ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಜಮ್ಮು–ಕಾಶ್ಮೀರ: 370 ವಿಧಿ ರದ್ದತಿಗೆ ಎರಡು ವರ್ಷ, ಸಂಸತ್‌ ಮೊರೆ ಹೋಗಲು ಪಿಎಜಿಡಿ ಮುಖಂಡರ ನಿರ್ಧಾರ

ಜಮ್ಮು–ಕಾಶ್ಮೀರದ ಎಲ್ಲ ಬೆಳವಣಿಗೆಗೆ ಕೇಂದ್ರ ಸರ್ಕಾರವೇ ಉತ್ತರದಾಯಿ: ಪಿಎಜಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಮರಳಿಸುವಂತೆ ಕೋರಿ ಸಂಸತ್‌ ಹಾಗೂ ದೇಶದ ಜನರ ಮೊರೆ ಹೋಗಲಾಗುವುದು’ ಎಂದು ಪೀಪಲ್ಸ್‌ ಅಲಯೆನ್ಸ್‌ ಫಾರ್‌ ಗುಪ್ಕಾರ್‌ ಡಿಕ್ಲರೇಷನ್‌ (ಪಿಎಜಿಡಿ) ಗುರುವಾರ ಹೇಳಿದೆ.

ಅಲ್ಲದೇ, 370ನೇ ವಿಧಿ ರದ್ದುಗೊಳಿಸಿದ ನಂತರದ ಅವಧಿಯಲ್ಲಿ ಆಗಿರುವ ಎಲ್ಲ ಬೆಳವಣಿಗೆಗಳಿಗೆ ಬಿಜೆಪಿ ಸರ್ಕಾರವನ್ನೇ ಉತ್ತರದಾಯಿಯನ್ನಾಗಿ ಮಾಡಲಾಗುವುದು ಎಂದೂ ಪಿಎಜಿಡಿ ಮುಖಂಡರು ಹೇಳಿದ್ದಾರೆ.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದಕ್ಕೆ ಎರಡು ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಪಿಎಜಿಡಿ ಅಧ್ಯಕ್ಷರೂ ಆಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರ ನಿವಾಸದಲ್ಲಿ ಮೈತ್ರಿಕೂಟದ ಅಂಗಪಕ್ಷಗಳ ಸಭೆ ನಡೆಯಿತು.

ಪಿಎಜಿಡಿ ಎಂಬುದು ಆರು ಪ್ರಮುಖ ರಾಜಕೀಯ ಪಕ್ಷಗಳ ಮೈತ್ರಿಕೂಟ. ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುವ ಸಲುವಾಗಿ ಹೋರಾಟ ನಡೆಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಮೈತ್ರಿಕೂಟ ರಚಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರು, ‘2019ರ ಆಗಸ್ಟ್‌ 5ರಂದು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು’ ಎಂದರು. ಸಂವಿಧಾನ ನೀಡಿರುವ ಈ ಹಕ್ಕುಗಳನ್ನು ಮರಳಿ ಪಡೆಯುವ ಶಪಥ ಮಾಡಿದರು. ಅಲ್ಲದೇ, ನಮ್ಮ ಹೋರಾಟವನ್ನು  ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂಬುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಿಪಿಎಂ ನಾಯಕ ಮೊಹಮ್ಮದ್‌ ಯೂಸೂಫ್‌ ತಾರಿಗಾಮಿ ಮತ್ತಿತರರು ಪಾಲ್ಗೊಂಡಿದ್ದರು.

‘ಶೋಕಾಚರಣೆಯ ದಿನ’: ‘ಜಮ್ಮು–ಕಾಶ್ಮೀರದ ಪಾಲಿಗೆ ಶೋಕಾಚರಣೆಯ ದಿನವಿದು. 2019ರಲ್ಲಿ ಬಿಜೆಪಿ ಸರ್ಕಾರ ದಬ್ಬಾಳಿಕೆ ಆರಂಭಿಸಿತು. ಅನಾಗರಿಕ ರೀತಿಯಲ್ಲಿ ವರ್ತಿಸಲು ಶುರು ಮಾಡಿತು. ಕಾಶ್ಮೀರ ಶೋಕದಲ್ಲಿ ಮುಳುಗಿದ್ದರೆ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ದುರದೃಷ್ಟಕರ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಗುರುವಾರ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು