ಬುಧವಾರ, ಮೇ 25, 2022
23 °C

ಕೋವಿಡ್‌ನಿಂದ ಭಾರತದಲ್ಲಿ 47 ಲಕ್ಷಕ್ಕೂ ಹೆಚ್ಚು ಜನರ ಸಾವು: ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಕೋವಿಡ್‌ನಿಂದಾಗಿ 47 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು, ಸರ್ಕಾರ ಅಧಿಕೃತವಾಗಿ ಘೋಷಿಸಿದ್ದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚಾಗಿದೆ.

ವರದಿಯ ಪ್ರಕಾರ, ಜನವರಿ 2020ರಿಂದ ಡಿಸೆಂಬರ್‌ 2021ರವರೆಗೂ ಭಾರತದಾದ್ಯಂತ ಕೋವಿಡ್‌ ಕಾರಣಗಳಿಂದ ಸಾವಿಗೀಡಾದವರ ಸಂಖ್ಯೆ 47,40,894 ಮುಟ್ಟಿತ್ತು. ಆರೋಗ್ಯ ಇಲಾಖೆಯ ದಾಖಲೆಯ ಪ್ರಕಾರ 2021ರ ಅಂತ್ಯಕ್ಕೆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 4,81,000. ಪ್ರಸ್ತುತ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,23,000 ದಾಟಿದೆ.

ಕೋವಿಡ್ ಸಾವುಗಳಿಗೆ ಸಂಬಂಧಿಸಿದ ಡಬ್ಲ್ಯೂಎಚ್ಒ ವರದಿಯನ್ನು ಭಾರತ ತೀಕ್ಷ್ಣವಾಗಿ ಆಕ್ಷೇಪಿಸಿದೆ. ‘ಸಾವಿನ ಪ್ರಮಾಣವನ್ನು ಅಂದಾಜಿಸಲು ಡಬ್ಲ್ಯೂಎಚ್ಒ ಅನುಸರಿಸಿರುವ ಮಾದರಿ ಹಾಗೂ ಅಂಕಿ–ಅಂಶಗಳ ಸಂಗ್ರಹ ಕ್ರಮವು ಪ್ರಶ್ನಾರ್ಹವಾಗಿದೆ’ ಎಂದು ಹೇಳಿದೆ.

‘ಸಾವಿನ ಪ್ರಮಾಣ ಅಂದಾಜಿಸುವ ಡಬ್ಲ್ಯೂಎಚ್ಒ ಮಾದರಿಯನ್ನು ಭಾರತ ನಿರಂತರವಾಗಿ ಆಕ್ಷೇಪಿಸುತ್ತಿದೆ. ತೀವ್ರ ಆಕ್ಷೇಪದ ನಂತರವೂ ಸಂಬಂಧಿತ ಅಂದಾಜು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿಕೆ ನೀಡಿದೆ.

ಡಬ್ಲ್ಯೂಎಚ್ಒ ಸಾಮಾನ್ಯ ಸಭೆ ಹಾಗೂ ಇತರೆ ಪ್ರಮುಖ ವೇದಿಕೆಗಳಲ್ಲೂ ಭಾರತವು ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ:

‘ಸಾವುಗಳಿಗೆ ಸಂಬಂಧಿಸಿದಂತೆ ನಾಗರಿಕ ನೋಂದಣಿ ವ್ಯವಸ್ಥೆಯಡಿ (ಸಿಆರ್‌ಎಸ್‌) ಅಧಿಕೃತ, ವಿಶ್ವಸನೀಯ ಅಂಕಿ ಅಂಶಗಳು ಲಭ್ಯವಿವೆ. ಹೀಗಾಗಿ, ಹೆಚ್ಚುವರಿ ಸಾವುಗಳನ್ನು ಬಿಂಬಿಸಲು ಗಣಿತ ಮಾದರಿಯನ್ನು ಅನುಸರಿಸಬಾರದು’ ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.

ಜಗತ್ತಿನಾದ್ಯಂತ ಎರಡು ವರ್ಷಗಳಲ್ಲಿ ಕೋವಿಡ್‌ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸುಮಾರು 1.5 ಕೋಟಿ ಮಂದಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಎಚ್‌ಒ ವರದಿ ಹೇಳಿದೆ. ಸುಮಾರು 60 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು