ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ದಿವಸ್ ಎಂದರೇನು? ಏಕೆ ಆಚರಿಸುತ್ತಾರೆ?

Last Updated 14 ಸೆಪ್ಟೆಂಬರ್ 2020, 15:32 IST
ಅಕ್ಷರ ಗಾತ್ರ

ಸೆಪ್ಟೆಂಬರ್ 14ಹಿಂದಿ ದಿವಸ್‌. ಹಿಂದಿ ದಿನಾಚರಣೆಯ ಪರ-ವಿರೋಧದ ಚರ್ಚೆಗಳು ಕರ್ನಾಟಕದಲ್ಲಿ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಹಿಂದಿ ದಿವಸ್ ಆರಂಭವಾದ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

---

ಕೇಂದ್ರ ಸರ್ಕಾರ ರಾಷ್ಟ್ರದ ಎಲ್ಲಾ ಕಡೆ ಆಚರಣೆ ಮಾಡುವಂತಹ ಕಾರ್ಯಕ್ರಮ ಹಿಂದಿ ದಿವಸ್.ನಾವೆಲ್ಲರೂ ಭಾರತೀಯರು, ಭಾರತೀಯರೆಲ್ಲಾ ಒಂದೇ, ನಮಗೆಲ್ಲಾ ಒಂದೇ ಕಾನೂನು, ಒಂದೇ ಆಡಳಿತ ಇರುವಂತೆಯೇ ಒಂದೇ ಭಾಷೆಯನ್ನು ಎಲ್ಲರೂ ಮಾತನಾಡುವಂತಿರಬೇಕು. ಅದು ಹಿಂದಿಯೇ ಆಗಿರಬೇಕು ಎಂದು 1940ರ ದಶಕದಲ್ಲಿ ಬಹಳ ಹೋರಾಟಗಳು ನಡೆದವು. ಆ ಹೋರಾಟ ಭಾರತದ ಸಂಸತ್ತಿನಲ್ಲಿ ಬಹಳ ಸಮಯ ಚರ್ಚೆಗೆ ಒಳಪಟ್ಟಿತ್ತು.

ಪರಿಣಾಮ 1949ರ ಸೆಪ್ಟೆಂಬರ್ 14ರಂದು ರಾಷ್ಟ್ರದ ಅಧಿಕೃತ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಘೋಷಿಸಲಾಯಿತು. ಅದರಂತೆ ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 343ರ ಪ್ರಕಾರ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಅಳವಡಿಸಿಕೊಳ್ಳಲಾಯಿತು. ಮೂಲ ದೇವನಾಗರಿ ಲಿಪಿಯಲ್ಲಿ ರಚಿತವಾಗಿರುವ ಹಿಂದಿಯೇ ಸದ್ಯದ ಕೇಂದ್ರದ ಆಡಳಿತ ಭಾಷೆ. ಆಗ ಹಿಂದಿ ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕು ಎಂಬ ಹೋರಾಟವನ್ನು ಹುಟ್ಟು ಹಾಕಿದವರಲ್ಲಿ ಬೋಹರ್ ರಾಜೇಂದ್ರ ಸಿಂಹ, ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಲೇಲ್ಕರ್, ಮೈಥಿಲಿ ಶರಣ ಗುಪ್ತ ಮತ್ತು ಸೇಠ್ ಗೋವಿಂದ ದಾಸ್ ಪ್ರಮುಖರು. ಇವರು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕೆಂದು ಸಂಸತ್ತಿನ ಹೊರಗೆ, ಒಳಗೆ ಹೋರಾಟ ಮಾಡಿದರು.

ಹಿಂದಿ ಅತಿ ಹೆಚ್ಚು ಮಾತನಾಡುವ ವಿಶ್ವದ ನಾಲ್ಕನೇ ಭಾಷೆಯಾಗಿದೆ. ವಿಶ್ವದಲ್ಲಿ 25 ಕೋಟಿಗೂ ಹೆಚ್ಚು ಮಂದಿ ಮಾತನಾಡುವುದರಿಂದ ಇದೇ ಭಾಷೆಯನ್ನು ರಾಷ್ಟ್ರದ ಎಲ್ಲಾ ಜನರು ಮಾತನಾಡಬೇಕು, ಆ ಮೂಲಕ ರಾಷ್ಟ್ರದ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಬೇಕೆಂಬುದು ಹಿಂದಿ ಭಾಷಾ ಪ್ರಿಯರ ಒತ್ತಾಯವಾಗಿತ್ತು.

ಆದರೆ, ಇದು ಅಷ್ಟು ಸುಲಭದ ಮಾತಲ್ಲ. ನಾವೆಲ್ಲರೂ ಸೇರಿ ಒಂದು ಎಂಬ ಭಾವನೆ ಇರಬೇಕು ನಿಜ, ಆದರೆ, ಭಾರತ ಎಂದರೆ ಹಲವು ಭಾಷೆ, ಹಲವು ಸಂಸ್ಕೃತಿಗಳನ್ನು ಒಳಗೊಂಡ ರಾಷ್ಟ್ರ. ರಾಷ್ಟ್ರದ ಭಾಷೆ ಒಂದೇ ಆಗಿರಬೇಕು ಎಂದು ಆದೇಶ ಹೊರಡಿಸುವುದು ಕಷ್ಟ ಎಂದು ರಾಷ್ಟ್ರದ ಬಹುತೇಕ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು.

ಈ ನಡುವೆಯೇ ಸೆಪ್ಟೆಂಬರ್ 14, 1949ರಂದು ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸಿ ಆದೇಶ ಹೊರಡಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖರು ಬೋಹರ್ ರಾಜೇಂದ್ರ ಸಿಂಹ. ಹಿಂದಿ ಹೋರಾಟಗಾರರು ಸೆಪ್ಟೆಂಬರ್ 14, 1949ರಲ್ಲಿ ಇವರ 50ನೇ ಹುಟ್ಟುಹಬ್ಬವನ್ನು ಆಚರಿಸಿದರು. ಇವರ ಹೋರಾಟದ ಫಲವೇ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಸ್ವೀಕರಿಸಲು ಕಾರಣ. ಅದೇ ಕಾರಣಕ್ಕಾಗಿ ಇವರ ಜ್ಞಾಪಕಾರ್ಥವಾಗಿ ಸೆಪ್ಟೆಂಬರ್ 14 ಅನ್ನು 'ಹಿಂದಿ ದಿವಸ್' ಆಚರಣೆ ಮಾಡಬೇಕೆಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ಸರ್ಕಾರ ಆದೇಶ ಹೊರಡಿಸಿ ಜಾರಿಗೆ ತಂದಿತು. ಅಂದಿನಿಂದ ಸೆಪ್ಟೆಂಬರ್ 14 ಅನ್ನು 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿದೆ.

ಎರಡು ಭಾಷೆಗಳನ್ನು ಕೇಂದ್ರ ಸರ್ಕಾರ ಆಡಳಿತ ಭಾಷೆಯನ್ನಾಗಿ ಬಳಸಲಾಗುತ್ತಿದೆ. ಮೊದಲನೇ ಭಾಷೆ ಹಿಂದಿಯನ್ನು, ಎರಡನೇ ಭಾಷೆಯನ್ನಾಗಿ ಇಂಗ್ಲೀಷ್ ಅನ್ನು ಬಳಸಲಾಗುತ್ತಿದೆ.

ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ರಾಷ್ಟ್ರದಾದ್ಯಂತ ಉತ್ತೇಜಿಸಲು 1986ರಿಂದ ಎರಡು ಪ್ರಮುಖ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ. ಪ್ರತಿ ವರ್ಷವೂ ಕೇಂದ್ರ ಸರ್ಕಾರದ ಇಲಾಖೆಗಳು, ರಾಷ್ಟ್ರೀಕೃತ ಬ್ಯಾಂಕ್‌‌ಗಳು ಒಳಗೊಂಡಂತೆ ಸಾಧನೆ ತೋರಿದ ಇಬ್ಬರಿಗೆ 'ಇಂದಿರಾಗಾಂಧಿ ರಾಜ ಭಾಷಾ ಪುರಸ್ಕಾರ' ಹಾಗೂ 'ರಾಜೀವ್ ಗಾಂಧಿ ಜ್ಞಾನ-ವಿಜ್ಞಾನ ಮೌಲಿಕ ಲೇಖನ್ ಪುರಸ್ಕಾರ'ಗಳನ್ನು ಕೇಂದ್ರ ಸರ್ಕಾರ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ಪುರಸ್ಕಾರಗಳ ಹೆಸರನ್ನು 2015ರಿಂದ ಬದಲಾಯಿಸಲಾಗಿದೆ. ಇಂದಿರಾಗಾಂಧಿ ರಾಜಭಾಷಾ ಪುರಸ್ಕಾರ ಪ್ರಶಸ್ತಿಯ ಹೆಸರನ್ನು 'ರಾಜಭಾಷಾ ಕೀರ್ತಿ ಪುರಸ್ಕಾರ' ಮತ್ತು ರಾಜೀವ್ ಗಾಂಧಿ ಜ್ಞಾನ- ವಿಜ್ಞಾನ ಮೌಲಿಕ ಪುಸ್ತಕ ಲೇಖನ ಪುರಸ್ಕಾರದ ಹೆಸರನ್ನು 'ರಾಜಭಾಷಾ ಗೌರವ್ ಪುರಸ್ಕಾರ' ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT