ಗುರುವಾರ , ಜೂನ್ 17, 2021
27 °C

ವಾರದ ಆರಂಭದ ಬೇಸರವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನನಗೆ ಮೊದಲಿನಿಂದಲೂ ಸೋಮವಾರ ಬಂತೆಂದರೆ ಏನೋ ಬೇಜಾರು, ಆತಂಕ, ಒತ್ತಡ ಎನ್ನಿಸುತ್ತಿತ್ತು. ಭಾನುವಾರ ರಾತ್ರಿ ಸರಿಯಾಗಿ ನಿದ್ದೆಯೇ ಬರುವುದಿಲ್ಲ. ನಾಳೆ ಬೆಳಗಾದರೆ ಮತ್ತದೇ ಕೆಲಸ, ಟ್ರಾಫಿಕ್‌, ಬಾಸ್‌ನ ಕಿರಿಕಿರಿ ಹೀಗೆ ಮನಸ್ಸಿನಲ್ಲಿ ಒಂದು ರೀತಿಯ ಅಸಹನೆ. ಆದರೆ ಆ ಬೇಸರ ಕೋವಿಡ್‌–19ನಿಂದಾಗಿ ಮನೆಯಿಂದಲೇ ಕೆಲಸ ಮಾಡುವಾಗಲೂ ಕಡಿಮೆಯಾಗಿಲ್ಲ. ಈಗಲೂ ಸೋಮವಾರ ಬಂದರೆ ಮನಸ್ಸಿನಲ್ಲಿ ದುಗುಡ ಆರಂಭವಾಗುತ್ತದೆ’ ಎಂಬುದು ಐಟಿ ಉದ್ಯೋಗಿ ಅವಿನಾಶ್ ಮಾತು.  

ಕೊರೊನಾ ಆರಂಭಕ್ಕೂ ಮೊದಲು ಉದ್ಯೋಗಿಗಳಲ್ಲಿದ್ದ ಸೋಮವಾರದ ಬೇಸರ(ಮಂಡೇ ಬ್ಲೂಸ್‌) ಕೊರೊನಾ ಬಂದು ಮನೆಯಿಂದಲೇ ಕೆಲಸ ಮಾಡುವಾಗಲೂ ಕಡಿಮೆಯಾಗಿಲ್ಲ. ಮನೆಯಿಂದಲೇ ಕೆಲಸ ಮಾಡುವ ಶೇ 75 ರಷ್ಟು ಮಂದಿಯನ್ನು ಸೋಮವಾರದ ಬೇಸರ ಕಾಡುತ್ತಿದೆ ಎನ್ನುತ್ತದೆ ಅಧ್ಯಯನವೊಂದರ ವರದಿ. 

ಸೋಮವಾರದ ಬೇಸರಕ್ಕೆ ಕಾರಣಗಳು 

ಮನಸ್ಸು ಹಳೆಯ ದಿನಗಳನ್ನು ನೆನಪಿಸುತ್ತಿರುತ್ತದೆ, ಜೊತೆಗೆ ಹೊಸತನ್ನು ಒಪ್ಪಿಕೊಳ್ಳಲು ಹೆಣಗಾಡುತ್ತಿರುತ್ತದೆ. ಬದಲಾದ ದಿನಚರಿಯ ನಡುವೆ ಮತ್ತೆ ಮರಳಿ ಹಳೆಯ ದಿನಗಳು ಬರುತ್ತದೋ ಇಲ್ಲವೋ ಎಂಬ ಆತಂಕ ಕಾಡುತ್ತಿರುತ್ತದೆ. ಹಿಂದಿನ ದಿನಗಳಲ್ಲಿ ಬೆಳಿಗ್ಗೆ ಎದ್ದು ಕಚೇರಿಗೆ ಹೋಗುವ ಸಂಭ್ರಮ ಈಗ ಇಲ್ಲದೇ ಇರುವುದು ಮಾನಸಿಕ ಕಿರಿಕಿರಿಗೆ ಕಾರಣವಾಗಬಹುದು. ಇದರಿಂದ ದುಃಖ, ಅಚ್ಚರಿ, ಕೋಪ, ನಿರಾಕರಣೆ, ಖಿನ್ನತೆ, ಹೊಸತನ್ನು ಒಪ್ಪಿಕೊಳ್ಳಲು ಹೆಣಗಾಡುವುದು ಈ ಎಲ್ಲಾ ಭಾವನೆಗಳು ಸೋಮವಾರದ ಬೇಸರಕ್ಕೆ ಕಾರಣವಾಗಬಹುದು.

ಜನರು ವಾರದ ದಿನಗಳಲ್ಲಿ ಅತೀ ಹೆಚ್ಚು ಕೆಲಸದ ಮೇಲೆ ಗಮನಹರಿಸುತ್ತಿರುತ್ತಾರೆ. ವಾರಾಂತ್ಯದಲ್ಲೂ ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಇದರಿಂದಲೂ ಬೇಸರ ಮೂಡಬಹುದು.

ಹಣಕಾಸಿನ ಕುರಿತು ಚಿಂತೆ: ಕೊರೊನಾ ಬಂದಾಗಿನಿಂದ ಅನೇಕರು ಹಣಕಾಸಿನ ಕುರಿತು ದಿಗಿಲುಗೊಂಡಿದ್ದಾರೆ. ಅಲ್ಲದೇ ತಮ್ಮ ವೃತ್ತಿ ಬದುಕಿನ ಭದ್ರತೆಯ ಕುರಿತೂ ಭಯ ಮೂಡಿದೆ. ಅನೇಕರಿಗೆ ಸೋಮವಾರ ಬಂತೆಂದರೆ ಈ ವಾರ ನನಗೆ ಏನು ಕಾದಿದೆಯೋ, ಕೆಲಸ ಕಳೆದುಕೊಳ್ಳುತ್ತೇನೋ, ಸಂಬಳದಲ್ಲಿ ಕಡಿತ ಮಾಡುವರೋ ಎಂಬೆಲ್ಲಾ ಭಯ ಕಾಡಲು ಆರಂಭವಾಗುತ್ತದೆ. ಇದು ಸೋಮವಾರದಿಂದ ಆರಂಭವಾಗಿ ವಾರದ ಕೊನೆಯವರೆಗೂ ಕಾಡಬಹುದು.

ಪರಿಹಾರಗಳು

ಸೋಮವಾರದಿಂದ ಶನಿವಾರದವರೆಗೆ ಏನು ಮಾಡಬೇಕು ಎಂದು ಮೊದಲೇ ಯೋಚಿಸಿಕೊಳ್ಳಿ. ಭಾನುವಾರವೇ ಮುಂದಿನ ವಾರ ಪೂರ್ತಿ ಯಾವ ಕೆಲಸ ಮಾಡಬೇಕು, ಹೇಗೆ ಮಾಡಬೇಕು ಎಂಬುದರ ಕುರಿತು ವೇಳಾಪಟ್ಟಿ ತಯಾರಿಸಿಕೊಳ್ಳಿ. ಈ ವಾರ ಮುಗಿಸಬೇಕಾದ ಕೆಲಸಗಳನ್ನು ಈ ವಾರವೇ ಮುಗಿಸಿ. ಅದನ್ನು ಮುಂದಕ್ಕೆ ಹಾಕಬೇಡಿ. 

ವಾರಾಂತ್ಯದಲ್ಲಿ ಇಮೇಲ್‌ ನೋಡುವುದು, ವಾಯ್ಸ್‌ಮೇಲ್ ಪರಿಶೀಲನೆ ಮಾಡುವುದಕ್ಕೆ ಕಡಿವಾಣ ಹಾಕಿ. ಇಲ್ಲದಿದ್ದರೆ ಸೋಮವಾರ ನಾನು ಈ ಕೆಲಸ ಮಾಡಬೇಕು, ಹೇಗೆ ಮಾಡುವುದು, ಏನು ಮಾಡುವುದು ಎಂಬೆಲ್ಲಾ ಭಯ ಕಾಡಬಹುದು. ‌

ಭಾನುವಾರ ರಾತ್ರಿ ಬೇಗ ಮಲಗಿ ಬೇಗ ಏಳುವುದನ್ನು ಅಭ್ಯಾಸ ಮಾಡಿ. ಇದರಿಂದ ನಿದ್ದೆಯೂ ಸರಿಯಾಗಿ ಆಗುತ್ತದೆ. ಅಲ್ಲದೇ ಮನಸ್ಸು ಉಲ್ಲಾಸದಿಂದಿರುತ್ತದೆ. 

ಪ್ರತಿ ದಿನಕ್ಕಿಂತ ಸೋಮವಾರ 15 ನಿಮಿಷ ಹೆಚ್ಚು ಹೊತ್ತು ಯೋಗ ಧ್ಯಾನ ಮಾಡಿ. ಜೊತೆಗೆ ಮನಸ್ಸಿಗೆ ಖುಷಿ ನೀಡುವ ಉಪಾಹಾರ ಸೇವಿಸಿ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು