ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆಯೊಂದಿಗೆ ಚಾರ್ ಧಾಮ್ ರಸ್ತೆ ನಿರ್ಮಾಣ: ನಿತಿನ್ ಗಡ್ಕರಿ

Last Updated 11 ಫೆಬ್ರುವರಿ 2021, 16:23 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಚಾರ್ ಧಾಮ್ ಯೋಜನೆಯು ಚೀನಾ ಗಡಿಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಅತ್ಯಂತ ಮಹತ್ವಪೂರ್ಣವೆನಿಸಿದ್ದು, ಹಿಮಾಲಯ ಸೂಕ್ಷ್ಮ ಪರಿಸರ ಪ್ರದೇಶದ ಸಂರಕ್ಷಣೆಯೊಂದಿಗೆ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಸೂಕ್ಷ್ಮ ಪರಿಸರ ವಲಯದಲ್ಲಿ ಹಾದು ಹೋಗುವ ಹಿನ್ನೆಲೆಯಲ್ಲಿ ಚಾರ್ ಧಾಮ್ ರಸ್ತೆ ಯೋಜನೆಗೆ ಪರಿಸರವಾದಿಗಳು ಕಳವಳವನ್ನು ವ್ಯಕ್ತಪಡಿಸಿದ್ದರು.

ಇದಕ್ಕೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ನೀಡಲಾದ ಲಿಖಿತ ಉತ್ತರದಲ್ಲಿ 12,000 ಕೋಟಿ ರೂ.ಗಳ ಚಾರ್ ಧಾಮ್ ಯೋಜನೆಯಲ್ಲಿ ಎಲ್ಲ ಹವಾಮಾನ ಪರಿಸ್ಥಿತಿಗೂ ಯೋಗ್ಯವೆನಿಸಿದ ಬದರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳನ್ನು ಸೇರಿದಂತೆ 53 ಪ್ಯಾಕೇಜ್‌ಗಳಿವೆ ಎಂದು ತಿಳಿಸಿದರು.

ಪರಿಸರ ವಿಜ್ಞಾನ ಹಾಗೂ ಪರಿಸರ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸೂಕ್ಷ್ಮ ಪರಿಸರ ಪ್ರದೇಶ ಸಂರಕ್ಷಣೆಯೊಂದಿಗೆ ರಸ್ತೆಯನ್ನು ನಿರ್ಮಿಸಲಿದ್ದೇವೆ ಎಂದು ತಿಳಿಸಿದರು.

ರಸ್ತೆಯ ಅಗಲವನ್ನು ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಯೋಜನೆಯು ಚೀನಾ ಗಡಿಯೊಂದಿಗೆ ಹಾದು ಹೋಗುವ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣವೆನಿಸಿದೆ. ಆದರೂ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಹಾಗಾಗಿ ರಸ್ತೆಯ ಅಗಲವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದರು.

ನಾವೊಂದು ಮರವನ್ನು ತೆಗೆಯಬೇಕಾದರೆ ಅದನ್ನು ಸ್ಥಳಾಂತರ ಮಾಡಬೇಕಿದೆ. ಅದಕ್ಕೆ ಎಷ್ಟೇ ದುಡ್ಡು ಖರ್ಚಾದರೂ ಮೊದಲ ಆದ್ಯತೆ ನೀಡುತ್ತೇವೆ. ಹಾಗೊಂದು ವೇಳೆ ಸ್ಥಳಾಂತರ ಮಾಡಲು ಸಾಧ್ಯವಾಗದಿದ್ದರೆ ಆ ಒಂದು ಮರದ ಬದಲಿಗೆ 10 ಮರಗಳನ್ನು ನೆಡಬೇಕಿದೆ. ಈ ಯೋಜನೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡುವ ಬಗ್ಗೆ ಭರವಸೆಯಿದೆ ಎಂದರು.

ಇನ್ನೊಂದು ವರ್ಷದಲ್ಲಿ ಚಾರ್ ಧಾಮ್ ಯೋಜನೆ ಸಾರ್ವಜನಿಕರಿಗಾಗಿ ತೆರೆಯಲಿದೆ. ಪ್ರವಾಸಿಗರು ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ಕೊಡಬಹುದು ಎಂದು ಹೇಳಿದರು.

201 ಕಿ.ಮೀ. ಉದ್ದದ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣಕ್ಕೆ 13,000 ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿದೆ ಎಂಬುದನ್ನು ಗಡ್ಕರಿ ತಿಳಿಸಿದರು. 2,450 ಕೋಟಿ ರೂ.ಗಳ ವೆಚ್ಚದಲ್ಲಿ 169 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ ಐದು ಪ್ಯಾಕೇಜ್‌ಗಳು ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಹಾದು ಹೋಗುತ್ತಿದೆ. ಇದರಲ್ಲಿ 10 ಎಲಿವೇಟಡ್ ರಸ್ತೆಗಳು ಸೇರಿದಂತೆ ಎರಡು ನಗರಗಳ ನಡುವೆ ಮೂರರಿಂದ 3.15 ತಾಸಿನೊಳಗೆ ತಲುಪಬಹುದಾಗಿದೆ ಎಂದು ತಿಳಿಸಿದರು.

ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ 25 ಕಿ.ಮೀ. ಉದ್ದದ ಹರಿದ್ವಾರ ರಿಂಗ್ ರೋಡ್ ನಿರ್ಮಾಣಕ್ಕೂ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT