ಸೋಮವಾರ, ಸೆಪ್ಟೆಂಬರ್ 27, 2021
21 °C

ಕುಟುಂಬದವರೊಂದಿಗೆ ಊಟ- ಸೌಹಾರ್ದಕ್ಕೆ ನಾಂದಿ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಮಾನಸಿ ಶರ್ಮಾಗೆ ಗಂಡ–ಮಕ್ಕಳಿಗೆ ಸಮಯ ಕೊಡಲು ಆಗುತ್ತಿಲ್ಲ ಎಂಬ ಸಂಕಟ. ‘ಮೊದಲೆಲ್ಲಾ ದಿನಕ್ಕೊಮ್ಮೆಯಾದರೂ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ–ತಿಂಡಿ ಮಾಡುತ್ತಿದ್ದೆವು. ಆದರೆ ಮನೆಯಿಂದಲೇ ಕಚೇರಿ ಕೆಲಸ ಆರಂಭವಾದಾಗಿನಿಂದ ಎಲ್ಲವೂ ಬದಲಾಗಿದೆ. ಗಂಡ–ಮಕ್ಕಳೊಂದಿಗೆ ಒಟ್ಟಿಗೆ ಕುಳಿತು ತಿನ್ನಲೂ ಸಮಯವಿಲ್ಲ’ ಎಂದು ಫೋನ್‌ನಲ್ಲಿ ಗೆಳತಿ ಜೊತೆ ಮನದ ಸಂಕಟ ಹೇಳಿಕೊಂಡಿದ್ದರು ಮಾನಸಿ.

‘ಈಗೀಗ ಹೆಂಡತಿ–ಮಕ್ಕಳ ಜೊತೆಗಿನ ಬಾಂಧವ್ಯವೇ ಕಡಿಮೆಯಾಗಿದೆ. ಮೊದಲೆಲ್ಲಾ ನಾವು ಒಂದಾಗಿ ಹೋಟೆಲ್‌ಗೆ ಹೋಗುವುದು, ಒಟ್ಟಿಗೆ ಕುಳಿತು ಊಟ ಮಾಡುವುದು ಮಾಡುತ್ತಿದ್ದೆವು. ಆದರೆ ಕೋವಿಡ್‌ ಶುರುವಾದಾಗಿನಿಂದ ಎಲ್ಲವೂ ಬದಲಾಗಿದೆ. ‘‘ನಾವು ಮೊದಲಿನಂತೆ ಇರಬೇಕು’’ ಎಂದು ಹೆಂಡತಿ–ಮಕ್ಕಳು ಹೇಳುವಾಗ ಸಂಕಟವಾಗುತ್ತದೆ’ ಎಂದು ನೋವು ತೋಡಿಕೊಳ್ಳುತ್ತಾರೆ ಮಾಧ್ಯಮ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಹರೀಶ್‌ ಗೌಡ.

ಕೊರೊನಾ, ಸತತವಾದ ಲಾಕ್‌ಡೌನ್‌, ಮನೆಯಿಂದಲೇ ಕಚೇರಿ ಕೆಲಸ ಆರಂಭವಾದಾಗಿನಿಂದ ಕೆಲಸದ ಒತ್ತಡ, ಮಾನಸಿಕ ಚಿಂತೆ, ಸಮಯದ ಅಭಾವದ ಕಾರಣದಿಂದ ಕುಟುಂಬದವರ ನಡುವಿನ ಬಾಂಧವ್ಯ–ಸೌಹಾರ್ದ ಕಡಿಮೆಯಾಗುತ್ತಿದೆ. ಇದರಿಂದ ಕುಟುಂಬದವರಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬುದು ದುಡಿಯುವ ಮಂದಿಯ ಅಳಲು. ಆದರೆ ಇದಕ್ಕೆ ಪರಿಹಾರವೆಂದರೆ ‘ಫ್ಯಾಮಿಲಿ ಮೀಲ್ಸ್’ ಅಥವಾ ಕುಟುಂಬದವರೆಲ್ಲಾ ಒಂದಾಗಿ ಕುಳಿತು ಊಟ ಮಾಡುವುದು. ಫ್ಯಾಮಿಲಿ ಮೀಲ್ಸ್ ಎಂಬುದು ಕುಟುಂಬದವರ ನಡುವೆ ಸೌಹಾರ್ದವನ್ನು ಹೆಚ್ಚಿಸುತ್ತದೆ ಎನ್ನುತ್ತದೆ ಅಧ್ಯಯನ. ಜೊತೆಗೆ ಒಟ್ಟಾಗಿ ಕುಳಿತು ಊಟ ಮಾಡುವುದರಿಂದ ಆರೋಗ್ಯವಾಗಿಯೂ, ಸಂತೋಷವಾಗಿಯೂ ಇರಬಹುದು. ದಿನದಲ್ಲಿ ಒಂದು ಬಾರಿಯಾದರೂ ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವುದರಿಂದ ಮನಸ್ಸು ಹಾಗೂ ಹೊಟ್ಟೆ ಪ್ರಫುಲ್ಲವಾಗಿರುತ್ತದೆ. ಒಟ್ಟಾಗಿ ಕುಳಿತು ಮಾತನಾಡಿಕೊಂಡು ಊಟ ಮಾಡುವುದರಿಂದ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಬಹುದು.

ಒಟ್ಟಾಗಿ ಇರಲು ಒಂದು ಅವಕಾಶ

ಎಲ್ಲರೂ ಕುಳಿತು ಊಟ ಮಾಡುವುದರಿಂದ ದಿನಕ್ಕೊಂದು ಬಾರಿಯಾದರೂ ಮನೆಯವರೆಲ್ಲರೂ ಒಂದು ಕಡೆ ಸೇರಲು ಅವಕಾಶ ಸಿಕ್ಕಂತಾಗುತ್ತದೆ. ಮಕ್ಕಳು ಕೂಡ ಒಂಟಿಯಾಗಿ ತಿನ್ನುವುದಕ್ಕಿಂತ ಪೋಷಕರ ಜೊತೆ ತಿನ್ನಲು ಹೆಚ್ಚು ಇಷ್ಟಪಡುತ್ತವೆ. ಎಲ್ಲರೂ ಸೇರಿ ಖುಷಿಯಿಂದ ಮಾತನಾಡಿಕೊಂಡು ಅಂದಿನ ದಿನಚರಿ ಹಾಗೂ ನಾಳೆಯ ಬಗ್ಗೆ ಚರ್ಚೆ ಮಾಡಿಕೊಂಡು ತಿನ್ನುವುದರಿಂದ ಮನಸ್ಸಿಗೂ ಖುಷಿ ಸಿಗುತ್ತದೆ. ಮಕ್ಕಳಿಗೂ ತಂದೆ–ತಾಯಿಯ ಜೊತೆ ಸಮಯ ಕಳೆಯಲು ಊಟದ ಟೇಬಲ್‌ ಉತ್ತಮ ಸ್ಥಳ.

ರುಚಿಯೊಂದಿಗೆ ಆರೋಗ್ಯ

ಮನೆಯವರೆಲ್ಲಾ ಹೋಟೆಲ್‌ಗೆ ಹೋಗಿ ಊಟ ಮಾಡುವುದಕ್ಕಿಂತ ಮನೆಯಲ್ಲೇ ಕುಳಿತು ಊಟ ಮಾಡುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡರ ದೃಷ್ಟಿಯಿಂದಲೂ ಉತ್ತಮ. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ತಿನಿಸುಗಳನ್ನು ತಯಾರಿಸಿ, ಒಟ್ಟಿಗೆ ಕೂತು ತಿನ್ನುವ ಖುಷಿಯೇ ಬೇರೆ. ಎಲ್ಲರೂ ಒಟ್ಟಾಗಿ ಕುಳಿತು ತಿನ್ನುವಾಗ ಭಿನ್ನ ಖಾದ್ಯಗಳಿಗೆ ಪ್ರಾಮುಖ್ಯ ನೀಡಿ. ರುಚಿಯೊಂದಿಗೆ ಆರೋಗ್ಯಕ್ಕೂ ಹಿತ ಎನ್ನಿಸುವ ಆಹಾರಗಳು ಊಟದ ಟೇಬಲ್‌ ಅನ್ನು ಅಲಂಕರಿಸಲಿ. ಒಂದು ವೇಳೆ ಊಟಕ್ಕೆ ಜೊತೆಯಾಗಲಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೆ ಸಂಜೆ ಸ್ನಾಕ್ಸ್ ಅಥವಾ ಬೆಳಗಿನ ಉಪಾಹಾರದ ಸಮಯದಲ್ಲಾದರೂ ಒಟ್ಟಾಗಿ ಕುಳಿತುಕೊಳ್ಳಿ.

ಸಮಯಕ್ಕೆ ಕಾಯಬೇಡಿ

ಒಟ್ಟಾಗಿ ಕುಳಿತು ಊಟ ಮಾಡಲು ನಿರ್ದಿಷ್ಟ ಸಮಯ ಬೇಕು ಎಂದು ಕಾಯಬೇಡಿ. ಈಗಿನ ದಿನಗಳಲ್ಲಿ ಸಮಯದ ಅಭಾವ ಸಾಮಾನ್ಯ, ಹಾಗಾಗಿ ಇರುವ ಸಮಯವನ್ನೇ ಹೊಂದಿಸಿಕೊಳ್ಳಿ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆ ಸ್ಯಾಕ್ಸ್, ರಾತ್ರಿ ಊಟ ಹೀಗೆ ಯಾವುದೇ ಇರಲಿ.. ಎಲ್ಲರೂ ಒಟ್ಟಿಗೆ ಕೂತು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಹಾಸ್ಯಕ್ಕೂ ಇರಲಿ ಸಮಯ

ಊಟದ ಟೇಬಲ್‌ನಲ್ಲಿ ಹಾಸ್ಯಕ್ಕೆ ಅವಕಾಶವಿರಲಿ. ನಗುವಿಗೆ ನೋವು, ಒತ್ತಡ, ಚಿಂತೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ. ಹಾಗಾಗಿ ಎಲ್ಲರೂ ಒಂದಾಗಿ ಊಟಕ್ಕೆ ಕುಳಿತಾಗ ಹಾಸ್ಯ ಚಟಾಕಿ ಹಾರಿಸುತ್ತಾ, ತಮಾಷೆ ಮಾಡಿಕೊಳ್ಳುತ್ತಾ ಊಟ ಮಾಡಿ. ಇದರಿಂದ ಹಿರಿಯರೊಂದಿಗೆ ಮಕ್ಕಳಿಗೂ ಸಂತಸ ಸಿಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.