ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಯಥಾಸ್ಥಿತಿ ಬದಲಿಸಲು ಅವಕಾಶ ನೀಡೆವು: ಜನರಲ್‌ ಎಂ.ಎಂ.ನರವಣೆ

ಸೇನಾ ದಿನ ಕಾರ್ಯಕ್ರಮ * ತಾಳ್ಮೆ ನಮ್ಮ ಆತ್ಮವಿಶ್ವಾಸದ ಪ್ರತೀಕ. ಪರೀಕ್ಷಿಸುವ ತಪ್ಪು ಮಾಡಬೇಡಿ –ಜನರಲ್‌ ಎಂ.ಎಂ.ನರವಣೆ
Last Updated 15 ಜನವರಿ 2022, 13:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೇಶದ ಗಡಿಯುದ್ದಕ್ಕೂ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಪ್ರಯತ್ನಗಳಿಗೂ ಅವಕಾಶ ನೀಡುವುದಿಲ್ಲ ಎಂಬ ಭಾರತೀಯ ಸೇನೆಯ ಸಂದೇಶ ಸ್ಪಷ್ಟವಾಗಿದ್ದು, ಇದರಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಶನಿವಾರ ಹೇಳಿದರು.

ಸೇನಾ ದಿನದ ಕವಾಯತು ಉದ್ದೇಶಿಸಿ ಮಾತನಾಡಿದ ಅವರು, ಚೀನಾದ ಗಡಿಯುದ್ದಕ್ಕೂ ಇರುವ ಸ್ಥಿತಿಯನ್ನು ಉಲ್ಲೇಖಿಸಿದ ಅವರು, ‘ಕಳೆದ ವರ್ಷ ಭಾರತೀಯ ಸೇನೆಗೆ ತೀವ್ರ ಸವಾಲಿನದಾಗಿತ್ತು’ ಎಂದು ಹೇಳಿದರು.

ಸ್ವಾತಂತ್ರ್ಯಾನಂತರ ಭಾರತ ಸೇನೆಯ ಮೊದಲ ಚೀಫ್‌ ಕಮಾಂಡರ್‌ ಆಗಿ ಫೀಲ್ಡ್‌ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಜನವರಿ 15 ಅನ್ನು ‘ಸೇನಾ ದಿನ’ವಾಗಿ ಆಚರಿಸಲಾಗುತ್ತಿದೆ.

ಪೂರ್ವ ಲಡಾಖ್‌ನಲ್ಲಿನ ಅನಿಶ್ಚಿತತೆಯನ್ನು ಉಲ್ಲೇಖಿಸಿ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಭಾರತ–ಚೀನಾ ನಡುವೆ ಸೇನಾ ಹಂತದಲ್ಲಿ ಇತ್ತೀಚೆಗಷ್ಟೇ 14ನೇ ಸುತ್ತಿನ ಮಾತುಕತೆ ಮುಗಿದಿದೆ. ವಿವಿಧ ಹಂತದಲ್ಲಿ ನಡೆದ ಜಂಟಿ ಯತ್ನದ ಫಲವಾಗಿ ವಿವಿಧೆಡೆ ನಿಯೋಜಿಸಿದ್ದ ಸೇನೆಯ ತುಕಡಿಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.

ಪರಸ್ಪರ ಮತ್ತು ಸಮಾನ ಭದ್ರತೆಗಾಗಿ ಈಗಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆದಿದೆ. ಭದ್ರತೆಗಾಗಿ ಹಿಮಾವೃತ ಶಿಖರದಲ್ಲಿ ನಿಯೋಜಿಸಲಾಗಿರುವ ಸೈನಿಕರ ನೈತಿಕಶಕ್ತಿಯು ಉನ್ನತವಾದುದು ಎಂದು ಶ್ಲಾಘಿಸಿದರು.

‘ತಾಳ್ಮೆಯೇ ನಮ್ಮ ಆತ್ಮವಿಶ್ವಾಸದ ಪ್ರತೀಕ. ಇದನ್ನು ಪರೀಕ್ಷೆ ಮಾಡುವ ತಪ್ಪನ್ನು ಯಾರೂ ಮಾಡಬಾರದು. ಗಡಿ ವಿಷಯದಲ್ಲಿ ಭಾರತ ಸೇನೆಯ ಸಂದೇಶ ಸ್ಪಷ್ಟವಾಗಿದೆ. ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಯತ್ನಗಳಿಗೆ ಸೇನೆ ಅವಕಾಶ ನೀಡುವುದಿಲ್ಲ‘ ಎಂದೂ ಅವರು ಪರೋಕ್ಷವಾಗಿ ನೆರೆ ದೇಶಗಳಿಗೆ ಎಚ್ಚರಿಸಿದರು.

2020ರ ಮೇ 5ರಂದು ಭಾರತ–ಚೀನಾ ಸೇನೆಯ ನಡುವೆ ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಬಳಿ ನಡೆದಿದ್ದ ಸಂಘರ್ಷದ ಬಳಿಕ ಗಡಿಯುದ್ದಕ್ಕೂ ಅನಿಶ್ಚಿತ ಪರಿಸ್ಥಿತಿ ಇದೆ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಉಭಯ ದೇಶಗಳ ನಡುವೆ 14 ಸುತ್ತಿನ ಮಾತುಕತೆ ನಡೆದಿದೆ.

ಸಂಘರ್ಷದ ಬೆಳವಣಿಗೆಯ ನಂತರ ಉಭಯ ದೇಶಗಳು ಗಡಿ ಭಾಗದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿದ್ದವು. ಆದರೆ, ಸರಣಿ ಮಾತುಕತೆಯ ಬಳಿಕ ಉಭಯ ದೇಶಗಳು ಪಾಂಗಾಂಗ್ ಮತ್ತು ಗೋಗ್ರಾ ವಲಯದಲ್ಲಿ ನಿಯೋಜಿಸಿದ್ದ ಸೇನೆಯನ್ನು ವಾಪಸು ಕರೆಸಿಕೊಂಡಿದ್ದವು.

194 ಉಗ್ರರ ಹತ್ಯೆ: ‘ಪಾಕಿಸ್ತಾನದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕಳೆದ ವರ್ಷಕ್ಕಿಂತ ಈ ಬಾರಿ ಪರಿಸ್ಥಿತಿ ಸುಧಾರಿಸಿದೆ. ಆದರೂ ಪಾಕಿಸ್ತಾನವು ಭಯೋತ್ಪಾದಕರನ್ನು ದೇಶದೊಳಕ್ಕೆ ಕಳುಹಿಸುತ್ತಿದೆ. ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ಎನ್‌ಕೌಂಟರ್‌ಗಳಲ್ಲಿ 194 ಉಗ್ರರು ಹತರಾಗಿದ್ದಾರೆ. ಗಡಿಯಾಚೆಗಿನ ತರಬೇತಿ ಶಿಬಿರಗಳಲ್ಲಿ 300ರಿಂದ 400ರಷ್ಟು ಉಗ್ರರಿದ್ದು, ದೇಶದೊಳಗೆ ನುಗ್ಗಲು ಕಾಯುತ್ತಿದ್ದಾರೆ’ ಎಂದು ನರವಣೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT