ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಹೊಂದಿರುವವನು ಯೋಗಿ ಆಗಲು ಹೇಗೆ ಸಾಧ್ಯ: ರಾಹುಲ್ ಗಾಂಧಿ ಕಿಡಿ

Last Updated 14 ಸೆಪ್ಟೆಂಬರ್ 2021, 16:44 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಂ ಸಮುದಾಯ ಹಾಗೂ ಸಮಾಜವಾದಿ ಪಕ್ಷವನ್ನು (ಎಸ್‌ಪಿ) ಉದ್ದೇಶಿಸಿ ‘ಅಬ್ಬಾ ಜಾನ್ ಎಂದು ಕರೆಯಲಾಗುವ ಈ ಜನರು’ ಎಂದು ವಾಗ್ದಾಳಿ ನಡೆಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. 'ದ್ವೇಷ ಹೊಂದಿರುವವನು ಯೋಗಿ ಆಗಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ್ದಾರೆ.

'ಕ್ರಿಮಿನಲ್‌ಗಳು ಮತ್ತು ದುಷ್ಕರ್ಮಿಗಳ ಸಾಮ್ರಾಜ್ಯವನ್ನು ಕೆಡವುವುದು ದ್ವೇಷ ಎಂದೆನಿಸಿಕೊಂಡರೆ, ಈ ದ್ವೇಷವು ನಿರಂತರವಾಗಿ ಮುಂದುವರಿಯುತ್ತದೆ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಕಚೇರಿ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 'ಜೋ ನಫ್ರತ್ ಕರೇ, ವೊ ಯೋಗಿ ಕೈಸಾ! (ದ್ವೇಷವನ್ನು ಹೊಂದಿರುವವನು ಯೋಗಿ ಹೇಗಾಗುತ್ತಾನೆ)' ಎಂದಿದ್ದಾರೆ.

ಭಾನುವಾರ ಕುಶಿನಗರದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, '2017ಕ್ಕೂ ಮುನ್ನ ಈಗಿನಂತೆ ಜನರಿಗೆ ಪಡಿತರ ಸಿಗುತ್ತಿರಲಿಲ್ಲ. ಏಕೆಂದರೆ, ಆಗ ‘ಅಬ್ಬಾ ಜಾನ್ ಎಂದು ಕರೆಯಲಾಗುವ ಈ ಜನರು’ ಪಡಿತರವನ್ನು ಜೀರ್ಣಿಸಿಕೊಳ್ಳುತ್ತಿದ್ದರು. ಕುಶಿನಗರದಲ್ಲಿ ನೀಡಲಾಗುತ್ತಿದ್ದ ಪಡಿತರಗಳು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಹೋಗುತ್ತಿದ್ದವು. ಇಂದು ಯಾರಾದರೂ ಬಡ ಜನರಿಗೆ ನೀಡಲಾಗುವ ಪಡಿತರವನ್ನು ನುಂಗಲು ಪ್ರಯತ್ನಿಸಿದರೆ, ಅಂಥವರು ಜೈಲಿನಲ್ಲಿ ಇರುತ್ತಾರೆ' ಮುಖ್ಯಮಂತ್ರಿ ಯೋಗಿ ಹೇಳಿದ್ದರು.

'ಅಬ್ಬಾ ಜಾನ್' ಎಂದರೆ ಉರ್ದು ಶಬ್ದವಾಗಿದ್ದು, ತಂದೆ ಎಂದರ್ಥ.

ಫೇಸ್‌ಬುಕ್ ಪೋಸ್ಟ್‌ ಮಾಡಿರುವ ರಾಹುಲ್ ಗಾಂಧಿ, ಒಂದು ವರ್ಷದ ಹಿಂದೆ ನಡೆದ ಭಯಾನಕ ಹಾಥರಸ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 'ನ್ಯಾಯಕ್ಕಾಗಿ ಕಾಯುವಿಕೆ ಮುಂದುವರಿದಿದೆ. ಹಾಥರಸ್‌ನ ಯುವತಿ, ಈ ದೇಶದ ಮಗಳು' ಎಂದಿದ್ದಾರೆ.

ಭಯಾನಕ ಹಾಥರಸ್‌ ಘಟನೆ ಒಂದು ವರ್ಷದ ಹಿಂದೆ ನಡೆದಿದ್ದು, ದಲಿತ ಯುವತಿ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT