ಶುಕ್ರವಾರ, ಜುಲೈ 30, 2021
20 °C

ಹೊಸ ಖಾಸಗಿ ನೀತಿ ಆಯ್ಕೆಗೆ ಒತ್ತಡ ಹೇರಲ್ಲ: ದೆಹಲಿ ಹೈಕೋರ್ಟ್‌ಗೆ ವಾಟ್ಸ್‌ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದತ್ತಾಂಶ ಸಂರಕ್ಷಣಾ ಮಸೂದೆ’ ಜಾರಿಗೆ ಬರುವತನಕ, ತನ್ನ ಹೊಸ ಖಾಸಗಿತನ (ಗೋಪ್ಯತಾ) ನೀತಿಯನ್ನು ತಡೆಹಿಡಿಯಲಾಗುವುದು ಎಂದು ದೆಹಲಿ ಹೈಕೋರ್ಟ್‌ಗೆ ವಾಟ್ಸ್‌ಆ್ಯಪ್ ಸಂಸ್ಥೆ ಶುಕ್ರವಾರ ತಿಳಿಸಿದೆ. ಸಂಸತ್ತು ಅನುಮತಿ ನೀಡಿದರೆ ಮಾತ್ರ ಅದನ್ನು ಜಾರಿಗೆ ತರುತ್ತೇವೆ ಎಂದು ಸ್ಪಷ್ಟಪಡಿಸಿದೆ.

ವಾಟ್ಸ್‌ಆ್ಯಪ್‌ನ ಖಾಸಗಿತನ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರಿಗೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಮತ್ತು ಜ್ಯೋತಿ ಸಿಂಗ್ ಅವರ ಪೀಠದೆದುರು ವಾಟ್ಸ್‌ಆ್ಯಪ್ ತಿಳಿಸಿತು.

‘ನಾವು ಖಾಸಗಿತನ ನೀತಿ ತಡೆಹಿಡಿಯಲು ಸ್ವಯಂಪ್ರೇರಣೆಯಿಂದ ಒಪ್ಪಿಕೊಂಡಿದ್ದೇವೆ. ನೀತಿ ಒಪ್ಪಿಕೊಳ್ಳಿ ಎಂದು ನಾವು ಜನರಿಗೆ ಒತ್ತಾಯಿಸುವುದಿಲ್ಲ’ ಎಂದು ವಾಟ್ಸ್‌ಆ್ಯಪ್ ಪರ ಹಾಜರಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ತಿಳಿಸಿದರು. ಸಾಳ್ವೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋರ್ಟ್, ‘ಅನುಷ್ಠಾನವನ್ನು ತಡೆಹಿಡಿಯಲಾಗಿದ್ದರೂ, ನೀತಿ ಇನ್ನೂ ಅಸ್ತಿತ್ವದಲ್ಲಿದೆ. ನೀವು ಅದನ್ನು ಕಾರ್ಯಗತಗೊಳಿಸುತ್ತಿಲ್ಲ ಸರಿ. ಆದರೆ ನೀತಿಯು ಯಾವುದೇ ದಿನ ಮತ್ತೆ ಜಾರಿಯಾಗಬಹುದು’ ಎಂದಿತು.

‘ದತ್ತಾಂಶ ಸಂರಕ್ಷಣಾ ಮಸೂದೆಯು ಕಾನೂನಾಗಿ ಜಾರಿಯಾಗುವವರೆಗೂ ನೀತಿ ಜಾರಿ ಮಾಡುವುದಿಲ್ಲ’ ಎಂದು ಸಾಳ್ವೆ ಪುನರುಚ್ಚರಿಸಿದರು. ‘ಸಂಸತ್ತಿನ ಕಾನೂನು ಬರುವವರೆಗೂ ನಾವು ಏನನ್ನೂ ಮಾಡುವುದಿಲ್ಲ. ಇದು ನಮ್ಮ ಬದ್ಧತೆ. ಸಂಸತ್ತು ಅನುಮತಿ ನೀಡಿದರೆ ಸರಿ. ಇಲ್ಲದಿದ್ದರೆ ಅದು ದುರದೃಷ್ಟ’ ಎಂದರು.

ವ್ಯಕ್ತಿಯ ದತ್ತಾಂಶವನ್ನು ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಬಳಸುವುದನ್ನು ನಿಯಂತ್ರಿಸಲು ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯು ಪ್ರಯತ್ನಿಸುತ್ತದೆ. ಮಸೂದೆಯನ್ನು ಪರಿಶೀಲಿಸಿ ವರದಿ ನೀಡುವ ಸಂಸತ್ತಿನ ಜಂಟಿ ಸಮಿತಿಯ ಅವಧಿಯನ್ನು ಮುಂಗಾರು ಅಧಿವೇಶನದವರೆಗೆ ವಿಸ್ತರಿಸಲಾಗಿದೆ.

ಕಾಲಾವಕಾಶಕ್ಕೆ ಮನವಿ: ವಾಟ್ಸ್‌ಆ್ಯಪ್‌ನ ಹೊಸ ಗೋಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸಲು ನಿರ್ದೇಶನ ನೀಡಿರುವ ಭಾರತದ ಸ್ಪರ್ಧಾ ಆಯೋಗದ (ಸಿಸಿಐ) ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಕೋರ್ಟ್ ವಿಚಾರಣೆ ನಡೆಸಿತು. ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಕಳೆದ ತಿಂಗಳು ವಾಟ್ಸ್‌ಆ್ಯಪ್ ಅರ್ಜಿ ಹಾಕಿತ್ತು.

‘ಗೋಪ್ಯತೆ ನೀತಿ ಜಾರಿ ಈಗ ಸ್ಥಗಿತಗೊಂಡಿದೆ. ಆದರೆ ಸಿಸಿಐ ವಿಚಾರಣೆ ಮುಂದುವರಿದಿದೆ’ ಎಂದು ವಾಟ್ಸ್‌ಆ್ಯಪ್ ಪರ ವಕೀಲ ಹರೀಶ್‌ ಸಾಳ್ವೆ ಹೇಳಿದರು. ಸಿಸಿಐ ನೀಡಿರುವ ಪ್ರಶ್ನಾವಳಿಗೆ ಉತ್ತರಿಸಲು ವಾಟ್ಸ್‌ಆ್ಯಪ್‌ಗೆ ಜುಲೈ ತಿಂಗಳ ಕೊನೆಯವರೆಗೆ ಕಾಲಾವಕಾಶ ನೀಡುವಂತೆ ಅವರು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು