನು ಬಿಜೆಪಿಯು ಬೆಹಾಲ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಶಿಕ್ಷಣ ಸಚಿವ ಪಾರ್ಥ ಚಟರ್ಜಿ ವಿರುದ್ಧ ಕಣಕ್ಕಿಳಿದಿರುವ ಶ್ರಬಂತಿಗೆ 2000ಕ್ಕೂ ಹೆಚ್ಚು ಮತಗಳ ಹಿನ್ನಡೆಯಾಗಿದೆ.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು