ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ–ಪೂರ್ವ ಘಟ್ಟ ಸಂರಕ್ಷಣೆ: ಕೇಂದ್ರ ಸರ್ಕಾರಕ್ಕೆ ನೋಟಿಸ್

Last Updated 21 ಮೇ 2021, 17:52 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕಸ್ತೂರಿರಂಗನ್ ಹಾಗೂ ಮಾಧವ್ ಗಾಡ್ಗಿಳ್‌ ನೇತೃತ್ವದ ಸಮಿತಿಗಳ ಶಿಫಾರಸಿನ ಅನ್ವಯ ಶಾಶ್ವತ ಕ್ರಮಕ್ಕೆ ಸೂಚಿಸುವಂತೆ ಕೋರಿ ವಕೀಲ ಕೆ.ಎಸ್‌. ರಾಧಾಕೃಷ್ಣನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ ಈ ನೋಟಿಸ್‌ ನೀಡಿದೆ.

ಸಂಬಂಧಿಸಿದ ಸರ್ಕಾರಗಳು ಅರಣ್ಯ ಸಂಪತ್ತಿನ ಸಂರಕ್ಷಣೆ ಹಾಗೂ ಜಲಮೂಲಗಳ ಅತಿಕ್ರಮಣ ತಡೆಗಟ್ಟಲು ಕೈಗೊಳ್ಳಲಾದ ಪರಿಣಾಮಕಾರಿ ಯೋಜನೆಗಳ ಕುರಿತ ವರದಿಯನ್ನು ಹಸಿರು ಪೀಠಕ್ಕೆ ಸಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ತಮಿಳುನಾಡಿನ ವ್ಯಾಪ್ತಿಯಲ್ಲಿರುವ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿರುವ ಮೀಸಲು ಅರಣ್ಯ ಪ್ರದೇಶಗಳನ್ನು ತಮಿಳುನಾಡು ಅರಣ್ಯ ಕಾಯ್ದೆ–1882 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972 ಅಡಿ ಸಂರಕ್ಷಿಸಲಾಗಿದೆ. ತಮಿಳುನಾಡು ಬೆಟ್ಟಗುಡ್ಡ ಪ್ರದೇಶಗಳ (ಮರಗಳ ಸಂರಕ್ಷಣೆ) ಕಾಯ್ದೆ–1955 ಜಾರಿಯಲ್ಲಿದ್ದರೂ ಉಲ್ಲಂಘನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

ಖಾಸಗಿ ಹಿಡುವಳಿಗಳಲ್ಲಿ ಮರಗಳ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಕಾನೂನಿನಲ್ಲಿರುವ ಕೆಲವು ಲೋಪ ದೋಷಗಳ ಲಾಭ ಪಡೆಯುವ ಮೂಲಕ, ಶ್ರೀಗಂಧದಂತಹ ಅಮೂಲ್ಯ ಮರಗಳನ್ನು ಕಡಿದು ರಹಸ್ಯವಾಗಿ ಸಾಗಿಸಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಕೆಲವೆಡೆ ಪ್ರಾಣಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳಿಂದಾಗಿ ಪೂರ್ವ ಘಟ್ಟದ ಬೆಟ್ಟಗಳು ಬಂಜರಾಗಿವೆ. ಅಲ್ಲಿನ ನದಿ, ತೊರೆಗಳು ಒಣಗಿದ್ದು, ಜೀವವೈವಿಧ್ಯವು ಕ್ರಮೇಣ ಕಣ್ಮರೆಯಾಗುತ್ತಿದೆ ಎಂದೂ ಆರೋಪಿಸಲಾಗಿದೆ.

ಪರಿಸರ ಅಸಮತೋಲನಕ್ಕೆ ಕಾರಣವಾದ ಅಕ್ರಮಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಕಸ್ತೂರಿರಂಗನ್‌ ಹಾಗೂ ಗಾಡ್ಗಿಳ್‌ ಸಮಿತಿಗಳು ಸಲ್ಲಿಸಿರುವ ವರದಿಯ ಶಿಫಾರಸಿನ ಅನ್ವಯ ಪ್ರತ್ಯೇಕ, ಶಾಶ್ವತ ಕ್ರಮ ಕೈಗೊಳ್ಳುವಂತೆ ಕೇಂದ್ರ, ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಘಟ್ಟಗಳ ವ್ಯಾಪ್ತಿ ಒಳ ಗೊಂಡಿರುವ ಆಯಾ ರಾಜ್ಯ ಸರ್ಕಾರ ಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದಲೂ ಪ್ರತಿಕ್ರಿಯೆ ಕೋರಿ ನ್ಯಾಯಪೀಠವು ನೋಟಿಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT