ಗುರುವಾರ , ಡಿಸೆಂಬರ್ 12, 2019
16 °C

ನೆಹರೂ ಉದ್ಘಾಟಿಸಿದ ‘ಸ್ಮಾರಕ’ ಈಗ ಮಕ್ಕಳ ಗ್ರಂಥಾಲಯ

Published:
Updated:

ಅಂದು ಆ ಕಟ್ಟಡಕ್ಕೆ ಸರ್‌ ಎಂ. ವಿಶ್ವೇಶ್ವರಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. ಹದಿನೇಳು ವರ್ಷಗಳ ನಂತರ ಅಂದಿನ ಪ್ರಧಾನಿ ನೆಹರೂ ಅದನ್ನು ಉದ್ಘಾಟಿಸಿದ್ದರು. ಅದೇ ಕಟ್ಟಡವೀಗ ಮಕ್ಕಳ ಗ್ರಂಥಾಲಯವಾಗಿ ರೂಪಾಂತರಗೊಂಡಿದೆ.

ಅಂದು ಆ ಕಟ್ಟಡಕ್ಕೆ ಸರ್‌ ಎಂ. ವಿಶ್ವೇಶ್ವರಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. ಹದಿನೇಳು ವರ್ಷಗಳ ನಂತರ ಅಂದಿನ ಪ್ರಧಾನಿ ನೆಹರೂ ಅದನ್ನು ಉದ್ಘಾಟಿಸಿದ್ದರು. ಅದೇ ಕಟ್ಟಡವೀಗ ಮಕ್ಕಳ ಗ್ರಂಥಾಲಯವಾಗಿ ರೂಪಾಂತರಗೊಂಡಿದೆ.ಅದು 60 ವರ್ಷಕ್ಕೂ ಹಳೆಯದಾದ ಕಟ್ಟಡ. ಆಗ ಸಾರ್ವಜನಿಕ ಗ್ರಂಥಾಲಯವಾಗಿತ್ತು. ಈಗ ಮಕ್ಕಳ ಗ್ರಂಥಾಲಯವಾಗಿದೆ. ಹಳೆಯ ಕಟ್ಟಡಕ್ಕೆ ಬಣ್ಣ ಬಂದಿದೆ. ಗೋಡೆಗಳ ಮೇಲೆಲ್ಲ ಬಣ್ಣ ಬಣ್ಣದ ಚಿತ್ತಾರಗಳು ಮೂಡಿವೆ. ಆದರೂ, ಕಟ್ಟಡದ ಹಳೆಯ ಸ್ವರೂಪ ಮಾತ್ರ ಬದಲಾಗಿಲ್ಲ!‌

ಇದು ಚಿಕ್ಕಬಳ್ಳಾಪುರದಲ್ಲಿರುವ ಮಕ್ಕಳ ಜಿಲ್ಲಾ ಗ್ರಂಥಾಲಯ ಕಟ್ಟಡ. ಈ ಕಟ್ಟಡದ ಒಂದು ಬದಿಯಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿದೆ. ಮತ್ತೊಂದು ಬದಿಯಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಹೆಸರಿದೆ. ಕಟ್ಟಡದ ಒಳ ಹೊಕ್ಕರೆ ಇವರಿಬ್ಬರ ಬೃಹತ್ ಕಲಾಕೃತಿಗಳೂ ಕಾಣುತ್ತವೆ.

ಸರ್‌. ಎಂ. ವಿಶ್ವೇಶ್ವರಯ್ಯ ಅವರು ಜುಲೈ 12, 1945ರಲ್ಲಿ ಈ ಗ್ರಂಥಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಜುಲೈ 17, 1967ರಂದು ಇದನ್ನು ಉದ್ಘಾಟಿಸಿದ್ದರು.

ಶಂಕುಸ್ಥಾಪನೆ ಮತ್ತು ಉದ್ಘಾಟನೆ ಎರಡೂ ನೆರವೇರಿದ್ದು ಜುಲೈ ತಿಂಗಳಲ್ಲಿ, ಆದರೆ ವರ್ಷ ಮಾತ್ರ ಬದಲು.

ಅಂದು ಈ ಕಟ್ಟಡ ಸರ್‌ –ಎಂ.ವಿಶ್ವೇಶ್ವರಯ್ಯ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಮತ್ತು ಓದುವ ಕೊಠಡಿಯಾಗಿ ಉದ್ಘಾಟನೆಗೊಂಡಿತ್ತು. ಅರ್ಧ ಶತಮಾನದ ಕಾಲ, ಲಕ್ಷಾಂತರ ಓದುಗರಿಗೆ ನಿತ್ಯವೂ ಜ್ಞಾನ ದಾಸೋಹ ಉಣಬಡಿಸಿತ್ತು. ನಿತ್ಯವೂ ನೂರಾರು ಮಂದಿ ಪತ್ರಿಕೆ ಓದಲು ಇಲ್ಲಿಗೆ ಬರುತ್ತಿದ್ದರು. ಕಾಲಾಂ ತರದಲ್ಲಿ ಕಟ್ಟಡ ಶಿಥಲಗೊಂಡಿತ್ತು. ಐದು ವರ್ಷಗಳ ಹಿಂದೆಯಷ್ಟೇ ಈ ಕಟ್ಟಡದ ಪಕ್ಕದಲ್ಲೇ ₹5 ಕೋಟಿ ವೆಚ್ಚದಲ್ಲಿ ಡಿಜಿಟಲ್‌ ಗ್ರಂಥಾಲಯ ಸ್ಥಾಪನೆಯಾಯಿತು. ಈ ಕಟ್ಟಡ ಖಾಲಿ ಬಿದ್ದಿತ್ತು.

‘ದೇಶದ ಇಬ್ಬರು ಮಹಾನ್‌ ನಾಯಕರ ಸಾಕ್ಷ್ಯದಲ್ಲಿ ನಿರ್ಮಾಣವಾಗಿದ್ದ ವಿಶೇಷ ವಿನ್ಯಾಸದ ಈ ಐತಿಹಾಸಿಕ ಕಟ್ಟಡವನ್ನು ಕೆಡವಬಾರದು. ಇದು ಸ್ಮಾರಕವಾಗಿಯೇ ಉಳಿಯಬೇಕು’ ಎಂಬುದು ಬಹುಜನರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆಗಳನ್ನು ಅರಿತ ಅಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ‘ಈ ಪಾರಂಪರಿಕ ಕಟ್ಟಡ ಉಳಿಸಿ, ಇದೇ ಕಟ್ಟಡದಲ್ಲಿ ಮಕ್ಕಳ ಗ್ರಂಥಾಲಯ ಆರಂಭಿಸಬೇಕು’ ಎಂದು ತೀರ್ಮಾನಿಸಿದರು. ಅದರಂತೆ ಕಟ್ಟಡ ನವೀಕರಣಗೊಂಡಿತು.

ಜಿಲ್ಲಾಧಿಕಾರಿಯವರ ಪ್ರಯತ್ನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಕಲಾ ಶಿಕ್ಷಕರು ಕೈ ಜೋಡಿಸಿದರು. ನವೀಕೃತ ಕಟ್ಟಡದ ಗೋಡೆಗಳಿಗೆ ಪುಟಾಣಿಗಳ ಗಮನ ಸೆಳೆಯುವಂತಹ ಕಾರ್ಟೂನುಗಳನ್ನು ರಚಿಸಿದರು. ಆಟ, ಪಾಠ, ಪರಿಸರ, ಪ್ರಾಣಿ, ಆಟಿಕೆಗಳು ಮುಂತಾದ ಆಕರ್ಷಕ ಚಿತ್ರಗಳನ್ನು ಬರೆದರು. ಜತೆಗೆ, ಬಣ್ಣ, ವಿನ್ಯಾಸದ ಕುರ್ಚಿ, ಮೇಜುಗಳು, ಆಟಿಕೆಗಳು ಗ್ರಂಥಾಲಯ ಸೇರಿದವು. ಇದೇ ವರ್ಷ ಆಗಸ್ಟ್‌ 15ರಂದು ಈ ಪಾರಂಪರಿಕ ಕಟ್ಟಡದಲ್ಲಿ ‘ಮಕ್ಕಳ ಜಿಲ್ಲಾ ಗ್ರಂಥಾಲಯ’ ಉದ್ಘಾಟನೆಯಾಯಿತು.

ಅಂದಿನಿಂದ ಮಕ್ಕಳು ಶಿಕ್ಷಕರೊಂದಿಗೆ ಈ ಗ್ರಂಥಾಲಯಕ್ಕೆ ಬರುತ್ತಾರೆ. ಅಲ್ಲಿನ ಚಿತ್ರಗಳನ್ನು ನೋಡಿ ಖುಷಿಪಡುತ್ತಾರೆ. ಆಟಿಕೆಗಳೊಟ್ಟಿಗೆ ಆಡುತ್ತಾರೆ. ರಜೆ ದಿನಗಳನ್ನು ಹೊರತುಪಡಿಸಿ ನಿತ್ಯವೂ ಗ್ರಂಥಾಲಯದ ತುಂಬಾ ಮಕ್ಕಳ ಕಲರವ !

ಇದನ್ನೂ ಓದಿ: ಇ– ಗ್ರಂಥಾಲಯ ವಿದ್ಯಾರ್ಥಿಗಳ ವಿಸ್ಮಯಲೋಕ

‘ಸುಮಾರು ಎರಡೂವರೆ ವರ್ಷಗಳ ಕಾಲ ಈ ಗ್ರಂಥಾಲಯ ಪಳಯುಳಿಕೆಯಂತಾಗಿತ್ತು. ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರ ಪ್ರಯತ್ನದಿಂದ ಮಕ್ಕಳ ಮನೋವಿಕಾಸಕ್ಕೆ ಸಹಾಯ ವಾಗುವಂತಹ ಗ್ರಂಥಾಲಯವಾಗಿದೆ’  ಎಂದು ನೆನಪಿಸಿಕೊಳ್ಳುತ್ತಾರೆ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಶಂಕರಪ್ಪ.

ಈ ಗ್ರಂಥಾಲಯ ಕಟ್ಟಡದ ಗೋಡೆಗಳ ಮೇಲೆ ಚಿತ್ತಾರಗಳನ್ನು ಬರೆದ ಕಲಾ ಶಿಕ್ಷಕರಿಗೂ ತಮ್ಮ ಕೆಲಸ ಬಗ್ಗೆ ಹೆಮ್ಮ ಇದೆ. ‘ನಾವು ಆರು ಮಂದಿ ಕಲಾ ಶಿಕ್ಷಕರು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದೇವೆ. ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ್‌ ಶ್ರವಣ್‌ ಅವರು ನಮ್ಮ ಇಲಾಖೆ ಮುಖ್ಯಸ್ಥರಿಂದ ಅನುಮತಿ ಕೊಡಿಸಿ, ಚಿತ್ರರಚನೆಗೆ ಸೂಚಿಸಿದರು. ಅಷ್ಟೇ ಅಲ್ಲ, ಚಿತ್ರ ರಚನೆಯನ್ನೂ ಗಮನಿಸುತ್ತಿದ್ದರು. ನನ್ನನ್ನೂ ಸೇರಿದಂತೆ ಕಲಾ ಶಿಕ್ಷಕರಾದ ಸಿದ್ದೇಶ್ ಬಂಡಿಮನೆ, ಜಿ.ಅರುಣ, ಸಂತೋಷ್ ಕುಮಾರ್, ಸತೀಶ್ ಸೇರಿ ಚಿತ್ರಗಳನ್ನು ರಚಿಸಿದ್ದೇವೆ’ ಎಂದು ಕಲಾ ಶಿಕ್ಷಕ ಎಂ.ನಾಗರಾಜ್ ಚಿತ್ತಾರಗಳು ರೂಪಗೊಂಡ ಬಗೆಯನ್ನು ವಿವರಿಸುತ್ತಾರೆ.

ಒಂದಷ್ಟು ಸರ್ಕಾರಿ ಅಧಿಕಾರಿಗಳ ಶ್ರಮ, ಶಿಕ್ಷಕರ ಆಸಕ್ತಿಯಿಂ ದಾಗಿ ಪಾರಂಪರಿಕ ಕಟ್ಟಡವೊಂದು ಗ್ರಂಥಾಲಯವಾಗಿ ರೂಪು ಗೊಂಡಿದೆ. ಮಕ್ಕಳನ್ನು ಪ್ರೀತಿಸುತ್ತಿದ್ದ ಜವಾಹರಲಾಲ್‌ ನೆಹರು ಅವರ ಆಶಯಕ್ಕೆ ತಕ್ಕಂತೆ, ಅವರು ಉದ್ಘಾಟಿಸಿದ ಕಟ್ಟಡ ಮಕ್ಕಳ ಗ್ರಂಥಾಲಯವನ್ನಾಗಿ ರೂಪಿಸಿರುವುದು ಅರ್ಥಪೂರ್ಣವಾಗಿದೆ.  ಈ ಕೇಂದ್ರವನ್ನು ಮಕ್ಕಳು ಹೆಚ್ಚು ಬಳಸಬೇಕು ಎನ್ನುವುದು ಹಿರಿಯರ ಅಭಿಪ್ರಾಯವಾಗಿದೆ.

(ಚಿತ್ರಗಳು: ಲೇಖಕರವು)

ಪ್ರತಿಕ್ರಿಯಿಸಿ (+)