ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆಗೆ ವಿರೋಧ: ಪುನರುಚ್ಚರಿಸಿದ ತಮಿಳುನಾಡು

ಕರ್ನಾಟಕದ ವಿರುದ್ಧ ಎಲ್ಲಾ ಅಗತ್ಯಕ್ರಮ ಕೈಗೊಳ್ಳುವುದಾಗಿ ಹೇಳಿಕೆ
Last Updated 29 ಮಾರ್ಚ್ 2023, 13:45 IST
ಅಕ್ಷರ ಗಾತ್ರ

ಚೆನ್ನೈ: ಮೇಕೆದಾಟು ಜಲಾಶಯ ಯೋಜನೆಗೆ ವಿರೋಧಿಸುವುದನ್ನು ಮುಂದುವರಿಸುವುದಾಗಿ ಬುಧವಾರ ಪುನರುಚ್ಚರಿಸಿರುವ ತಮಿಳುನಾಡು ಸರ್ಕಾರ, ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರವು ಜಲಾಶಯ ನಿರ್ಮಿಸುವುದನ್ನು ತಡೆಯಲು ಕಾನೂನು ಕ್ರಮ ಸೇರಿದಂತೆ ಎಲ್ಲ ರೀತಿಯ ಅಗತ್ಯಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

‘ಕಾವೇರಿ ನ್ಯಾಯಾಧೀಕರಣ ಮಂಡಳಿಯ ಅಂತಿಮ ಆದೇಶ ಹಾಗೂ ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲಂಘಿಸಿ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ’ ಎಂದೂ ತಮಿಳುನಾಡು ಅಭಿಪ್ರಾಯಪಟ್ಟಿದೆ.

ವಿಧಾನಸಭೆಯಲ್ಲಿ ಮಂಡಿಸಿದ ನೀತಿ–ಟಿಪ್ಪಣಿಯಲ್ಲಿ ಜಲಸಂಪನ್ಮೂಲ ಇಲಾಖೆಯು, ‘ಮೇಕೆದಾಟುವಿನಲ್ಲಿ 67.16 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಪ್ರಸ್ತಾವನೆ ಕುರಿತು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ಕಾರವು ಕಾಲಕಾಲಕ್ಕೆ ತನ್ನ ತೀವ್ರ ಆಕ್ಷೇಪಣೆಗಳನ್ನು ತಿಳಿಸುತ್ತಾ ಬಂದಿದೆ’ ಎಂದು ತಿಳಿಸಿದೆ.

‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ಅಕ್ಟೋಬರ್ 29ರಂದು ನಡೆದ 17ನೇ ಸಭೆಯಲ್ಲಿ ಕರ್ನಾಟಕದ ಒತ್ತಾಯದ ಮೇರೆಗೆ ಅಜೆಂಡಾದಲ್ಲಿ ಸೇರಿಸಲಾದ ಮೇಕೆದಾಟು ಯೋಜನೆಯನ್ನು ಚರ್ಚಿಸುವ ನಿರ್ಧಾರವನ್ನು ಮುಂದೂಡಿದೆ. ಇದಕ್ಕೆ ತಮಿಳುನಾಡು ಸರ್ಕಾರದ ಒತ್ತಾಯವೇ ಕಾರಣ’ ಎಂದು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಪ್ರತಿಪಾದಿಸಿದ್ದಾರೆ.

ಕರ್ನಾಟಕವು ಈ ಯೋಜನೆಯನ್ನು ಮುಂದುವರಿಸದಂತೆ ತಮಿಳುನಾಡು ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಬರೆದ ಪತ್ರಗಳ ಬಗ್ಗೆಯೂ ಮಾಹಿತಿ ನೀಡಿದರು. ಈ ಕುರಿತ ನಿರ್ಣಯವು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

‘ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯಾಧೀಕರಣದ ಆದೇಶಗಳನ್ನು ಜಾರಿಗೊಳಿಸಲು ಮಾತ್ರ ಏಜೆನ್ಸಿಯನ್ನು ರಚಿಸಲಾಗಿದೆ. ಆದರೆ, ಮೇಕೆದಾಟು ಯೋಜನೆಯನ್ನು ಸಿಡಬ್ಲ್ಯುಎಂಎ ಚರ್ಚೆಗೆ ತೆಗೆದುಕೊಂಡಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ’ ಎಂದು ಮುರುಗನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT