ಬುಧವಾರ, ಜನವರಿ 29, 2020
30 °C

ಕಾಡ ನೋಡ ಹೋದೆ... ಮೌನದೊಡನೆ ಬಂದೆ...!

ಸ್ವರೂಪಾನಂದ ಎಂ. ಕೊಟ್ಟೂರು Updated:

ಅಕ್ಷರ ಗಾತ್ರ : | |

Prajavani

ಬಯಲು ಸೀಮೆಯ ಎಲೆ ಉದುರುವ, ಕುರುಚಲು ಕಾಡು ನೋಡಲು ಮಳೆಗಾಲ ಸೂಕ್ತ ಸಮಯ. ಇತ್ತೀಚೆಗೆ ಮಗಳು ಇಷ್ಟಪಟ್ಟಳು ಅಂತ, ಅವಳನ್ನು ಕರ್ಕೊಂಡು ಕೂಡ್ಲಿಗಿ – ಸಂಡೂರು ರಸ್ತೆಯ ಬಂಡ್ರಿ ಕಾಯ್ದಿಟ್ಟ ಅರಣ್ಯಕ್ಕೆ ಹೋದೆ. ಹಚ್ಚ ಹಸಿರಿನ ವನಸಿರಿ ಕಂಡ ಮಗಳು, ‘ಅಪ್ಪಾ, ಎಲ್ಲ ಮರಗಳು ಗ್ರೀನ್‌ ಆಗಿವೆ. ಬಾ ಇನ್ನಷ್ಟು ಒಳಗೆ ಹೋಗೋಣ ಎನ್ನುತ್ತಾ, ಕಾಡಿನೊಳಗೆ ಓಡಿದಳು. ಅವಳನ್ನು ಹಿಂಬಾಲಿಸಿದೆ.

ಸ್ವಲ್ಪ ದೂರ ಓಡುತ್ತಿದ್ದಂತೆ ‘ಅಪ್ಪಾsss’ ಎಂದು ಕೂಗಿದಳು. ಏನಾಯ್ತೆಂದು ಗಾಬರಿಯಿಂದ ಅವಳತ್ತ ಓಡಿದೆ. ಮರದ ಸುತ್ತ ಬಿದ್ದಿದ್ದ ಗಾಜಿನ ಚೂರು ಕಂಡು, ಚೀರಿದ್ದಳು. ‘ಇನ್ನೊಂದು ಹೆಜ್ಜೆ ಇಟ್ಟಿದ್ದರೆ..’ ಎನ್ನುತ್ತಾ ಇಬ್ಬರೂ ಸೇರಿ, ಗಾಜಿನ ಚೂರನ್ನು ಆರಿಸಿ ಒಂದೆಡೆ ಗುಡ್ಡೆ ಹಾಕಿದೆವು. ಹಾಗೆ ಮುಂದೆ ಹೋದಾಗ ಮತ್ತಷ್ಟು ಗಾಜಿನ ಶೀಷೆಗಳ ಚೂರು, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ, ಇಸ್ಪೀಟ್ ಎಲೆಗಳು ಹರಡಿದ್ದವು.

‘ಊರಲ್ಲಷ್ಟೆ ಕಸ-ಕಡ್ಡಿ ಹಾಕ್ತಾರೆ ಅಂದುಕೊಂಡಿದ್ದೆ, ಇಲ್ಲಿ ಯಾರು ಕಸ ಹಾಕ್ತಾರೆ?’ ಮಗಳು ಕೇಳಿದ ಪ್ರಶ್ನೆಗೆ ನಿರುತ್ತರನಾಗಿ ನಿಂತೆ. ನಾವು ನಿಂತ ತಾಣದ ಸುತ್ತ ಪೊದೆ, ಗಿಡ-ಮರಗಳ ನೆರಳಲ್ಲಿ, ಹುಲ್ಲಿನ ಹಾಸಿನ ಮೇಲೆ, ಕಲ್ಲುಗುಂಡುಗಳ ಸಂದಿಯಲ್ಲಿ, ನೀರಿನ ಹರಿವಿನ ಇಕ್ಕೆಲಗಳಲ್ಲಿ, ಬಂಡೆಗಳ ಮೇಲೆ ಗಾಜಿನ ಚೂರು, ಪ್ಲಾಸ್ಟಿಕ್, ಮದ್ಯದ ಪೌಚ್‌ಗಳು ಕಂಡವು. ಉಲ್ಲಾಸದಿಂದ ಕಾಡು ನೋಡ ಹೋದ ನಾವು, ಕಡು ಮೌನದಲಿ ಹೊರ ಬಂದೆವು!

ಬಂಡ್ರಿ ಅರಣ್ಯ ಬಹಳ ಸುಂದರವಾಗಿದೆ. ಮಳೆಗಾಲ ಮುಗಿದ ಮೇಲಂತೂ ಬಿಸಿಲು ನಾಡಿನ ಈ ಕಾಡಿನ ಸೊಬಗು ಇಮ್ಮಡಿಸುತ್ತದೆ. ಕಾಡಿನಲ್ಲಿ ವಿಶಾಲವಾದ ಬಂಡೆಗಳಿವೆ. ಅವುಗಳ ಮೇಲೆ ವಿರಮಿಸುವುದೇ ಒಂದು ಸೊಬಗು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು. ಅಲ್ಲಲ್ಲೇ ಕೆರೆ, ಕೊಳ, ಕುಂಟೆಯಲ್ಲಿ ನೀರು ತುಂಬಿಕೊಂಡಿರುತ್ತದೆ. ಅದರೊಳಗೆ ಮರಗಿಡಗಳ ಪ್ರತಿಬಿಂಬ ಕಾಣುತ್ತದೆ. ಇಡೀ ಭೂಮಿಗೆ ಹಸಿರು ಹೊದಿಸಿದಂತೆ ಕಾಣುವ ಈ ಕಾಡು, ಛಾಯಾಗ್ರಹಣಕ್ಕಂತೂ ಹೇಳಿ ಮಾಡಿಸಿದ ಜಾಗ. ಜತೆಗೆ ಕಾರೆ, ಕವಳೆ, ಬುಕ್ಕೆ, ನೇರಳೆ, ಸೀತಾಫಲ.. ಇತ್ಯಾದಿ ಕಾಡು ಹಣ್ಣುಗಳು ಇಲ್ಲಿ ಸಿಗುತ್ತವೆ.

ಆದರೆ, ಇಂಥ ವನಸಿರಿಯ ಸೌಂದರ್ಯ ಸವಿಯಬೇಕಾದ ಮಂದಿ, ಕಾಡನ್ನು ಹಾಳುಗೆಡವುತ್ತಿದ್ದಾರೆ. ಈ ತಾಣವೀಗ ಅಕ್ಷರಶಃ ಮನುಷ್ಯನ ದುಶ್ಚಟಗಳ ವೇದಿಕೆಯಾಗಿಬಿಟ್ಟಿದೆ. ವನ ಭೋಜನ, ಲಘು ಉಪಹಾರ, ಮದ್ಯ ಸೇವನೆ, ಪಾರ್ಟಿಗಳ ಹೆಸರಲ್ಲಿ ಇಡೀ ಕಾಡಿನ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ.

ತ್ಯಾಜ್ಯದಿಂದ ಅಪಾಯ

ಪ್ಲಾಸ್ಟಿಕ್‌ನಂತಹ ಮಣ್ಣಲ್ಲಿ ಕರಗದಂತಹ ತ್ಯಾಜ್ಯ ಹಾಕುವುದರಿಂದ, ಮಣ್ಣು ಕಲುಷಿತವಾಗುತ್ತದೆ. ಇದು ಜೀವಜಂತುಗಳ ಮೇಲೂ ತೀವ್ರ ದುಷ್ಪರಿಣಾಮ ಬೀರುತ್ತದೆ. ಕಾಡಿನ ಪರಿಸರದಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಜೀವವೈವಿಧ್ಯ ತಜ್ಞ ಕೂಡ್ಲಿಗಿಯ ಜಿ.ವಿಶ್ವಮೂರ್ತಿ.

ಕುಡಿದು ಬಿಸಾಡುವ ಬಾಟಲಿಗಳ ಗಾಜಿನ ಚೂರು ಮಂಗ, ಕರಡಿ, ಜಿಂಕೆಯಂತಹ ಪ್ರಾಣಿಗಳಿಗೆ ಹಾನಿ ಮಾಡುತ್ತದೆ. ಚಂಗನೆ ನೆಗದು ಓಡುವ ಮೊಲದಂತಹ ಸೂಕ್ಷ್ಮ ಸಸ್ತನಿಗಳಿಗಂತೂ ತುಂಬಾ ಅಪಾಯ. ಗಾಜಿನ ಚೂರುಗಳು ತರಚಿದಾಗ ರಕ್ತಸ್ರಾವವಾಗುತ್ತದೆ. ಅಂಗ ಊನವಾಗಬಹುದು. ಇಂಥವುಗಳಿಗೆ ಆರೈಕೆ ಇಲ್ಲದೇ ಸತ್ತೇ ಹೋಗುತ್ತವೆ. ‘ಪ್ಲಾಸ್ಟಿಕ್‌ನಲ್ಲಿ ತಿಂದು ಬಿಟ್ಟ ಆಹಾರ ಎಸೆಯುವುದರಿಂದ, ಅದು ಪ್ರಾಣಿಗಳ ಹೊಟ್ಟೆ ಸೇರಿ, ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಬಂಡ್ರಿ ಪಶುವೈದ್ಯಾಧಿಕಾರಿ ಮಹಾಂತೇಶ ಶೆಟಕಾರ್.

ಎಲ್ಲ ಕಾಡುಗಳ ಕಥೆಯೂ..

ಕಾಡು ಕೊಳಕಾಗಿಸುವ ಮನುಷ್ಯನ ಪ್ರಯತ್ನ ಬಂಡ್ರಿಗಷ್ಟೇ ಸೀಮಿತವಾಗಿಲ್ಲ. ನಾನು ಸುತ್ತಾಡಿರುವ ಕೂಡ್ಲಿಗಿ, ಸಂಡೂರು, ಹೊಸಪೇಟೆ ಅರಣ್ಯ ವಲಯದ ಕಾಡುಗಳಲ್ಲೂ ಇದೇ ಕತೆ. ಅಷ್ಟೇ ಅಲ್ಲ, ಉತ್ತರ ಕರ್ನಾಟಕ, ಮಲೆನಾಡು ಅರಣ್ಯ ಪ್ರದೇಶಗಳೂ ಈ ‘ಸಮಸ್ಯೆ’ ಯಿಂದ ಹೊರತಾಗಿಲ್ಲ.

ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆಯೂ ಪ್ರಯತ್ನಿಸುತ್ತಿದೆ. ಬಂಡ್ರಿ ಸೇರಿದಂತೆ ಕಾಡಂಚಿನ ಗ್ರಾಮಸ್ಥರಿಗೆ, ಸುತ್ತಲಿನ ಶಾಲಾ ಮಕ್ಕಳಲ್ಲಿ ಅರಣ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ‘ಕಾಡು ನೋಡಲು ಬಂದವರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಅಲ್ಲಲ್ಲಿ ಸೂಚನಾ ಫಲಕಗಳನ್ನೂ ಹಾಕಿದ್ದೇವೆ. ಕೆಲವೊಮ್ಮೆ ಕಾನೂನು ಕ್ರಮ ಜರುಗಿಸಿದ್ದೇವೆ. ಶಾಲಾ-ಕಾಲೇಜುಗಳಲ್ಲಿ, ಹಳ್ಳಿ–ಪಟ್ಟಣಗಳಲ್ಲಿ ಅರಣ್ಯದ ಬಗ್ಗೆ ಪ್ರೀತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ’ಎನ್ನುತ್ತಾರೆ ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ ಕುಮಾರ್.

‘ಕಾಡು ನಮ್ಮದು, ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ’ ಎಂಬುದನ್ನು ಅರಿತಾಗ ಮಾತ್ರ, ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲು ಸಾಧ್ಯ. ಅಂಥ ಜಾಗೃತಿ ಮೂಡಿಸುವ, ಹಣತೆಗಳ ಬೆಳಕು ಅಲ್ಲಲ್ಲಿ ಕಾಣುತ್ತಿದೆ. ಆ ಹಸಿರ ಹಣತೆಯ ಬೆಳಕು ಎಲ್ಲೆಡೆಗೂ ವಿಸ್ತರಿಸುವ ಪ್ರಯತ್ನವಾಗಬೇಕಿದೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿವೆ ಭಾವೈಕ್ಯದ ಸಾಲು ಬೆಟ್ಟಗಳು

ಹಸಿರ ಹಣತೆಗಳು..

ಒಂದು ಕಡೆ ಕಾಡು ಮಲಿನ ಮಾಡುವವರಿದ್ದಾರೆ ಎಂಬ ಬೇಸರದ ನಡುವೆ, ಕೊಳಕಾದ ಕಾಡನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸುವವರೂ ಇದ್ದಾರೆ ಎಂಬ ಸಮಾಧಾನವೂ ಇದೆ.

ಇತ್ತೀಚೆಗೆ ಸಂಡೂರು ಕಡೆಗೆ ಹೋಗಿದ್ದಾಗ, ಅಲ್ಲಿನ ‘ಸಂಡೂರು ಸಮಿಟರ್ಸ್’ ತಂಡದವರು ಮತ್ತು ಜನ ಸಂಗ್ರಾಮ ಪರಿಷತ್ ಸದಸ್ಯರು ಕಾಡಿನಲ್ಲಿ ಮನುಷ್ಯ ಸೃಷ್ಟಿಸಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಕಳೆದ ವರ್ಷ ಸಂಡೂರಿನ ಔಷಧಿ ಸಸ್ಯ ಸಂರಕ್ಷಣಾ ಕೇಂದ್ರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ‘ಈ ವರ್ಷ ಮತ್ತೆ ಅಲ್ಲಿ ಕಸಬಿದ್ದಿತ್ತು. ನಾವು ಕಸ ಸ್ವಚ್ಛಗೊಳಿಸುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆವು. ಅ. 2 ರಂದು ಶ್ರಮದಾನದ ಮೂಲಕ ನಾಲ್ಕು ಟ್ರ್ಯಾಕ್ಟರ್‌ ಲೋಡ್‍ನಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಿದೆವು’ ಎನ್ನುತ್ತಾರೆ ಸಮಿಟರ್ಸ್‌ ತಂಡದ ಟಿ.ಎಂ. ವಿನಯಕುಮಾರ್.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನೂರು ವಿದ್ಯಾರ್ಥಿಗಳ ತಂಡ 2017 ರಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಶಿಬಿರದಲ್ಲಿ ಹರಿಶಂಕರ ಮತ್ತು ಕುಮಾರಸ್ವಾಮಿ ದೇಗುಲದ ಸುತ್ತಲಿನ ಅರಣ್ಯದಲ್ಲಿ ಮತ್ತು ಕಳೆದ ವರ್ಷ ಎನ್.ಎಸ್.ಎಸ್‌ನ ಸುಮಾರು ನೂರೈವತ್ತು ಶಿಬಿರಾರ್ಥಿಗಳು ಇದೇ ಸಸ್ಯ ಸಂರಕ್ಷಣಾ ಕೇಂದ್ರದಲ್ಲಿ ಒಂದು ಲಾರಿಯಷ್ಟು ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ‘ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಜಾಥಾ’ ನಡೆಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಅಲ್ಲಲ್ಲಿ ಇಂತಹ ಆಶಾದಾಯಕ ನಡೆಗೆ ಜನರ ಸಹಕಾರ ಬೇಕಾಗಿದೆ. ಈ ಬೆಳವಣಿಗೆಗಳ ಜತೆಗೆ, ಕಾಡಿನ ಸುತ್ತಲಿನ ಹಳ್ಳಿಗರೇ ಕಾಡಿನ ಸ್ವಚ್ಛತೆಗಾಗಿ ರಕ್ಷಣೆಗೆ ನಿಲ್ಲಬೇಕಿದೆ. ಸೌಂದರ್ಯ ಸವಿಯಲು ಹೋಗುವವರೂ, ಆ ಜಾಗವನ್ನು ಮಲಿನಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಿದೆ.

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು