ಮಂಗಳವಾರ, ನವೆಂಬರ್ 24, 2020
25 °C
ಬಹುತ್ವ ಭಾರತ

PV Web Exclusive | ’ನನ್ನ ಸೌಹಾರ್ದ ಭಾರತವನ್ನು ಆಕ್ಷೇಪಿಸುವ ನೀವು ಯಾರು?'

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ತನಿಷ್ಕ್‌ ತನ್ನ ಏಕತ್ವಂ ಅಭಿಯಾನದ ಆಭರಣ ಜಾಹೀರಾತನ್ನು ವಾಪಸು ಪಡೆದ ಬಳಿಕ  ವಿಡಿಯೊವೊಂದರಲ್ಲಿ ಕಾಣಿಸಿಕೊಂಡ ಲೇಖಕಿ ಸಮೀನಾ ದಳವಾಯಿ ತಮ್ಮ 'ವಿಶ್ವಕುಟುಂಬ’ವನ್ನು ಪರಿಚಯಿಸುತ್ತಲೇ ಕೋಮುಗಳ ನಡುವೆ ಇರಬೇಕಾದ ಸಹನೆ ಮತ್ತು ಸೌಹಾರ್ದದ ಅಗತ್ಯವನ್ನು ಒತ್ತಿ ಹೇಳಿದರು. ಅವರ ವಿಡಿಯೊದ ಅಕ್ಷರ ರೂಪ ಇಲ್ಲಿದೆ.

---

'ನೀವು ಮುಸ್ಲಿಮರನ್ನು ಆಕ್ಷೇಪಿಸುತ್ತಿದ್ದೀರಾ? ನಿಮ್ಮದೇ ಹೆಣ್ಣು ಮಕ್ಕಳ ಆಯ್ಕೆಗಳ ಬಗ್ಗೆ ಆಕ್ಷೇಪಿಸುತ್ತಿದ್ದೀರಾ? ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವಿಶ್ವಾತ್ಮಕವಾದ ಸಮ್ಮಿಶ್ರ ಸಂಸ್ಕೃತಿಯ ಸುಂದರ ಭಾರತವನ್ನು ಆಕ್ಷೇಪಿಸುತ್ತಿದ್ದೀರಾ? ನೀವು ಯಾರು? ಯಾಕೆ ಆಕ್ಷೇಪಿಸುತ್ತೀರಿ? ಯಾಕೆ ನಿಮಗೆ ಅಷ್ಟೊಂದು ಅಸಹನೆ?'

-ಬ್ರಾಹ್ಮಣ ತಾಯಿ ಮತ್ತು ಮುಸ್ಲಿಂ ತಂದೆಯ ಪುತ್ರಿಯೂ ಆಗಿರುವ ಮುಂಬೈ ಮೂಲದ ಸಮೀನ ದಳವಾಯಿ ಎಂಬ ಹೆಣ್ಣು ಮಗಳೊಬ್ಬಳ ತಣ್ಣನೆಯ ವಿಷಾದದ, ಪ್ರತಿರೋಧದ ನುಡಿಗಳಿವು.

ತನಿಷ್ಕ್‌ ತನ್ನ 'ಏಕತ್ವಂ' ಅಭಿಯಾನದ ಆಭರಣ ಜಾಹೀರಾತನ್ನು, ವಿರೋಧಗಳ ನಡುವೆ ಅ.13ರಂದು ವಾಪಸು ಪಡೆದ ಎರಡೇ ದಿನಕ್ಕೆ ‘ದಿ ಕ್ವಿಂಟ್‌’ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಅವರು ತಮ್ಮ ’ವಿಶ್ವಕುಟುಂಬ’ವನ್ನು ಪರಿಚಯಿಸುತ್ತಲೇ ಕೋಮುಗಳ ನಡುವೆ ಇರಬೇಕಾದ ಸಹನೆ ಮತ್ತು ಸೌಹಾರ್ದದ ಅಗತ್ಯವನ್ನು ಒತ್ತಿ ಹೇಳುತ್ತಾರೆ.

ಇದನ್ನೂ ಓದಿ: ಮುಸ್ಲಿಂ ಕುಟುಂಬದ ಹಿಂದೂ ಸೊಸೆಗೆ ಸೀಮಂತವಿಲ್ಲ


ಸಮೀನಾ ದಳವಾಯಿ

ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿಯಲ್ಲಿ ಕಾನೂನು ಪಾಠ ಮಾಡುವ, ಅಂಕಣಕಾರ್ತಿಯೂ ಆಗಿರುವ ಆಕೆ ತನ್ನ ಸಮಾಜವಾದಿ ಕುಟುಂಬ ಕ್ರಮೇಣ ವಿಶ್ವಕುಟುಂಬವಾಗಿ ಬೆಳೆದು ಬಂದದ್ದರ ಕತೆಯೂ ವೀಡಿಯೋದಲ್ಲಿದೆ. ಈ ವೀಡಿಯೋ ಕೂಡ ಜಾಹೀರಾತಿನಂತೆಯೇ ವೈರಲ್‌ ಆಗಿದೆ.

ವೀಡಿಯೋದಲ್ಲಿ ಅವರ ಮಾತುಗಳು ಹೀಗಿವೆ...

‘‘...ಹಲವು ಭಾಷೆ, ಜಾತಿ, ಧರ್ಮ, ಜನಾಂಗದ ಮಕ್ಕಳಿರುವ ನಮ್ಮ ಕುಟುಂಬ ಒಂದು ಪರ್ಯಾಯ ಜಗತ್ತನ್ನೇ ಸೃಷ್ಟಿಸಿಕೊಂಡಿದೆ. ಮದುವೆಯಾದ ಬಳಿಕವೂ ನನ್ನ ತಾಯಿ ಹಿಂದೂವಾಗಿಯೇ ಉಳಿದಿದ್ದರು. ಅವರೇನೂ ಕಟ್ಟಾ ಸಂಪ್ರದಾಯವಾದಿಯಾಗಿರಲಿಲ್ಲ. ಮುಸ್ಲಿಮರೊಬ್ಬರನ್ನು ಮದುವೆಯಾಗಿದ್ದರೂ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲಿಲ್ಲ ಎಂಬುದನ್ನು ತೋರಿಸುವ ಸಲುವಾಗಿಯೇ ಅವರು ಹಣೆಗೆ ಬಿಂದಿ ಧರಿಸಲು ಆರಂಭಿಸಿದರು. ನಾವು ಮರಾಠಿ, ಹಿಂದಿ, ಕೊಂಕಣಿಯನ್ನು ಮಾತನಾಡುತ್ತಿದ್ದೆವು. ನಿಧಾನವಾಗಿ ಇಂಗ್ಲಿಷ್‌ ಕಲಿತೆವು. ನಾವು ಹಿಂದೂಗಳೂ ಹೌದು, ಮುಸ್ಲಿಮರೂ ಹೌದು.

ನಾವು ಈದ್‌ ಆಚರಿಸಿದ ಸಂಭ್ರಮದಲ್ಲೇ ದೀಪಾವಳಿಯಲ್ಲೂ ಪಾಲ್ಗೊಳ್ಳುತ್ತೇವೆ. ಕ್ರಿಸ್‌ಮಸ್‌ ಆಚರಿಸುತ್ತೇವೆ. ಹೊಸ ವರ್ಷವನ್ನೂ ಸ್ವಾಗತಿಸುತ್ತೇವೆ. ಅಂಬೇಡ್ಕರ್‌ ಜಯಂತಿ, ಲೆನಿನ್‌ ಜಯಂತಿಯನ್ನೂ ಆಚರಿಸುತ್ತೇವೆ. ಇವೆಲ್ಲವೂ ನಮ್ಮ ಹಬ್ಬಗಳ ಆಚರಣೆಯ ಭಾಗವೇ ಆಗಿವೆ.

ವೈವಿಧ್ಯತೆಯಲ್ಲಿ ಏಕತೆಯ ದಾರಿಯನ್ನು ಕಂಡುಕೊಂಡಿದ್ದ ನಮ್ಮ ಕುಟುಂಬ 1992ರಲ್ಲಿ ಬಾಂಬೆಯಲ್ಲಿ ನಡೆದ ಗಲಭೆಯಿಂದಾಗಿ ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಮುಖ್ಯಧಾರೆಯ ಸಮಾಜವು ಕೋಮುವಾದಿಯಾಗಿ ಪರಿವರ್ತನೆಯಾಗಿದ್ದು ನಮ್ಮ ಕಷ್ಟಗಳನ್ನು ಹೆಚ್ಚಿಸಿತ್ತು. ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿರದ ಮಕ್ಕಳನ್ನಿಟ್ಟುಕೊಡು ಇಂಥ ಸನ್ನಿವೇಶದಲ್ಲಿ ಮುಂದೆ ಹೋಗುವುದಾದರೂ ಹೇಗೆ ಎಂಬುದು ನಮ್ಮ ಪೋಷಕರ ಚಿಂತೆಯಾಗಿತ್ತು.

ಇದನ್ನೂ ಓದಿ: ಟ್ವೀಟಿಗರ ಆಕ್ರೋಶ, ಪರ ವಿರೋಧ ಚರ್ಚೆ: ಜಾಹೀರಾತು ವಿಡಿಯೊ ಡಿಲೀಟ್

ಇನ್ನು ಬದುಕುವುದು ಹೇಗೆ? ಯಾರು ನಮ್ಮ ಜೊತೆಗಾರರು? ನಮ್ಮ ಕೌಟುಂಬಿಕ ಸಂಬಂಧಗಳನ್ನು ವಿಸ್ತರಿಸಿಕೊಳ್ಳುವುದು ಹೇಗೆ? ಎಂಬ ಆತಂಕಗಳ ನಡುವೆಯೇ, ಅವರ ನಿರೀಕ್ಷೆ ಮೀರಿ ನಾವು ಹೊಸ ಜಗತ್ತುಗಳಿಗೆ ತೆರೆದುಕೊಂಡೆವು. ದೇಶ ಸುತ್ತಿದೆವು. ಪಿಎಚ್‌ಡಿಗಳನ್ನು ಪಡೆದೆವು. ನಮ್ಮಂತೆಯೇ ಇರುವ ಹತ್ತಾರು ಜನರನ್ನು ನೋಡಿದೆವು. ಭೇಟಿ ಮಾಡಿದೆವು. ಅಂಥವರೊಂದಿಗೆ ಸ್ನೇಹವನ್ನು ಏರ್ಪಡಿಸಿಕೊಂಡೆವು.

ಹಾಗೆಯೇ ನಾವು ವಿವಿಧ ಧರ್ಮ, ಜನಾಂಗಗಳಿಗೆ ಸೇರಿದವರನ್ನು ನಮ್ಮಿಷ್ಟದಂತೆ ಮದುವೆಯಾದೆವು. ಹೈನಾನ್‌ ಮೂಲದ ಚೈನಾ ಹುಡುಗಿಯನ್ನು ಅಣ್ಣ ಮದುವೆಯಾದ. ತೆಲಂಗಾಣ ರೆಡ್ಡಿ ಕುಟುಂಬದವರನ್ನು ನಾನು ಮದುವೆಯಾದೆ. ನಮಗೆ ಇಬ್ಬರು ಮಕ್ಕಳು. ಅವರೊಂದಿಗೆ ನಾಗಲ್ಯಾಂಡ್‌ನ ಬಾಲಕಿಯನ್ನು ದತ್ತು ಪಡೆದಿದ್ದೇವೆ.

ಹೊರಗೆ ಓಡಾಡುವ ಸಂದರ್ಭಗಳಲ್ಲಿ ಜನ ನಮ್ಮ ಕಡೆಗೆ ಅಚ್ಚರಿಯಿಂದ ನೋಡುತ್ತಾರೆ. ಅವರಿಗೆ ಹಲವು ಪ್ರಶ್ನೆಗಳು. ಈ ಮೂರೂ ಮಕ್ಕಳು ಪಾರ್ಕಿನಲ್ಲಿ ಆಟವಾಡುವಾಗ ಜನ ಕೇಳುತ್ತಾರೆ. ‘ಇದು ಹೇಗೆ ಸಾಧ್ಯ? ಈ ಮಕ್ಕಳು ಒಬ್ಬರಂತೆ ಒಬ್ಬರಿಲ್ಲವಲ್ಲ. ಭಾರತೀಯರಂತೆ ಕಾಣುತ್ತಿಲ್ಲ. ಇದು ಹೇಗೆ’ ಎಂಬ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗುತ್ತೇನೆ.

ನಮ್ಮ ದೇಶದ ಬಹುದೊಡ್ಡ ಚಿಂತಕರಾದ ಮಹಾತ್ಮ ಫುಲೆಯವರು ವಿಶ್ವಕುಟುಂಬದ ಬಗ್ಗೆ ಹೇಳಿದ್ದಾರೆ. ಆದರೆ ಇಂಥ ಕುಟುಂಬಗಳಿರುವ ನನ್ನ ಭಾರತದ ಬಗ್ಗೆ ಆಕ್ಷೇಪಿಸುತ್ತಿರುವ ಜನರೆಲ್ಲ ಯಾರು?

ನೀವು ಮುಸ್ಲಿಮರನ್ನು ಆಕ್ಷೇಪಿಸುತ್ತಿದ್ದೀರಾ? ನಿಮ್ಮದೇ ಹೆಣ್ಣು ಮಕ್ಕಳ ಆಯ್ಕೆಗಳ ಬಗ್ಗೆ ಆಕ್ಷೇಪಿಸುತ್ತಿದ್ದೀರಾ? ಭಾರತವೆಂದರೆ ಏನು ಎಂಬ ಕುರಿತ ವೈವಿಧ್ಯಮಯವಾದ ತತ್ವವನ್ನು ಆಕ್ಷೇಪಿಸುತ್ತಿದ್ದೀರಾ? ಯಾರು ನೀವೆಲ್ಲಾ? ಯಾಕೆ ಆಕ್ಷೇಪಿಸುತ್ತೀರಿ? ಯಾಕೆ ನಿಮಗೆ ಅಷ್ಟೊಂದು ಅಸಹನೆ? ಟ್ರೋಲ್‌ಗಳಿಗೆ ನಮ್ಮ ಬದುಕು ಮತ್ತು ತನಿಶ್ಕ್‌ ಒಂದು ಉತ್ತರ. ನಮ್ಮ ಬದುಕನ್ನು ನಾವು ಪ್ರೀತಿಯಿಂದ ಮತ್ತು ಹೆಮ್ಮೆಯಿಂದ ಬದುಕುತ್ತೇವೆ...’’ ಎಂಬ ಮಾತಿನೊಂದಿಗೆ ವೀಡಿಯೋ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: ಕ್ಷಮೆ ಕೋರಿದ ತನಿಷ್ಕ್ ಆಭರಣ ಸಂಸ್ಥೆ


ಹಿಂದೂ ತಾಯಿ, ಮುಸ್ಲಿಂ ತಂದೆಯ ಮಗಳಾಗಿ ಸಮೀನಾ ದಳವಾಯಿ ತಮ್ಮ ಇಬ್ಬರು ಮಕ್ಕಳೊಂದಿಗೆ

ಜಾಹೀರಾತಿನ ಕನ್ನಡಿಯಲ್ಲಿ...

ಗರ್ಭಿಣಿಯಾದ ಹಿಂದೂ ಸೊಸೆಯನ್ನು ಮುಸ್ಲಿಂ ಅತ್ತೆಯು ಸೀಮಂತದ ಸಂದರ್ಭದಲ್ಲಿ ಮಾತೃವಾತ್ಸಲ್ಯದಿಂದ ಕಾಣುವ ಧರ್ಮದ ಚೌಕಟ್ಟು ಮೀರಿದ ಕೌಟುಂಬಿಕ ಸೌಹಾರ್ದ ಮತ್ತು ಸಂತಸದ ಕ್ಷಣಗಳ ನಡುವೆ ತನಿಷ್ಕ್‌ ಆಭರಣಗಳನ್ನು ಪ್ರದರ್ಶಿಸುವ ಜಾಹೀರಾತು ಸ್ಥಗಿತಗೊಂಡ ಬೆನ್ನಿಗೆ ಬಂದಿರುವ ಸಮೀನಾ ಅವರ ಈ ನುಡಿಗಳು ನಮ್ಮ ನಡುವಿನ ಮಾಧ್ಯಮ–ಮಾಹಿತಿ ಸಾಕ್ಷರತೆಯ ಕಡೆಗೂ ಗಮನ ಸೆಳೆಯುತ್ತವೆ.

ಜಾಹೀರಾತಿನಲ್ಲಿ, ‘ನಿಮ್ಮ ಮನೆಯಲ್ಲಿ ಇಂಥ ಕಾರ್ಯಕ್ರಮಗಳು ನಡೆಯುವುದಿಲ್ಲ ಅಲ್ಲವೇ’ ಎಂದು ಭಾವುಕವಾಗಿ ಕೇಳುವ ಸೊಸೆಗೆ, ಅತ್ತೆ ಹೇಳುತ್ತಾರೆ: ’ಆದರೆ ಮಗು, ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳನ್ನು ಸಂತೋಷವಾಗಿಡುವ ಆಚರಣೆಗಳಿದ್ದೇ ಇರುತ್ತವೆ ಅಲ್ಲವೇ’
ಇಷ್ಟೇ ಮಾತುಗಳಿರುವ, 45 ಸೆಕೆಂಡ್‌ ಕಾಲದ ಜಾಹೀರಾತು ಪ್ರಸಾರವಾಗುತ್ತಲೇ ಫೇಸ್‌ಬುಕ್‌, ವಾಟ್ಸ್‌ ಅಪ್‌, ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಬಲ ವಿರೋಧ ಎದುರಿಸಬೇಕಾಯಿತು.

ಈ ಮಾಧ್ಯಮಗಳಲ್ಲಿ ವ್ಯಕ್ತವಾದ, ಕೋಮುಸೌಹಾರ್ದ ವಿರೋಧಿಗಳ ಆಕ್ರೋಶಕ್ಕೆ, ಆರೋಪಿತ ಬೆದರಿಕೆಗಳಿಗೆ ಬೆಚ್ಚಿದ ಕಂಪನಿಯು ಜಾಹೀರಾತನ್ನು ದಿಢೀರನೆ ವಾಪಸು ಪಡೆದಿದ್ದು ಈಗ ಇತಿಹಾಸ.

ಶತಮಾನಗಳಿಂದ ಕೋಮುಸೌಹಾರ್ದವನ್ನು, ವೈವಿಧ್ಯತೆಯಲ್ಲಿ ಏಕತೆಯನ್ನು, ಭಾವೈಕ್ಯವನ್ನು ದಿನವೂ ಪ್ರತಿಪಾದಿಸುವ ಮತ್ತು ಕೊಂಡಾಡುವ ದೇಶದಲ್ಲಿ, ಅದನ್ನೇ ಪ್ರತಿಪಾದಿಸುವ ಜಾಹೀರಾತಿಗೆ ಪ್ರಬಲ ವಿರೋಧ ವ್ಯಕ್ತವಾಗಿದ್ದಕ್ಕೆ ಉತ್ತರದ ರೂಪದಲ್ಲಿ ಈ ವೀಡಿಯೋ ಮೂಡಿದೆ.

ಏನೇ ಆದರೂ ಅದು ಕಾಲ್ಪನಿಕ ಜಾಹೀರಾತು. ಕಲ್ಪನೆಯು ಜಾಹೀರಾತಿನ ಪ್ರಮುಖ ಶಕ್ತಿಯೂ ಹೌದು, ಮಿತಿಯೂ ಹೌದು. ಅದು ಆಭರಣದ ಜಾಹೀರಾತಿನ ವಿಷಯದಲ್ಲೂ ನಿಜವಾಗಿದೆ.

ಕೋಮುಸೌಹಾರ್ದವನ್ನು ಅಪ್ಪಿಕೊಂಡೇ ಹಲವು ಕುಟುಂಬಗಳು ಎಲ್ಲೆಡೆ ಬದುಕು ನಡೆಸುತ್ತಿವೆ ಎಂಬುದನ್ನು ಜಾಹೀರಾತು ಸಾಂಕೇತಿಕವಾಗಿ ತೋರಿಸಿತಷ್ಟೇ. ಜಾಹೀರಾತಿನ ಮಟ್ಟಿಗೆ ಅದು ಕಲ್ಪನೆಯೇ ಆದರೂ ವಾಸ್ತವದಲ್ಲಿ ನಿಜ. 'ನೀವು ಆ ಜಾಹೀರಾತನ್ನು ವಿರೋಧಿಸಿದರೆ ಕಣ್ಣಮುಂದಿನ ವಾಸ್ತವವನ್ನು ವಿರೋಧಿಸಿದಂತೆಯೇ' ಎಂಬುದು ಸಮೀನಾ ಅವರ ಪ್ರತಿಪಾದನೆ. ಏಕೆಂದರೆ ವಾಸ್ತವಕ್ಕೆ ಸಾಕ್ಷಿಯಾಗಿ ಅವರ ಕುಟುಂಬವೇ ಇದೆ.

ಇದನ್ನೂ ಓದಿ: ತನಿಷ್ಕ್‌ಗೆ ಜಾಹೀರಾತು ಸಂಸ್ಥೆಗಳ ಬೆಂಬಲ, 'ಸೃಜನಶೀಲ ಸ್ವಾತಂತ್ರ್ಯ'ದ ಪ್ರಸ್ತಾಪ

ಜಾಹೀರಾತನ್ನು ವಾಪಸು ಪಡೆಯುವ ಮೂಲಕ ತನಿಷ್ಕ್‌ ಸೋತಂತೆ ಕಂಡರೂ ಅದರ ಬಗೆಗಿನ ವಿರೋಧದ ಕಾರಣಕ್ಕೇ ದೇಶಾದ್ಯಂತ ಚರ್ಚೆಗೀಡಾಗಿ, ಹೆಚ್ಚು ಪ್ರಚಾರವನ್ನೂ ಅಪ್ರಯತ್ನಪೂರ್ವಕವಾಗಿ ಪಡೆಯುವಂತಾಯಿತು. ಈ ಜಾಹೀರಾತಿಗೆ ವಿರೋಧ ವ್ಯಕ್ತವಾಗದೆ ಇದ್ದಿದ್ದರೆ ಸಿಗುತ್ತಿದ್ದ ಪ್ರಚಾರಕ್ಕಿಂತಲೂ, ವಿರೋಧ ವ್ಯಕ್ತವಾಗಿದ್ದರಿಂದ ದೊರಕಿದ ಪ್ರಚಾರವೇ ಹೆಚ್ಚು ಎನ್ನಬಹುದು.

ಜಾಹೀರಾತನ್ನು ವಿರೋಧಿಸಿದವರೆಲ್ಲರೂ ಸಾಕ್ಷರರೇ ಆಗಿದ್ದರು. ಡಿಜಿಟಲ್ ಮಾಹಿತಿ–ಮಾಧ್ಯಮಗಳೊಂದಿಗೆ ಸರಾಗವಾಗಿ ಒಡನಾಡುವವರೇ ಆಗಿದ್ದರು. ಆದರೆ ವಿರೋಧಿಸುವ ಸಂದರ್ಭದಲ್ಲಿ ವಿಮರ್ಶಾತ್ಮಕ ಎಚ್ಚರಕ್ಕಿಂತಲೂ, ಕೋಮುವಾದಿ ನೆಲೆಯ ಪೂರ್ವಾಗ್ರಹಗಳಿಂದ ಕೂಡಿದ ವಿರೋಧಾತ್ಮಕ ಎಚ್ಚರವೇ ಅವರನ್ನು ನಿಯಂತ್ರಿಸಿತ್ತು. ಸಹನೆ–ಸೌಹಾರ್ದದ ಪರವಾಗಿ ನಿಲ್ಲದ ಅಂಥ ಅಜಾಗೃತರನ್ನು ಸಮೀನಾ ತಣ್ಣಗೆ ಪ್ರಶ್ನಿಸುತ್ತಾರೆ.

ಕೆಲವು ದಶಕಗಳಿಂದ ದೇಶದಲ್ಲಿ ಇಂಥ ಅಸಹಿಷ್ಣುತೆಯೇ, ಸೌಹಾರ್ದದಿಂದ ಬದುಕುತ್ತಿರುವ ವಿಶ್ವಕುಟುಂಬಿಗಳನ್ನು ಹಿಂಸಿಸಿದೆ. ವಲಸೆ ಹೋಗುವಂತೆ ಮಾಡಿದೆ ಎಂಬ ವಿಷಾದವನ್ನೂ ವೀಡಿಯೋ ದಾಟಿಸುತ್ತದೆ. ದೇಶಪ್ರೇಮದ ಹೆಸರಿನಲ್ಲಿ ಕೋಮುವಾದ ಮತ್ತು ಅಸಹಿಷ್ಣುತೆಯನ್ನು ಬಿತ್ತುವ ಪ್ರಯತ್ನಗಳಿಂದಲೇ ಜನರ ನಡುವಿನ ಸಂವಹನ ಸುಲಭವಾಗದೆ ಸಂಕೀರ್ಣವಾಗಿದೆ. ಜ್ಞಾನ, ಕೌಶಲಗಳು ಹೆಚ್ಚಿದ್ದರೂ ಒಲವು–ನಿಲುವುಗಳಲ್ಲಿ ಮಾತ್ರ ಶಾಂತಿ ಕದಡಿರುವುದರ ಕಡೆಗೆ ಗಮನ ಸೆಳೆಯುತ್ತದೆ.

ಪ್ರತಿ ಕ್ಷಣವೂ ಡಿಜಿಟಲ್‌ ಮಾಹಿತಿಗಳ ರಾಶಿ ಬಂದು ಬೀಳುತ್ತಿರುವ ಹೊತ್ತಿನಲ್ಲಿ, ದ್ವೇಷಾಸೂಯೆಯ ಮತ್ತಿನಲ್ಲಿ ಜನ ಸಮುದಾಯದ ತಲೆತಿರುಗದಂತೆ ಮಾಡಬಲ್ಲ ಏಕೈಕ ಔಷಧಿ ಎಂದರೆ ಮಾಧ್ಯಮ ಮತ್ತು ಮಾಹಿತಿಗಳ ಮೂಲಕ ಮೂಡಬೇಕಾದ ಸೌಹಾರ್ದ ಸಾಕ್ಷರತೆ. ಆದರೆ ದೇಶದಲ್ಲಿ ಅಕ್ಷರ ಕಲಿಕೆಯ ಸಾಕ್ಷರತೆಯ ಪ್ರಗತಿಯಂತೆಯೇ ಮಾಧ್ಯಮ–ಮಾಹಿತಿ ಸಾಕ್ಷರತೆಯೂ ತೆವಳುತ್ತಿದೆ. ಇಂಥ ಸನ್ನಿವೇಶದಲ್ಲಿ ಜಾಗತಿಕ ಮಾಧ್ಯಮ ಮತ್ತು ಮಾಹಿತಿ ಸಾಕ್ಷರತೆಯ ಸಪ್ತಾಹ ಎಂದಿನಂತೆ ಅ.24ರಿಂದ ಆರಂಭವಾಗುತ್ತಿದೆ.

ವೀಡಿಯೋ ಲಿಂಕ್: https://www.thequint.com/videos/child-of-interfaith-marriage-speaks-up

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು