ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಆವಂತಿಸ್ವಾಮಿಯ ಸನ್ನಿಧಿಯಲ್ಲಿ...

Last Updated 3 ಜುಲೈ 2021, 19:31 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ದೇವಾಲಯಗಳ ಸಂಖ್ಯೆಗೆ ಏನೂ ಕಡಿಮೆ ಇಲ್ಲ. ಆದರೆ, ಹಲವು ದೇವಾಲಯಗಳು ಈಗ ಕೇವಲ ಭಗ್ನಾವಶೇಷಗಳಾಗಿ ಉಳಿದಿವೆ. ಭವ್ಯ ಇತಿಹಾಸವನ್ನು ಹೊಂದಿರುವ ಆವಂತಿಪುರದ ದೇವಾಲಯಗಳು ಕೂಡ ಅಂಥವುಗಳಲ್ಲಿ ಕೆಲವು. ಈ ಸ್ಮಾರಕಗಳನ್ನು ನೋಡುವ ಬೆಚ್ಚನೆ ಅನುಭವ ಪಡೆಯಬೇಕಾದರೆ ಪುಲ್ವಾಮಾ ತಣ್ಣಗಿರಬೇಕು...

ಕಾಶ್ಮೀರದ ಪುಲ್ವಾಮಾ ಎಂದೊಡನೆ ನಮ್ಮೆಲ್ಲರ ಮನಸ್ಸಿನಲ್ಲಿ ಥಟ್ಟನೆ ಸುಳಿದಾಡುವುದು ಉಗ್ರರ ದಾಳಿ, ಬಂದೂಕಿನ ಮೊರೆತ, ಶವಗಳ ಸಾಲು... ಬರೀ ಇಂತಹದ್ದೇ ನೋಟಗಳು. ಅಲ್ಲಿ ಜೀವನದಿಯಾಗಿ ಹರಿಯುವ ಜೀಲಂನ ವಯ್ಯಾರ (ಇದು ನಮ್ಮ ದಕ್ಷಿಣದ ನದಿಗಳಂತಲ್ಲ. ನೀರು ಈ ನದಿಯಲ್ಲಿ ಮಂದವಾಗಿ ಹರಿಯುತ್ತದೆ!), ವರ್ಣಿಸಲು ಅಸಾಧ್ಯವಾದ ಸ್ವರ್ಗಸದೃಶ ಪ್ರಾಕೃತಿಕ ಸೊಬಗು, ಹತ್ತಿರದ ಆವಂತಿಪುರದಲ್ಲಿರುವ ಸಾವಿರಾರು ವರ್ಷಗಳಷ್ಟು ಪುರಾತನವಾದ ದೇವಾಲಯಗಳ ಅವಶೇಷ ಯಾವುದೂ ನೆನಪಾಗದಂತೆ ಈಗಿನ ರಕ್ತಸಿಕ್ತ ಅಧ್ಯಾಯ ಉಳಿದ ಸಂಗತಿಗಳನ್ನೆಲ್ಲ ಮಸುಕಾಗಿಸಿಬಿಟ್ಟಿದೆ.

ಪುಲ್ವಾಮಾದಿಂದ ಸುಮಾರು 16 ಕಿಲೊಮೀಟರ್‌ ದೂರದಲ್ಲಿ ಜೀಲಂ ನದಿಯ ದಡದಲ್ಲಿರುವ ಆವಂತಿಪುರದ ಪ್ರಾಕೃತಿಕ ಸೊಬಗಿಗೆ ಸರಿಸಾಟಿಯಾದ ಮತ್ತೊಂದು ತಾಣ ಸಿಗುವುದು ಕಷ್ಟ. ಈ ಕಣಿವೆ ನಗರದಲ್ಲಿ ಹೆಜ್ಜೆ ಹೆಜ್ಜೆಗೆ ಹಾಕಲಾದ ಮಿಲಿಟರಿ ಬ್ಯಾರಿಕೇಡ್, ಪಟಾಕಿ ಸಿಡಿಸಿದಂತೆ ಆಗಾಗ ಕೇಳುವ ಬಂದೂಕಿನ ಶಬ್ದ ಮತ್ತು ಭಯದ ವಾತಾವರಣ ಆವಂತಿಪುರವನ್ನು ದೇಶದ ಉಳಿದ ಭಾಗಗಳ ಜನರಿಂದ ದೂರವೇ ಇಟ್ಟುಬಿಟ್ಟಿವೆ. ಆದರೆ, ಒಮ್ಮೆ ಆವಂತಿಪುರಕ್ಕೆ ಹೋದವರು ಅಲ್ಲಿನ ಸೊಬಗನ್ನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ.

ಆವಂತಿಪುರದ ಆವಂತಿಸ್ವಾಮಿನ್ ದೇವಾಲಯವು ಒಂದಾನೊಂದು ಕಾಲದಲ್ಲಿ ಪ್ರಖ್ಯಾತ ದೇಗುಲವಾಗಿದ್ದು ಇದನ್ನು ಉತ್ಪಲ ವಂಶದ ರಾಜಾ ಆವಂತಿವರ್ಮನ್ ನಿರ್ಮಿಸಿದ್ದ. ಕಾಶ್ಮೀರದಲ್ಲಿ ಆಳಿದ್ದ ಹಿಂದೂ ಅರಸರಲ್ಲಿ ಪ್ರಮುಖನೆಂದರೆ ಲಲಿತಾದಿತ್ಯ ಮುಕ್ತಪೀಡ (ಕ್ರಿ.ಶ.724- 781). ಈತನ ಸಾಮ್ರಾಜ್ಯ ಮಧ್ಯ ಏಷ್ಯಾ ಮತ್ತು ಗಂಗಾ ನದಿಯ ತಟದವರೆಗೂ ಹಬ್ಬಿತ್ತು ಎನ್ನುತ್ತದೆ ಇತಿಹಾಸ. ಈತ ಇಂದಿನ ಅನಂತನಾಗ್ ಬಳಿ ಮಾರ್ತಾಂಡ ಸೂರ್ಯ ದೇವಾಲಯ ಹಾಗೂ ಶಾರದಾ ಪೀಠವನ್ನು ನಿರ್ಮಿಸಿದ್ದ. ದುರದೃಷ್ಟವಶಾತ್ ಇವೆರಡೂ ದೇವಾಲಯಗಳು ಈಗ ವಿನಾಶದ ಅಂಚಿನಲ್ಲಿವೆ.

ಆವಂತಿಸ್ವಾಮಿನ್‌ ದೇವಾಲಯದ ಭಗ್ನಾವಶೇಷಗಳು
ಆವಂತಿಸ್ವಾಮಿನ್‌ ದೇವಾಲಯದ ಭಗ್ನಾವಶೇಷಗಳು

ಲಲಿತಾದಿತ್ಯನ ವಂಶದ ಕೊನೆಯ ಅರಸ ಚಿಪ್ಪಟ ಜಯಪೀಡ ಬಾಲಕನಾಗಿದ್ದ. ತನ್ನ ಚಿಕ್ಕಪ್ಪ ಉತ್ಪಲನ ಅಧೀನದಲ್ಲಿ ಆತ ಕಾರ್ಯ ನಿರ್ವಹಿಸಬೇಕಾಗಿತ್ತು. ಉತ್ಪಲ ಅರಸನಾಗುವ ಆಸೆಯಿಂದ ಜಯಪೀಡನನ್ನು ಕೊಂದು ಪಟ್ಟಕ್ಕೆ ಬಂದ. ಉತ್ಪಲನ ಮೊಮ್ಮಗನೇ ರಾಜಾ ಆವಂತಿವರ್ಮನ್. ಈ ವಿವರಣೆಯು ಕಲ್ಹಣನ ರಾಜತರಂಗಿಣಿ ಗ್ರಂಥದಲ್ಲಿದೆ. ಈತನ ಕಾಲದಲ್ಲಿ ಕಾಶ್ಮೀರ ಪ್ರಾಂತ್ಯ ಅತ್ಯಂತ ಉನ್ನತಿಯನ್ನು ಪಡೆದಿತ್ತು ಎಂದು ಉಲ್ಲೇಖವಾಗಿದೆ. ಈತ ಉಳಿದ ಅರಸರಂತೆ ಸಾಮ್ರಾಜ್ಯ ವಿಸ್ತರಣೆಗೆ ಕೈ ಹಾಕಲಿಲ್ಲ. ಬದಲಾಗಿ ತನ್ನ ಪ್ರಜೆಗಳ ಬದುಕಿನ ಮಟ್ಟ ಹೆಚ್ಚಿಸುವತ್ತ ಗಮನ ನೀಡಿದ್ದ. ತನ್ನ ಕಾಲದಲ್ಲಿ ಜನರನ್ನು ಶೋಷಣೆ ಮಾಡುತ್ತಿದ್ದ ದಮಾರಸ್ ಜಮೀನುದಾರರ ಪಾರುಪತ್ಯವನ್ನು ಹತೋಟಿಗೆ ತಂದ. ವ್ಯಾಪಾರ-ವಹಿವಾಟಿಗೆ ಪ್ರೋತ್ಸಾಹ ನೀಡಿದ್ದ ಈತ ತನ್ನ ಕಾಲದಲ್ಲಿ ಅನೇಕ ಕಟ್ಟಡಗಳು ಮತ್ತು ಅದ್ಭುತ ದೇವಾಲಯಗಳನ್ನು ನಿರ್ಮಿಸಿದ್ದ.

ಆವಂತಿವರ್ಮನ ಕಾಲದ ಅವಿಸ್ಮರಣೀಯ ದೇವಾಲಯಗಳೆಂದರೆ ಆವಂತಿಸ್ವಾಮಿನ್ ಮತ್ತು ಆವಂತೀಶ್ವರ ದೇವಾಲಯ. ಒಂದು ವಿಷ್ಣು, ಮತ್ತೊಂದು ಶಿವನ ದೇವಾಲಯ. ಆವಂತಿಸ್ವಾಮಿನ್‌ ದೇವಾಲಯವನ್ನು ಕ್ರಿ.ಶ. 853-855ರಲ್ಲಿ ನಿರ್ಮಿಸಲಾಯಿತು.

ಆವಂತಿವರ್ಮನ ಆಸ್ಥಾನಕ್ಕೆ ಅನೇಕ ಪಂಡಿತ-ಪ್ರಾಜ್ಞರು ಬಂದು ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದರು. ಅಂತಹ ವಿದ್ವಾಂಸರಲ್ಲಿ ಒಬ್ಬ ಆನಂದವರ್ಧನ ಎಂಬಾತ. ಈತ ತನ್ನ ಅತ್ಯಂತ ಮಹತ್ವದ ಕೃತಿ, ಶಬ್ದಗಳಿಗೆ ಸಂಬಂಧಿಸಿದ ಧ್ವನ್ಯಲೋಕವನ್ನು ಇಲ್ಲಿಯೇ ರಚಿಸಿದ ಎನ್ನಲಾಗುತ್ತದೆ. ಆವಂತಿಸ್ವಾಮಿನ್ ಮತ್ತು ಆವಂತೀಶ್ವರ ದೇವಾಲಯಗಳನ್ನು ಕ್ರಿ.ಶ. 1389ರಲ್ಲಿ ದೇವಾಲಯದ ತುಂಬಾ ಮದ್ದಿನ ಪುಡಿಯನ್ನು ತುಂಬಿಸಿ ಸ್ಫೋಟಿಸಿ ನೆಲಸಮ ಮಾಡಲಾಯಿತಂತೆ. ಆವಂತಿಪುರದಲ್ಲಿ ಈಗ ಅವುಗಳ ಅವಶೇಷಗಳನ್ನು ಮಾತ್ರ ಕಾಣಲು ಸಾಧ್ಯ. ಅಳಿದುಳಿದ ಅವಶೇಷಗಳನ್ನು ಕಂಡವರಿಗೆ ಗತಕಾಲದ ಭವ್ಯ ಚರಿತ್ರೆಯನ್ನೂ ನಂತರ ಎದುರಾದ ಕರಾಳ ದಿನಗಳನ್ನೂ ಅವುಗಳು ಒಟ್ಟಿಗೆ ಉಸುರುತ್ತಿರುವಂತೆ ಭಾಸವಾಗುತ್ತದೆ.

ಮಾರ್ತಾಂಡ ಸೂರ್ಯ ದೇವಾಲಯದ ಈಗಿನ ನೋಟ
ಮಾರ್ತಾಂಡ ಸೂರ್ಯ ದೇವಾಲಯದ ಈಗಿನ ನೋಟ

ಆವಂತಿಪುರಕ್ಕೆ ಸುಮಾರು 78 ಕಿಲೊಮೀಟರ್‌ ದೂರದಲ್ಲಿ ಬಾರಮುಲ್ಲಾ ಜಿಲ್ಲೆಯಲ್ಲಿರುವ ಸೋಪೋರ್ ಗ್ರಾಮ ಉಗ್ರರ ಅಟಾಟೋಪಕ್ಕೆ ತುತ್ತಾಗಿದೆ. ಈ ಸ್ಥಳವನ್ನು ಹಿಂದೆ ಸುಯ್ಯಾಪುರ ಎಂದು ಕರೆಯಲಾಗುತ್ತಿತ್ತು. ಆವಂತಿವರ್ಮನ ಕಾಲದಲ್ಲಿದ್ದ ವಿದ್ವಾಂಸ ಸುಯ್ಯನ ಸ್ಮರಣೆಗಾಗಿ ನಿರ್ಮಿಸಿದ ಊರು ಇದು. ಕಲ್ಹಣ ಕೂಡಾ ತನ್ನ ಗ್ರಂಥದಲ್ಲಿ ಸುಯ್ಯನ ಹೆಸರನ್ನು ಉಲ್ಲೇಖಿಸಿರುವುದು ವಿಶೇಷ.

ಅನಾಮಧೇಯನಾಗಿ ಹುಟ್ಟಿದ ಸುಯ್ಯ ಸಿಕ್ಕಿದ ಕೆಲಸಗಳನ್ನು ಮಾಡುತ್ತಾ ಕಡು ಬಡತನದ ಜೀವನ ನಡೆಸುತ್ತಿದ್ದ. ಅಸಾಧಾರಣ ಬುದ್ಧಿವಂತಿಕೆ ಮತ್ತು ಚುರುಕುತನ ಈತನಲ್ಲಿತ್ತು. ಕಾಶ್ಮೀರದಲ್ಲಿ ಪ್ರವಾಹ ಬರಲಾಗಿ ಜನ-ಜಾನುವಾರುಗಳು ಕೊಚ್ಚಿ ಹೋಗುತ್ತಿದ್ದ ಘಟನೆ ಸಾಮಾನ್ಯವಾಗಿತ್ತು. ಸುಯ್ಯ, ರಾಜನ ಬಳಿಗೆ ಹೋಗಿ ‘ನಾನು ಪ್ರವಾಹದ ನಿವಾರಣೆ ಮಾಡಬಲ್ಲೆ. ಆದರೆ ನನಗೆ ಒಂದು ಕೊಡ ತುಂಬುವಷ್ಟು ಚಿನ್ನದ ನಾಣ್ಯಗಳನ್ನು ಕೊಡಬೇಕು’ ಎಂಬ ಷರತ್ತನ್ನಿಟ್ಟ.

ಸುಯ್ಯ ಕೋರಿದಂತೆ ಒಂದು ಕೊಡ ಚಿನ್ನದ ನಾಣ್ಯಗಳನ್ನು ಆತನಿಗೆ ಕೊಡಲಾಯಿತು. ಸುಯ್ಯ ಚಿನ್ನದ ನಾಣ್ಯಗಳ ಕೊಡವನ್ನು ಹಿಡಿದು ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಯ ದಡ ತಲುಪಿದ. ರಾಜ ಮತ್ತು ಆತನ ಸಹಚರರು ಸುಯ್ಯನ ಹಿಂದೆ ಹೋದರು. ಸುಯ್ಯ ಚಿನ್ನದ ನಾಣ್ಯಗಳ ಕೊಡವನ್ನು ನೀರಿನ ಮಧ್ಯಕ್ಕೆ ಬಿಸಾಡಿದ. ಇದನ್ನು ನೋಡಿದ ಜನ ಚಿನ್ನವನ್ನು ಪಡೆಯುವ ಆಸೆಯಿಂದ ಪ್ರಾಣದ ಹಂಗನ್ನು ತೊರೆದು ನೀರಿಗೆ ಬಿದ್ದು ನಾಣ್ಯಗಳಿಗಾಗಿ ನದಿಯ ತಳದಲ್ಲಿ ಜಾಲಾಡಿದರು. ಇದರಿಂದ ನೀರಿನ ಹರಿವಿಗೆ ಅಡ್ಡಿಯಾಗಿದ್ದ ಅಡೆ-ತಡೆಗಳು ಕೊಚ್ಚಿಹೋಗಿ ನೀರು ಸರಾಗವಾಗಿ ಹರಿಯಲಾರಂಭಿಸಿ ಪ್ರವಾಹ ತಗ್ಗಿತು ಎಂಬ ಸುಯ್ಯನ ಕಥೆ ಬಲು ಜನಪ್ರಿಯ.

ಅರಸ ನೀರನ್ನು ಅಲ್ಲಲ್ಲಿ ತಡೆದು ನಿಲ್ಲಿಸಲು ಅಣೆಕಟ್ಟೆಗಳನ್ನು, ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿಸಿದ. ಪ್ರತೀ ಊರಿಗೂ ಕುಂಡಗಳನ್ನು (ಕಟ್ಟೆ) ನಿರ್ಮಿಸಲಾಯಿತು. ಈ ಹಿನ್ನೆಲೆಯಲ್ಲಿಯೇ ಕಾಶ್ಮೀರದ ಅನೇಕ ಊರುಗಳ ಹೆಸರುಗಳು ಮಾರ್ ಕುಂಡಲ್, ಉತ್ಸಾ ಕುಂಡಲ್, ಅಮ್ಚಾ ಕುಂಡಲ್ ಎಂದೇ ಇವೆ.

ಕಾಶ್ಮೀರದ ಗುಲ್ಮಾರ್ಗ್ ಮತ್ತು ಸೋನ್‍ಮಾರ್ಗಕ್ಕೆ ತೆರಳಿದ್ದಾಗ ಭದ್ರತಾ ಕಾರಣಗಳಿಂದ ಆವಂತಿಪುರದ ಹತ್ತಿರದವರೆಗೆ ಹೋದರೂ ದೇವಾಲಯ ಹಾಗೂ ಸೋಪೋರ್ ನೋಡಲಾಗದಿದ್ದ ಬೇಸರ ಮಾತ್ರ ಇನ್ನೂ ಕಾಡುತ್ತಿದೆ. ಆದರೆ, ಅಲ್ಲಿಂದ ಹೆಕ್ಕಿ ತರಲಾಗಿದ್ದ ವಿಡಿಯೊ ತುಣುಕುಗಳನ್ನು ನೋಡಿ ತುಸು ಸಮಾಧಾನ ಪಟ್ಟಿದ್ದಿದೆ. ಆ ದೇವಾಲಯಗಳನ್ನು ನೋಡುವ ಉಮೇದಿಯಲ್ಲಿ ಅವುಗಳ ಕುರಿತು ಮಾಡಿಕೊಂಡ ಟಿಪ್ಪಣಿಗಳು ಮನದಂಗಳದಲ್ಲಿ ಹಸಿರಾಗಿವೆ. ಅವಂತಿಪುರವು ಶ್ರೀನಗರದಿಂದ ಕೇವಲ 32 ಕಿಲೊಮೀಟರ್‌ ದೂರದಲ್ಲಿದೆ. ಕಾಶ್ಮೀರಕ್ಕೆ ಹೋದವರು ತಪ್ಪದೇ ನೋಡಬೇಕಾದ ಜಾಗವಿದು. ಆದರೆ, ಗುಂಡಿನ ಚಕಮಕಿ ಇಲ್ಲದೆ ಶಾಂತ ವಾತಾವರಣವಿದ್ದರೆ ಮಾತ್ರ ನಿಮಗೆ ಅಲ್ಲಿಗೆ ಹೋಗಲು ಅನುಮತಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT