ಸೋಮವಾರ, ಮೇ 16, 2022
24 °C

ಸಂಬಂಧಗಳ ಅನುಬಂಧ

ಲಾವಣ್ಯಗೌರಿ ವೆಂಕಟೇಶ್ Updated:

ಅಕ್ಷರ ಗಾತ್ರ : | |

Prajavani

ಬಂಧನವಿದ್ದರೆ ಮಾತ್ರ ಸಂಬಂಧಗಳು ಉಳಿಯುತ್ತವೆ. ಇಲ್ಲದಿದ್ದರೆ ಸಂಬಂಧಗಳು ಕಳಚಿ ಬೀಳುತ್ತವೆ. ಆದರೆ ಆ ಬಂಧನಗಳು ಪ್ರೀತಿಯ ಬಂಧನವಾಗಿರಬೇಕು. ಬಲವಂತವಾಗಿ ಯಾವ ಸಂಬಂಧಗಳೂ ಉಳಿಯಲಾರವು. ಗಂಡ-ಹೆಂಡತಿ, ಅತ್ತೆ-ಸೊಸೆ, ಅಪ್ಪ-ಮಗ, ಅಮ್ಮ-ಮಗಳು, ಅತ್ತಿಗೆ-ನಾದಿನಿ, ಸ್ನೇಹಿತರು ಹೀಗೆ ಯಾವುದೇ ಸಂಬಂಧವಾದರೂ ಪ್ರೀತಿಯ ಲೇಪನದಿಂದ ಅನುಬಂಧ ಉಂಟಾಗುತ್ತದೆ.

ಪ್ರತಿಯೊಂದು ಸಂಬಂಧದಲ್ಲೂ ಸರಸ-ವಿರಸಗಳು ಇದ್ದೇ ಇರುತ್ತವೆ. ಅವು ಅತಿಯಾದರೆ ಬಿರುಕುಗಳು ಹೆಚ್ಚುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಪ್ಪನ್ನು ಮತ್ತೊಬ್ಬರ ಮೇಲೆ ಹೊರಿಸುವವರೇ! ಜಗಳವಾಡಿ, ವಾದಮಾಡಿ ತಪ್ಪನ್ನು ಎದುರಾಳಿಯದೆಂದು ತೀರ್ಮಾನಿಸುವುದರಿಂದ ನಾವು ಸರಿ ಎಂದಾಗುವುದಿಲ್ಲ. ಜೀವನದಲ್ಲಿ ನಾವೇನನ್ನು ಕೊಡುತ್ತೇವೆಯೋ ಅದನ್ನೇ ಪಡೆದುಕೊಳ್ಳುತ್ತೇವೆ. ನಾವು ಪ್ರೀತಿಸಿದರೆ ಮಾತ್ರ ಪ್ರೀತಿ ನಮ್ಮನ್ನರಸಿ ಬರುತ್ತದೆ. ನಾವು ದ್ವೇಷಿಸಿದರೆ ನಮಗೆ ಪ್ರತಿಯಾಗಿ ಸಿಗುವುದು ದ್ವೇಷವೇ ಹೊರತು ಪ್ರೀತಿಯಲ್ಲ!

ಪ್ರೀತಿಸುವುದರಿಂದ ದ್ವೇಷದ ನಾಶ ಖಂಡಿತ. ಆದರೆ ಅದು ಮಾಯಾಜಾಲದಂತೆ ಒಮ್ಮೆಗೆ ಆಗುವುದಿಲ್ಲ. ಇಲ್ಲಿ ಸಹನೆಯ ಪಾತ್ರ ದೊಡ್ಡದು. ಪ್ರೀತಿಯನ್ನು ವ್ಯಕ್ತಪಡಿಸಲು ಹಲವಾರು ವಿಧಗಳಿವೆ. ಕೃತಙ್ಞತೆಯಿಂದ, ಕರುಣೆಯಿಂದ, ಸಹಾಯದಿಂದ, ವಾತ್ಸಲ್ಯದಿಂದ - ಹೀಗೆ ಹಲವು ರೀತಿಗಳಲ್ಲಿ ಪ್ರೀತಿಯನ್ನು ತೋರಿಸಬಹುದು. ಎಂತಹ ಕೆಟ್ಟ ವ್ಯಕ್ತಿಯನ್ನೂ ಪ್ರೀತಿಯಿಂದ ಗೆಲ್ಲಬಹುದೇ ಹೊರತು ವೈರತ್ವದಿಂದಲ್ಲ.

ಜೀವನ ಎಲ್ಲರಿಗೂ ಪ್ರೀತಿ ಮತ್ತು ದ್ವೇಷದ ವಾತಾವರಣವನ್ನು ಕಲ್ಪಿಸುತ್ತಿರುತ್ತದೆ. ನಾವು ಯಾವುದನ್ನು ಆರಿಸಿಕೊಳ್ಳುತ್ತೇವೆಯೊ ಅದೇ ನಮಗೆ ಸಿಗುತ್ತದೆ! ಸದಾ ಕಾಲ ಕಾಡು ಹರಟೆಯಲ್ಲಿ ಮುಳುಗಿ ಮತ್ತೊಬ್ಬರನ್ನು ಹಿಯಾಳಿಸುವುದನ್ನು ಆರಿಸಿಕೊಂಡರೆ ನಮ್ಮ ಮನದಲ್ಲಿ ಕೆಟ್ಟ ಭಾವನೆಗಳು ಹೆಚ್ಚುತ್ತಾ ಹೋಗುತ್ತವೆ. ಅದೇ ಸಮಯದಲ್ಲಿ ಒಬ್ಬರನ್ನು ಪ್ರಶಂಸಿಸುತ್ತ, ಪ್ರೀತಿಸುತ್ತ ಹೋದರೆ, ಒಳ್ಳೆಯ ಭಾವನೆಗಳು ಹೆಚ್ಚಾಗಿ ಒಳ್ಳೆಯ ವಾತಾವರಣವೇ ನಿರ್ಮಾಣಗೊಳ್ಳುತ್ತದೆ. ಕೆಟ್ಟು ಹೋಗಿರುವ ಪರಿಸ್ಥಿತಿಯನ್ನು ಕೆಟ್ಟ ಭಾವನೆಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ನಾವು ಒಳ್ಳೆಯ ಭಾವನೆಯನ್ನು ಹೊಂದಿದ್ದರೆ, ಒಳ್ಳೆಯ ಪ್ರಭಾವಳಿ ನಮ್ಮನ್ನು ಸುತ್ತುವರಿಯುವುದಲ್ಲದೇ, ನಮ್ಮ ಸುತ್ತಲಿನ ವಾತಾವರಣವನ್ನೂ ಒಳ್ಳೆಯದನ್ನಾಗಿ ಪರಿವರ್ತಿಸುತ್ತದೆ; ನಮ್ಮೊಂದಿಗಿರುವ ಜನರನ್ನೂ ಒಳ್ಳೆಯವರನ್ನಾಗಿಸುತ್ತದೆ. ಒಳ್ಳೆಯ ಪರಿಸರ, ಒಳ್ಳೆಯ ಜನರಿಂದ ಒಳ್ಳೆಯ ಸಂಬಂಧಗಳು ತನ್ನಿಂದ ತಾನೇ ನಿರ್ಮಾಣಗೊಳ್ಳುತ್ತವೆ. ಮೊದಲು ನಾವು ಬದಲಾದರೆ, ಬೇರೆಯವರನ್ನೂ ಬದಲಿಸಬಹುದು!

ಪ್ರೀತಿ ಎನ್ನುವುದು ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆಯುತ್ತದೆ. ಪ್ರೀತಿಗಿರುವ ಶಕ್ತಿ ಅಪಾರ. ಸಂಬಂಧಗಳ ಸಮಸ್ಯೆಗೆ ಪ್ರೀತಿಯೇ ಪರಿಹಾರ. ದಾರಿಯಲ್ಲಿ ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಗೆ ಒಂದು ಮಂದಹಾಸ ಬೀರಿದರೆ, ಅವರೂ ತಿರುಗಿ ಮುಗುಳ್ನಗುತ್ತಾರೆ. ನೀವು ಸಿಟ್ಟಿನಿಂದ ನೋಡಿದರೆ, ಅವರೂ ಹಾಗೆಯೇ ನೋಡುತ್ತಾರೆ. ನಮ್ಮ ಒಂದು ಮುಗುಳ್ನಗೆ ಅಪರಿಚಿತರನ್ನೂ ಪರಿಚಿತ ನಗೆ ಬೀರುವಂತೆ ಮಾಡುವುದಾದರೆ, ನಮ್ಮ ಒಳ್ಳೆಯ ಭಾವನೆಗಳು ನಮ್ಮೊಂದಿಗಿರುವ ಜನರನ್ನು ಒಳ್ಳೆಯವರನ್ನಾಗಿ ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ. ಸಂಬಂಧಗಳಲ್ಲಿ ಜಗಳವಾಡಿ, ವಾದಮಾಡಿ, ‘ನೀನು ತಪ್ಪು’ ಎಂದು ಬೆರಳು ಮಾಡಿ ತೋರಿಸುವುದರಿಂದ ಏನೂ ಪ್ರಯೋಜನವಿಲ್ಲ. ಯಾರು ಸರಿ, ಯಾರು
ತಪ್ಪು – ಎಂದು ವೃಥಾ ವಾದದಲ್ಲಿ ತೊಡಗುವುದರ ಬದಲು, ಆ ವ್ಯಕ್ತಿಯಲ್ಲಿರುವ ಒಳ್ಳೆಯ ಭಾವನೆಗಳನ್ನು ಪ್ರೀತಿಸಿ, ಗೌರವಿಸಿ. ನಿಮ್ಮೆದುರಿಗಿನ ವ್ಯಕ್ತಿ ನಿಮ್ಮನ್ನು ನಿಂದಿಸಿದಾಗ ಬೇಜಾರಾಗುವುದು, ಕೋಪ ಬರುವುದು ಸಹಜ. ಹಾಗೆ ಕೋಪಿಸಿಕೊಂಡು ಜಗಳವನ್ನು ಮುಂದುವರೆಸುವ ಬದಲು ಆ ಜಾಗದಿಂದ ಹೊರಗೆ ಬನ್ನಿ. ಆ ವಿಷಯದ ಬಗ್ಗೆಯೇ ಚಿಂತಿಸಿ, ದುಃಖಿಸುವ ಬದಲು ನೀವು ಇಷ್ಟಪಡುವ ವಿಷಯಗಳತ್ತ ಗಮನಹರಿಸಿ. ಸಾಧ್ಯವಾದರೆ, ನಿಮ್ಮನ್ನು ನಿಂದಿಸಿದ ವ್ಯಕ್ತಿಯ ಬಗ್ಗೆ ನೀವಿಷ್ಟಪಡುವ ಗುಣಗಳತ್ತ ಗಮನ ಹರಿಸಿ. ಇದು ಸುಲಭವಲ್ಲ. ಇದೊಂದು ಸವಾಲೇ ಸರಿ. ಈ ಸವಾಲಿನಲ್ಲಿ ನೀವು ಗೆದ್ದರೆ, ಆ ನಿಂದಿಸಿದ ವ್ಯಕ್ತಿಯ ಬಗ್ಗೆ ನಿಮಗೆ ಮೊದಲಿದ್ದ ಭಾವನೆ ಖಂಡಿತ ಬದಲಾಗಿರುತ್ತದೆ! ಅಷ್ಟೇ ಅಲ್ಲ, ಬದಲಾದ ನಿಮ್ಮ ಭಾವನೆಯೊಂದಿಗೆ ಆ ವ್ಯಕ್ತಿಯನ್ನು ಕೂಡ ನೀವು ಬದಲಿಸಬಹುದು! ಇದಕ್ಕೆ ತಾಳ್ಮೆ ಬಹಳ ಮುಖ್ಯ.

ನಿಮ್ಮ ಭಾವನೆಗಳ ಹಿಡಿತ ನಿಮ್ಮ ಕೈಯಲ್ಲಿದ್ದರೆ, ನಿಮ್ಮನ್ನು ನೀವು ಗೆದ್ದರೆ, ಅನ್ಯರ ಪ್ರೀತಿಯನ್ನೂ ಖಂಡಿತ ಗೆಲ್ಲಬಹುದು. ಪ್ರೀತಿಯಿಂದ ಮೂಕಪ್ರಾಣಿಗಳನ್ನೇ ಗೆಲ್ಲಬಹುದಾದರೆ, ಮನುಷ್ಯರನ್ನು ಗೆಲ್ಲಲು ಏಕಾಗದು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು