ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿಬಾರ್ ಬಿಜೆಪಿಗೆ ಮುಳುವಾಗುವ ಸಾಧ್ಯತೆ: ತಜ್ಞರು ವಿಶ್ಲೇಷಣೆ

Last Updated 11 ಏಪ್ರಿಲ್ 2021, 19:42 IST
ಅಕ್ಷರ ಗಾತ್ರ

ಡಾರ್ಜಿಲಿಂಗ್: ಕೂಚ್‌ ಬಿಹಾರ್‌ನ ಜೋರೆಪಟ್ಕಿ ಗೋಲಿಬಾರ್ ಹತ್ಯೆಯು, ಈ ಪ್ರದೇಶದಲ್ಲಿ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಬಿಜೆಪಿ ತನ್ನ ನೆಲೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಜೋರೆಪಟ್ಕಿ ಗೋಲಿಬಾರ್‌ನಲ್ಲಿ ಮೃತಪಟ್ಟವರು ಗೂರ್ಖಾ ಸಮುದಾಯದವರು ಎನ್ನಲಾಗಿದೆ. ಪಶ್ಚಿಮ ಬಂಗಾಳದ ಉತ್ತರದ ಜಿಲ್ಲೆಗಳಲ್ಲಿ ಗೂರ್ಖಾ ಜನರ ಪ್ರಾಬಲ್ಯ
ವಿದೆ. ಈ ಜಿಲ್ಲೆಗಳಲ್ಲಿ ಇನ್ನೂ ಮತದಾನ ನಡೆಯಬೇಕಿದೆ. ಶನಿವಾರ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆದಿದೆ. ಉಳಿದ ಕ್ಷೇತ್ರಗಳಲ್ಲಿ ಗೂರ್ಖಾ ಜನರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಅಲ್ಲೆಲ್ಲಾ ಬಿಜೆಪಿ ವಿರುದ್ಧ ಮತ ಚಲಾವಣೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಗೂರ್ಖಾ ಜನಮುಕ್ತಿ ಮೋರ್ಚಾದ ಒಂದು ಬಣದ ಅಧ್ಯಕ್ಷ ವಿಮಲ್ ಗುರುಂಗ್ ಅವರು ಈಗ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. 2017ರಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್ ಹೋರಾಟದ ಹತ್ಯಾಕಾಂಡದಲ್ಲಿ ನೂರಾರು ಜನರು ಮೃತಪಟ್ಟಿದ್ದರು.

ಟಿಎಂಸಿ ಈ ಹತ್ಯಾಕಾಂಡ ನಡೆಸಿದೆ ಎಂದು ಆರೋಪಿಸಿ ಗೂರ್ಖಾ ಜನಮುಕ್ತಿ ಮೋರ್ಚಾವು, ಆಗ ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲ ನೀಡಿ ಎನ್‌ಡಿಎ ಸೇರಿತ್ತು. ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಮಲ್ ಗುರುಂಗ್ ಮೇಲೆ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಅವರು ತಲೆಮರೆಸಿಕೊಂಡಿದ್ದರು. ಗುರುಂಗ್ ಅವರು ತಲೆಮರೆಸಿಕೊಂಡಿದ್ದರೂ, 2019ರ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಕರೆ ನೀಡಿದ್ದರು. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಗೂರ್ಖಾ ಪ್ರಾಬಲ್ಯವಿರುವ 8 ಲೋಕಸಭಾ ಕ್ಷೇತ್ರಗಳಲ್ಲಿ, 7ರಲ್ಲಿ ಬಿಜೆಪಿ ಜಯಗಳಿಸಿತ್ತು.

‘2019ರಲ್ಲಿ ಗೂರ್ಖಾ ಪ್ರಾಬಲ್ಯದ ಪ್ರದೇಶದ 8 ಕ್ಷೇತ್ರಗಳಲ್ಲೂ ಟಿಎಂಸಿ ಸೋಲುಂಡಿತ್ತು. ಈಗ ಬಿಜೆಪಿಗೂ ಅದೇ ಗತಿ ಆಗಲಿದೆ. ಈ ಪ್ರದೇಶದಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆಯುತ್ತೇವೆ’ ಎಂದು ವಿಮಲ್ ಗುರುಂಗ್ ಹೇಳಿದ್ದಾರೆ. ಗೂರ್ಖಾ ಪ್ರಾಬಲ್ಯದ 15 ಕ್ಷೇತ್ರಗಳಲ್ಲಿ ವಿಮಲ್ ಅವರ ನೇರ ಹಿಡಿತವಿದೆ.

‘ಪ್ರತ್ಯೇಕ ಗೂರ್ಖಾಲ್ಯಾಂಡ್‌ ನೀಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ನಾವು ಬಿಜೆಪಿಗೆ ಬೆಂಬಲ ನೀಡಿದ್ದೆವು. ಬಿಜೆಪಿ ತನ್ನ ಮಾತು ಉಳಿಸಿಕೊಳ್ಳದೆ, ನಮ್ಮನ್ನು ವಂಚಿಸಿತು. ಆದರೆ ನಮ್ಮ ಸಮಸ್ಯೆಗೆ ಶಾಶ್ವತ ರಾಜಕೀಯ ಪರಿಹಾರ ಒದಗಿಸುವುದಾಗಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಹೀಗಾಗಿ ಟಿಎಂಸಿಗೆ ಬೆಂಬಲ ನೀಡುತ್ತೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT