ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಸಲ ಕಪ್‌ ನಮ್ದೇ...ಸದ್ದಿಲ್ಲದೆ ನಡೆಯುತ್ತಿದೆ 'ಮುಟ್ಟಿನ ಕಪ್' ಅಭಿಯಾನ

Last Updated 14 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಈ ಸಲ ಕಪ್‌ ನಮ್ದೇ... ಇದು ಐಪಿಎಲ್‌ ಕ್ರಿಕೆಟ್‌ ಪಂದ್ಯದ ಸಂದರ್ಭದ ಆರ್‌ಸಿಬಿ ತಂಡದ ಘೋಷವಾಕ್ಯ. ಆದರೆ, ಈ ಹೆಣ್ಣುಮಕ್ಕಳು ‘ಕಪ್‌’ ತಮ್ಮದಾಗಿಸಿಕೊಂಡ ಬಳಿಕ ಈಗ ‘ಕಪ್‌ ನಮ್ದೇ’ ಎಂದು ದಿಟ್ಟವಾಗಿ ಹೇಳಿಕೊಳ್ಳುತ್ತಿದ್ದಾರೆ.

ಎಲ್ಲಿಯ ಕ್ರಿಕೆಟ್‌; ಎಲ್ಲಿಯ ಮಹಿಳೆಯರು? ಏನ್‌ ಕಥೆ ಇದು – ಎಂದು ಕೇಳುತ್ತಿದ್ದೀರಾ? ಹೌದು, ಈ ಕಥೆ ಶುರುವಾಗಿದ್ದು, ಮುಟ್ಟಿನ ದಿನಗಳಲ್ಲಿ ಪ್ಯಾಡ್‌ ಬದಲಿಗೆ ಬಟ್ಟಲು (ಕಪ್‌) ಬಳಸುವಂತೆ ಪ್ರೇರೇಪಿಸಿದ ಅಭಿಯಾನದಿಂದ. ಈ ಜಾಗೃತಿಗೆ ವೇದಿಕೆಯಾದದ್ದು ರಾಜ್ಯದ ಬಹುಭಾಗಗಳಲ್ಲಿ ಕಂಡುಬಂದ ಪ್ರವಾಹ ಪೀಡಿತ ಪ್ರದೇಶಗಳು.

ಪ್ರವಾಹದಿಂದ ಮನೆ ಮಾರು ಕೊಚ್ಚಿಕೊಂಡು ಹೋಯಿತು. ನೆಲೆ ಕಳೆದುಕೊಂಡವರು ಪರಿಹಾರ ಕೇಂದ್ರ ಸೇರಿದರು. ನೆಲೆಯಿಲ್ಲವಾದದ್ದು, ಹಸಿವು ಕಣ್ಣಿಗೆ ಕಾಣುತ್ತಿತ್ತು. ಆದರೆ, ‘ಆ ದಿನ’ಗಳ ಸಂಕಟ ಕಾಣಿಸುತ್ತಿರಲಿಲ್ಲ. ಹಾಗೆಂದು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ, ಶುಚಿತ್ವದ ವ್ಯವಸ್ಥೆಯೂ ಅಲ್ಲಿ ಇರಲಿಲ್ಲ.ಆಗ ರಾಜ್ಯದಾದ್ಯಂತ ಪರಿಹಾರ ಸಾಮಗ್ರಿ ಸಂಗ್ರಹ ಶುರುವಾಯಿತು. ಆದರೆ, ಯಾರೂ ಗಂಭೀರವಾಗಿ ಗಮನಹರಿಸದ ತೀರಾ ಅಗತ್ಯವೊಂದರತ್ತ ಬೆಳಕು ಚೆಲ್ಲಿದರು ಚಿತ್ರ ನಿರ್ಮಾಪಕಿ ವಿ.ಕೆ. ಸಂಜ್ಯೋತಿ.

‘ಉತ್ತರ ಕನ್ನಡದ ಅಂಕೋಲಾದ ಗೆಳತಿಯೊಬ್ಬರು ‘ನಾವು ಹುಡುಗಿಯರು’ ಎಂಬ ವಾಟ್ಸ್‌ಆ್ಯಪ್‌ ಗುಂಪು ರಚಿಸಿ ಅದಕ್ಕೆ ನನ್ನನ್ನು ಸೇರಿಸಿದರು. ಪ್ರವಾಹ ಪೀಡಿತ ಪ್ರದೇಶಗಳ ಮಹಿಳೆಯರಿಗೆ ಪ್ಯಾಡ್‌ ಸಂಗ್ರಹಿಸಿ ಕೊಡುವ ಸಲುವಾಗಿ ಹುಟ್ಟಿಕೊಂಡ ಗ್ರೂಪ್‌ ಇದು. ಆದರೆ, ಪ್ಯಾಡ್‌ಗಳ ಬದಲು ಇಂಥ ಕಪ್‌ಗಳನ್ನೇಕೆ ಬಳಸಬಾರದು ಎಂದು ಸಲಹೆ ಕೊಟ್ಟೆ’ ಎಂದು ಆರಂಭದ ದಿನಗಳನ್ನು ನೆನಪಿಸಿದರು ಅವರು.

‘ಇದು ಹೇಗೆ ಸಾಧ್ಯ? ಪ್ರಯೋಗಕ್ಕಿದು ಸಕಾಲವಲ್ಲ’ ಎಂಬ ಮಾತುಗಳು ಕೇಳಿಬಂದವು. ಸುಶಿಕ್ಷಿತರೆನಿಸಿಕೊಂಡವರೇ ಇನ್ನೂ ಬಟ್ಟೆಗಳನ್ನು ಬಳಸುತ್ತಿದ್ದರು. ಅನೇಕರು ಪ್ಯಾಡ್‌ನಿಂದಾಚೆ ಯೋಚಿಸುತ್ತಿರಲಿಲ್ಲ.

‘ಆದರೆ, ಒಂದು ಪುಟ್ಟ ಪ್ರಯತ್ನ ಸಾಗಿತು. ಅದಕ್ಕೆ ಬಂದ ಪ್ರತಿಕ್ರಿಯೆ ಮಾತ್ರ ನಿರೀಕ್ಷೆಗೆ ಮೀರಿದ್ದು’ ಎಂದರು ಸಂಜ್ಯೋತಿ.‌ ‘ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ ಬದಲಿಗೆ ಕಪ್‌ ಬಳಸಿ’ ಎಂದು ಮನವೊಲಿಸುವ ಅಭಿಯಾನ ಆರಂಭಿಸಿದರು. ಫೇಸ್‌ಬುಕ್‌ ಮೂಲಕ ಸಂಜ್ಯೋತಿ ಬರಹವನ್ನೂ ಪ್ರಕಟಿಸಿದರು. ಆರಂಭದಲ್ಲಿ ಚರ್ಚೆಗಳು, ಹಲವು ಸಂಶಯ, ಪ್ರಶ್ನೆಗಳು ಎದುರಾದವು. ಎಲ್ಲದಕ್ಕೂ ಸಂಶೋಧನಾತ್ಮಕ ಉತ್ತರ, ಸ್ತ್ರೀರೋಗ ತಜ್ಞರ, ಪರಿಣತರ ಅಭಿಪ್ರಾಯ ಪಡೆದು ಪ್ರತಿಕ್ರಿಯಿಸಿದರು.

ಮುಟ್ಟಿನ ಬಟ್ಟಲು ಹೊಸದಲ್ಲ. ಆದರೆ, ಹಳ್ಳಿ ಹೆಣ್ಣುಮಕ್ಕಳಿಗೆ ಸ್ವಲ್ಪಮಟ್ಟಿಗೆ ಅಪರಿಚಿತ ವಸ್ತು. ಮಾತ್ರವಲ್ಲ ದುಬಾರಿ ಕೂಡ. ಇಂಥ ಪ್ರತಿಕೂಲ ಸನ್ನಿವೇಶದಲ್ಲಿ ಮುಟ್ಟಿನ ಕಪ್‌ ಕಳುಹಿಸುವಂತೆ ಅಥವಾ ಧನ ಸಹಾಯ ನೀಡುವಂತೆ ಫೇಸ್‌ಬುಕ್‌ನಲ್ಲೇ ಕೋರಿಕೆ ಸಲ್ಲಿಸಿದರು. ಇದೇ ಜಾಲತಾಣದ ಮೂಲಕ ಸಮಾನ ಮನಸ್ಕರ ತಂಡವೊಂದು ಸಿದ್ಧವಾಯಿತು.

ಕೊಪ್ಪಳ ತಾಲ್ಲೂಕು ಕವಲೂರಿನ ಶಿಕ್ಷಕಿ ಶಿವಲೀಲಾ (ಶಿವಿ) ಅವರು ಸ್ಪ್ರೆಡಿಂಗ್‌ ಸಿಸ್ಟರ್‌ವುಡ್‌ (spreading sisterhood ಈಗ ಗುಟ್ಟಿನಿಂದ ಬಟ್ಟಲೆಡೆಗೆ ದಿಟ್ಟ ನಡಿಗೆ ಎಂದು ಬದಲಾಗಿದೆ) ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ರೂಪಿಸಿದರು. ಶರವೇಗದಲ್ಲಿ ಮಾಹಿತಿ ವಿನಿಮಯವಾಗತೊಡಗಿತು. ಈ ಗುಂಪಿನಲ್ಲಿ ಜತೆಯಾದವರು ದೀಪದ ಮಲ್ಲಿ, ಜ್ಯೋತಿ ಹಿಟ್ನಾಳ್‌ ಇತರರು. ಸಂಜ್ಯೋತಿ ಅವರ ಫೇಸ್‌ಬುಕ್‌ ಕೋರಿಕೆಗೆ ಸುಮಾರು₹1 ಲಕ್ಷದಷ್ಟು ಹಣ ಸಂಗ್ರಹವಾಯಿತು.

ಈಗ ಕಪ್‌ ಖರೀದಿ ಕೆಲಸ. ಸಾಮಾನ್ಯವಾಗಿ ಈ ಕಪ್‌ನ ಬೆಲೆ ₹350ರಿಂದ ₹2 ಸಾವಿರದವರೆಗೆ ಇದೆ. ಸಂಜ್ಯೋತಿ, ಜ್ಯೋತಿ ಹಿಟ್ನಾಳ್ ಅವರು ಇಂಥ ಕಪ್‌ ತಯಾರಿಸುವ ಕಪ್‌ ಕಂಪನಿ ಜತೆ ಮಾತುಕತೆ ನಡೆಸಿದರು. ಅವರು ಅತ್ಯಂತ ಕನಿಷ್ಠ ದರಕ್ಕೆ ಕಪ್‌ ಪೂರೈಸಲು ಒಪ್ಪಿದರು.

ಹೀಗೆ ಈವರೆಗೆ ಸುಮಾರು 650 ಕಪ್‌ಗಳನ್ನು ಈ ತಂಡ ಖರೀದಿಸಿ, ವಿತರಿಸಿದೆ. ಈ ಅಭಿಯಾನ ಮುಂದುವರಿಯುತ್ತಲೂ ಇದೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪ್ರವಾಹ ಪೀಡಿತ ಪ್ರದೇಶಗಳ, ಪುನರ್ವಸತಿ ಕೇಂದ್ರಗಳ ಮಹಿಳೆಯರು ಕಪ್‌ ಪಡೆದಿದ್ದಾರೆ. ‘ಕಪ್‌ ನಮ್ದೇ’ ಎಂದು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ.

ಗದಗ ಜಿಲ್ಲೆ ರೋಣ ತಾಲ್ಲೂಕಿನ ಹಳ್ಳಿಗಳು, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಬಾಗಲಕೋಟೆ ಜಿಲ್ಲೆಯ ಕುಗ್ರಾಮಗಳ ಹೆಣ್ಣುಮಕ್ಕಳಿಗೆ ಈ ತಂಡದವರು ಮುಟ್ಟಿನ ಬಟ್ಟಲು ತಲುಪಿಸಿದ್ದಾರೆ. ಇದಕ್ಕೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತರು, ವೈದ್ಯಕೀಯ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಈ ತಂಡದ ಸದಸ್ಯರ ಸಂಖ್ಯೆ ನೂರಕ್ಕೂ ದಾಟಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕಾರ್ಯಜಾಲ ವ್ಯಾಪಿಸಿದೆ. ಬೇಡಿಕೆ ಬಂದ ಹಾಗೆ ಕಪ್‌ಗಳನ್ನು ಜಾಲದ ಸದಸ್ಯರು ತಲುಪಿಸುತ್ತಿದ್ದಾರೆ.

ಸಂಜ್ಯೋತಿ, ದೀಪದಮಲ್ಲಿ, ದೀಪಾ ಗಿರೀಶ್‌ ಹಂದಲಗೆರೆ, ಜ್ಯೋತಿ ಹಿಟ್ನಾಳ್‌ ಕಪ್‌ ಖರೀದಿ, ಲೆಕ್ಕಾಚಾರಗಳನ್ನು ನಿಭಾಯಿಸುತ್ತಾರೆ. ಶಿವಲೀಲಾ, ಕೊಟ್ರೇಶ್‌ ಕೊಟ್ಟೂರು ಅವರು ತಮ್ಮ ತಂಡದ ಮೂಲಕ ಅಗತ್ಯವುಳ್ಳವರಿಗೆ ಕಪ್‌ ತಲುಪಿಸುವ ಕೆಲಸ ಮಾಡುತ್ತಾರೆ. ಇಲ್ಲಿ ಯಾರದೇ ನೇತೃತ್ವ ಇಲ್ಲ. ಅವರವರ ಜವಾಬ್ದಾರಿ ನಿರ್ವಹಣೆ ಅಷ್ಟೆ. ಮತ್ತೆ ಈ ತಿಂಗಳಿನಿಂದಲೇ ಜಾಗೃತಿ ಅಭಿಯಾನ ಮುಂದುವರಿಯುತ್ತಿದೆ ಎನ್ನುತ್ತಾರೆ ಶಿವಲೀಲಾ.

ಪ್ಯಾಡ್‌– ಕಪ್‌ ಬಳಕೆ ನಡುವಿನ ವ್ಯತ್ಯಾಸ

ಪ್ಯಾಡ್‌ ಬಳಸಿದರೆ, ಪದೇ ಪದೇ ಬದಲಾಯಿಸಬೇಕಾಗುತ್ತದೆ. ಇದು ವಿಲೇವಾರಿಯೂ ಸಮಸ್ಯೆ. ಪ್ಯಾಡ್‌ಗಳಲ್ಲಿ ಹತ್ತಿಯ ಸಂಸ್ಕರಣೆ, ಬಣ್ಣ ಬರಲು ರಾಸಾಯನಿಕ, ಸ್ರಾವ ಒಣಗಿರುವಂತೆ ಕಾಣಲು (ಜೆಲ್‌ ಆಗಿ ಪರಿವರ್ತಿಸಲು) ಇನ್ನೊಂದು ಬಗೆಯ ರಾಸಾಯನಿಕ ಮತ್ತು ಪ್ಲಾಸ್ಟಿಕ್‌ ಬಳಕೆ ಮಾಡಿರುತ್ತಾರೆ. ಅದನ್ನು ಬಳಸಿ ಬಿಸಾಡಿದಾಗ, ಅದರಲ್ಲಿರುವ ಮಾರಕ ಅಂಶಗಳು ಪರಿಸರ ಸೇರಿ ಹಾನಿಯುಂಟು ಮಾಡುತ್ತವೆ. ಮಾತ್ರವಲ್ಲ ನೂರಾರು ವರ್ಷ ಪ್ಯಾಡ್‌ ಕೊಳೆಯುವುದಿಲ್ಲ. ಜೈವಿಕವಾಗಿ ಬೆರೆಯುವುದೂ ಇಲ್ಲ.

ಆದರೆ, ಸಿಲಿಕಾನ್‌ನಿಂದ ತಯಾರಿಸಿರುವ ಈ ಮುಟ್ಟಿನ ಬಟ್ಟಲನ್ನು ಒಮ್ಮೆ ಖರೀದಿಸಿದರೆ 8 ರಿಂದ 10 ವರ್ಷ ಬಳಸಬಹುದು. ಪುನಃ ಪುನಃ ಬಳಸುವ ಮುನ್ನ ಒಮ್ಮೆ ಬಿಸಿನೀರಿನಲ್ಲಿ ಹಾಕಿ ತೊಳೆಯಬೇಕು. ನಂತರ ಸಾಮಾನ್ಯ ತಣ್ಣೀರಿನಲ್ಲಿ ತೊಳೆದು ಬಳಸಬಹುದು. ‘ಈ ಬಟ್ಟಲನ್ನು ವೈದ್ಯಕೀಯ ಗುಣಮಟ್ಟದ ಸಿಲಿಕಾನ್‌ನಿಂದ ತಯಾರಿಸಲಾಗುತ್ತದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (Food and Drug Administration) ಸಂಸ್ಥೆಯ ಪ್ರಮಾಣೀಕೃತ ಬಟ್ಟಲುಗಳು ಉತ್ತಮ. ಭಾರತದಲ್ಲಿ ಅದರ ತಯಾರಕರು ಕಡಿಮೆ. ಆದರೆ ಇಲ್ಲಿ ಅನೇಕ ಕಂಪನಿಗಳು ಆ ಬಟ್ಟಲುಗಳನ್ನು ಪೂರೈಸುತ್ತಿದ್ದಾರೆ’ ಎಂದು ಸಂಜ್ಯೋತಿ ಮಾಹಿತಿ ನೀಡುತ್ತಾರೆ. ಹೀಗಾಗಿ ಪ್ಯಾಡ್‌ಗೆ ಪ್ರತಿ ವರ್ಷಕ್ಕೆ ಸಾವಿರ ರೂಪಾಯಿ ವ್ಯಯಿಸುವ ಬದಲು 8ರಿಂದ 10 ವರ್ಷಗಳಿಗೊಮ್ಮೆ ₹350ರಿಂದ 600 ವ್ಯಯಿಸುವುದು ದೊಡ್ಡ ಉಳಿತಾಯವಲ್ಲವೇ? ಎಂಬುದು ಈ ತಂಡದ ಸಲಹೆ.

‘ಪ್ಯಾಡ್ ಬಳಸಿದಾಗ ಆಗುವ ಆತಂಕಕಾರಿ ಮನಸ್ಥಿತಿ ಈಗ ಇಲ್ಲ’ ಎಂದರು ಶಿವಲೀಲಾ.
‘ಮುಟ್ಟಿನ ಅವಧಿಯನ್ನೇ ಮರೆಯುವಂತಾಗಿದೆ. ಪ್ರಯಾಣದ ಸಮಯದಲ್ಲಿ ಅನುಭವಿಸುವ ಕಿರಿಕಿರಿಯೂ ತಪ್ಪಿದೆ. ಈ ಬಿಡುಗಡೆಯ ಸ್ವಾತಂತ್ರ್ಯವನ್ನು ಇತರ ಹೆಣ್ಣುಮಕ್ಕಳೂ ಅನುಭವಿಸಬೇಕು’ ಎಂದು ಮುಕ್ತವಾಗಿ ಹೇಳಿದರು ಸಂಜ್ಯೋತಿ.

ಪ್ರವಾಹ ಪೀಡಿತ ಪ್ರದೇಶದಲ್ಲಿ..

‘ರೋಣ ತಾಲ್ಲೂಕಿನ ಅಮರಗೋಳ ಗ್ರಾಮದ ಪುನರ್ವಸತಿ ಕೇಂದ್ರದ ಸ್ಥಿತಿ ಶೋಚನೀಯವಾಗಿತ್ತು. ಇಲ್ಲಿ ನಾವು 40ರಿಂದ 50 ಕಪ್‌ಗಳನ್ನು ಕೊಟ್ಟಿದ್ದೇವೆ. ಅತ್ಯಂತ ಹೆಚ್ಚು ಬೇಡಿಕೆ ಬಂದದ್ದು ತೀರ್ಥಹಳ್ಳಿ ತಾಲ್ಲೂಕು ಹೆಗ್ಗಲಟ್ಟಿಯಿಂದ. ಆ. 26ರಂದು ನಾವು ಈ ಹಳ್ಳಿಗೆ ಬೈಕ್‌ನಲ್ಲಿ ತೆರಳಿದೆವು. ಕಾಡಿನ ದಾರಿ ಅದು. ರಸ್ತೆಯೂ ಭೂ ಕುಸಿತದಿಂದ ಒಡೆದುಹೋಗಿತ್ತು. ನಾವು ಪ್ರಾತ್ಯಕ್ಷಿಕೆಗೆಂದು ಹೋದಾಗ ಅಲ್ಲಿನ ಮಹಿಳೆಯರು ತಾವು ಕೆಲಸ ಮಾಡುತ್ತಿದ್ದ ಗದ್ದೆಗಳಿಂದ ಬಂದು ನೋಡಿದರು. ತಮಗನಿಸಿದ ಪ್ರಶ್ನೆ ಕೇಳಿದರು. ಬಳಿಕ ಕಪ್‌ ಪಡೆದರು’ ಎಂದು ಶಿವಲೀಲಾ ನೆನಪಿಸಿದರು. ‘ಪುರುಷರೂ ಹಲವು ರೀತಿಯಲ್ಲಿ ನಮ್ಮ ಅಭಿಯಾನವನ್ನು ಬೆಂಬಲಿಸಿ
ದ್ದಾರೆ. ಈ ವಿಚಾರ ಕೇಳಿದಾಗ ಅವರು ತಮ್ಮ ಮನೆಗಳಿಗೆ ಹೋಗಿ ಮನೆಯ ಹೆಣ್ಣುಮಕ್ಕಳೊಂದಿಗೆ ಈ ಬಗ್ಗೆ ಮಾತನಾಡಿ
ದ್ದಾರೆ. ಕೆಲವರು ಕಪ್‌ ಸಾಗಣೆ, ವಿತರಣೆಗೆ ನೆರವಾಗಿದ್ದಾರೆ ಎಂದರು ಅವರು.

ಸರ್ಕಾರ ಕಪ್‌ ಒದಗಿಸಲಿ

ಶಾಲಾ ವಿದ್ಯಾರ್ಥಿನಿಯರಿಗೆ ಶುಚಿ ಪ್ಯಾಡ್‌ ಒದಗಿಸುತ್ತಿದೆ ಸರ್ಕಾರ. ವಾರ್ಷಿಕ ಲೆಕ್ಕಾಚಾರ ಹಾಕಿ ನೋಡಿದರೆ ಇದು ದುಬಾರಿಯೂ ಹೌದು. ಅದರ ಬದಲು ಒಂದು ಮುಟ್ಟಿನ ಕಪ್ ಅನ್ನು ಒಮ್ಮೆ ನೀಡಿದರೆ ಅವರು 8ರಿಂದ 10 ವರ್ಷ ಬಳಸಬಹುದು. ಪ್ರತಿ ತಿಂಗಳು ಕೊಡಬೇಕೆಂದೇನಿಲ್ಲ. ಮಾತ್ರವಲ್ಲ. ಅವರ ಆರೋಗ್ಯ ರಕ್ಷಣೆಯೂ ಆಗುತ್ತದೆ ಎಂದರು ಶಿವಲೀಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT