ಬುಧವಾರ, ಅಕ್ಟೋಬರ್ 5, 2022
27 °C

ಮಹಾರಾಷ್ಟ್ರ ಕರಾವಳಿಯಲ್ಲಿ ಪತ್ತೆಯಾದ ವಿಹಾರನೌಕೆ ಆಸ್ಟ್ರೇಲಿಯಾ ಮಹಿಳೆಗೆ ಸೇರಿದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಬಳಿಯ ರಾಯಗಡ ಕರಾವಳಿಗೆ ತೇಲಿ ಬಂದಿದ್ದ 16 ಮೀಟರ್ ಉದ್ದದ ವಿಹಾರ ನೌಕೆಯು ಆಸ್ಟ್ರೇಲಿಯಾದ ಮಹಿಳೆಯೊಬ್ಬರ ಒಡೆತನದ್ದಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಇದು ಯಾವುದೇ ಭಯೋತ್ಪಾದಕ ಕೃತ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನೌಕೆಯಲ್ಲಿ ಮೂರು ಎಕೆ -47 ರೈಫಲ್‌ಗಳು ಮತ್ತು ಬುಲೆಟ್‌ಗಳು ಪತ್ತೆಯಾಗಿದ್ದರಿಂದ ಇದು ಉಗ್ರರ ಸಂಚಿರಬಹುದೆಂದು ಶಂಕಿಸಲಾಗಿತ್ತು.

ಹಡಗಿನ ಮಾಲೀಕರು ಆಸ್ಟ್ರೇಲಿಯಾದ ಮಹಿಳೆಯಾಗಿದ್ದು, ಅವರ ಪತಿ ಅದರ ಕ್ಯಾಪ್ಟನ್ ಆಗಿದ್ದಾರೆ ಎಂದು ಗೃಹ ಖಾತೆಯನ್ನು ಹೊಂದಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ

‘ಸದ್ಯದ ಮಾಹಿತಿ ಪ್ರಕಾರ, ಭಯೋತ್ಪಾದಕ ಕೃತ್ಯವೆಂದು ಹೇಳಲು ಬರುವುದಿಲ್ಲ. ಆದರೆ, ತನಿಖೆ ನಡೆಯುತ್ತಿದೆ. ಯಾವುದೇ ಕೋನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಾನು ಪ್ರಾಥಮಿಕ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನೆ’ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವು ತನಿಖೆ ನಡೆಸುತ್ತಿದೆ. ನಾಲ್ಕು ಮೀಟರ್ ಅಗಲವಿರುವ ಈ ವಿಹಾರ ನೌಕೆ ಜೂನ್‌ನಲ್ಲಿ ಮಸ್ಕತ್‌ನಿಂದ ಯುರೋಪ್‌ಗೆ ತೆರಳುತ್ತಿದ್ದಾಗ ಹವಾಮಾನ ವೈಪರೀತ್ಯಕ್ಕೆ ಸಿಲುಕಿತು. ಎಂಜಿನ್ ದೋಷ ಕಂಡು ಬಂದ ನಂತರ ಆಸ್ಟ್ರೇಲಿಯಾದ ದಂಪತಿ ಅದನ್ನು ಅಲ್ಲಿಯೇ ಕೈಬಿಟ್ಟರು ಎಂದು ಅವರು ಹೇಳಿದ್ಧಾರೆ.

ಪ್ರಕರಣ ಕುರಿತಂತೆ ತನಿಖೆ ನಡೆಸುವಂತೆ ರಾಯಗಡದ ಶಾಸಕಿ ಅದಿತಿ ತತ್ಕರೆ ಕೋರಿದ ನಂತರ, ಪ್ರಾಥಮಿಕ ಮಾಹಿತಿ ಆಧರಿಸಿ ಭಯೋತ್ಪಾದನೆಯ ಕೃತ್ಯವೆಂದು ಹೇಳಲಾಗದು. ಆದರೆ, ವಿಹಾರ ನೌಕೆ ಏಕೆ ಶಸ್ತ್ರಾಸ್ತ್ರಗಳನ್ನು ಹೊಂದಿತ್ತು ಎಂಬುದು ಸ್ಪಷ್ಟವಾಗಿಲ್ಲ ಎಂದು ಫಡಣವಿಸ್ ಹೇಳಿದರು.

ಈ ಮಧ್ಯೆ, ಒಮನ್ ಕರಾವಳಿಯಲ್ಲಿ ಜೂನ್‌ನಲ್ಲಿ ಹಡಗಿನ ಸಿಬ್ಬಂದಿಯನ್ನು ರಕ್ಷಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶ್ರೀವರ್ಧನ್ ಬಳಿ ಪತ್ತೆ

ಮುಂಬೈನಿಂದ 190 ಕಿಮೀ ದೂರದಲ್ಲಿರುವ ಶ್ರೀವರ್ಧನ್ ಬಳಿ ಸಿಬ್ಬಂದಿ ಇಲ್ಲದ ವಿಹಾರ ನೌಕೆಯನ್ನು ಗಮನಿಸಿದ ಸ್ಥಳೀಯರು, ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಸದ್ಯಕ್ಕೆ, ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇದು ಬ್ರಿಟನ್‌ನಲ್ಲಿ ನೋಂದಾವಣೆಗೊಂಡಿರುವ ವಿಹಾರ ನೌಕೆಯಾಗಿದ್ದು, ಒಮನ್‌ನಿಂದ ಯುರೋಪ್‌ಗೆ ಪ್ರಯಾಣಿಸುತ್ತಿತ್ತು. ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಜೂನ್ 26 ರಂದು ಮಸ್ಕತ್‌ನ ಸುತ್ತಮುತ್ತಲ ಪ್ರದೇಶದಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಯಿತು’ಎಂದು ಅಧಿಕಾರಿ ಹೇಳಿದ್ದಾರೆ. ವಿಹಾರ ನೌಕೆಯು ಎಕೆ ಸರಣಿಯ ಕೆಲವು ಸಣ್ಣ ಶಸ್ತ್ರಾಸ್ತ್ರಗಳನ್ನು ಸಹ ಹೊತ್ತೊಯ್ಯುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಕುರಿತಂತೆ, ಶಸ್ತ್ರಾಸ್ತ್ರ ಮಾರಾಟಗಾರರನ್ನು ಸಂಪರ್ಕಿಸಲಾಗಿದ್ದು, ಹಡಗಿನಲ್ಲಿ ಪತ್ತೆಯಾದ ಶಸ್ತ್ರಾಸ್ತ್ರಗಳ ಸರಣಿ ಸಂಖ್ಯೆಗಳು ಮಾರಾಟಗಾರರ ದಾಸ್ತಾನುಗಳಿಂದ ಕಾಣೆಯಾದವುಗಳೊಂದಿಗೆ ಹೊಂದಿಕೆಯಾಗುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.

‘ನೌಕೆಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಅನುಮತಿ ಇದೆ. ಅದರಲ್ಲಿದ್ದ ಜನರು ನೌಕೆಯನ್ನು ತ್ಯಜಿಸಿದಾಗ, ಅವರು ತಮ್ಮೊಂದಿಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿರಲಿಲ್ಲ,. ನಂತರ, ನೌಕೆ ತೇಲಿಕೊಂಡು ಮಹಾರಾಷ್ಟ್ರದ ಕರಾವಳಿಗೆ ಬಂದಿದೆ’ ಎಂದು ಅವರು ಹೇಳಿದ್ಧಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು