ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಮತ್ತೆ 32 ವರದಿ

227 ವರದಿಗಳು ವಿಲೇವಾರಿಗೆ ರಾಜ್ಯ ಸರ್ಕಾರದಲ್ಲಿ ಬಾಕಿ
Last Updated 3 ಜನವರಿ 2023, 11:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜಾತಿ (ಒಬಿಸಿ) ಪಟ್ಟಿಯಲ್ಲಿ ಇಲ್ಲದ 227 ಸಮುದಾಯಗಳ ಸ್ಥಿತಿಗತಿಯ ಅಧ್ಯಯನ ನಡೆಸಿ ಹಿಂದುಳಿದ ವರ್ಗಗಳ ಆಯೋಗಗಳು ಸಲ್ಲಿಸಿದ್ದ ವರದಿಗಳು ಸರ್ಕಾರದ ಮುಂದಿವೆ. ಈ ಮಧ್ಯೆಯೇ, ವಿವಿಧ ಜಾತಿಗಳ ಕುರಿತ ಇನ್ನೂ 32 ಅಧ್ಯಯನ ವರದಿಗಳನ್ನು ಸಲ್ಲಿಸಲು ಆಯೋಗ ನಿರ್ಧರಿಸಿದೆ.

ಹಿಂದುಳಿದ ವರ್ಗಗಳ ಪಟ್ಟಿಯ ‘ಪ್ರವರ್ಗ 3ಬಿ’ಯಿಂದ ‘ಪ್ರವರ್ಗ 2ಎ’ಗೆ ಸೇರಿಸುವಂತೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಹಾಗೂ ‘ಪ್ರವರ್ಗ 3ಎ’ಯಲ್ಲಿರುವ ಒಕ್ಕಲಿಗ ಸಮುದಾಯ ಮೀಸಲಾತಿ ಪ್ರಮಾಣವನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿವೆ. ಈ ಬೆನ್ನಲ್ಲೇ, ಹಿಂದಿನ ವರದಿಗಳ ವಿಷಯವೂ ಈಗ ಮುನ್ನೆಲೆಗೆ ಬಂದಿವೆ.

ಈಗಿನ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗವು ತಯಾರಿಸಿರುವ 32 ವರದಿಗಳಲ್ಲಿ ತೀರಾ ಹಿಂದುಳಿದ, ಕಡಿಮೆ ಜನಸಂಖ್ಯೆ ಹೊಂದಿರುವ ಕಾಡುಗೊಲ್ಲ/ಹಟ್ಟಿಗೊಲ್ಲ, ಚಪ್ಪರ್‌ ಬಂದ್‌, ಕುಡುಬಿ, ಮುಖಾರಿ/ಮುವಾರಿ, ಪೊಮ್ಮಲ, ಮರುತ್ತುವರ್‌, ಪರಿಯಾಳ, ಮಡಿ ಒಕ್ಕಲಿಗ ಜಾತಿಗಳ ಸ್ಥಿತಿಗತಿ ವರದಿಯೂ ಸೇರಿವೆ. ಈ ಪೈಕಿ, ಪೊಮ್ಮಲ ಎಂದು ಗುರುತಿಸಿಕೊಂಡಿರುವ ಜಾತಿ ಕೇವಲ 300 ಜನಸಂಖ್ಯೆ ಹೊಂದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿದೆ. ಮುಖಾರಿ/ಮುವಾರಿ ಎಂದು ಕರೆಸಿಕೊಳ್ಳುವ ಸಮುದಾಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಭಾಗದಲ್ಲಿದ್ದು, ಈ ಸಮುದಾಯದವರ ಜನಸಂಖ್ಯೆ ಸುಮಾರು 2,000ದಷ್ಟಿದೆ.

ಮೀಸಲಾತಿ ಸೌಲಭ್ಯಗಳಿಂದ ವಂಚಿತವಾದ ಸಣ್ಣಪುಟ್ಟ ಸಮುದಾಯಗಳು ಸಲ್ಲಿಸಿದ ಅಹವಾಲುಗಳನ್ನು ಆಲಿಸಿ, ಆ ಸಮುದಾಯಗಳು ನೆಲೆಸಿರುವ ಜಾಗಗಳಿಗೆ ತೆರಳಿ ಸಾರ್ವಜನಿಕವಾಗಿ ವಿಚಾರಣೆಯ ಮೂಲಕ ಸಾಮಾಜಿಕ, ಶೈಕ್ಷಣಿಕ ಸ್ಥಿತಿ, ವೃತ್ತಿ, ಜೀವನಶೈಲಿಯ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಅವರ ಬದುಕಿನ ಸ್ಥಿತಿಗತಿಯನ್ನು ಆಧರಿಸಿ, ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರಿಸಬಹುದೆಂಬ ಬಗ್ಗೆ ಆಧಾರಗಳ ಸಹಿತ ಶಿಫಾರಸನ್ನು ಸಲ್ಲಿಸಲಾಗುತ್ತದೆ. ಇಂತಹ ಜಾತಿಗಳನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಬೇಕೇ, ಬೇಡವೇ ಎಂದು ಸರ್ಕಾರ ತೀರ್ಮಾನಿಸಲಿದೆ. ಶಿಫಾರಸನ್ನು ತಿರಸ್ಕರಿಸಲೂಬಹುದು’ ಎಂದು ಮೂಲಗಳು ತಿಳಿಸಿವೆ.

‘ಸದ್ಯ, ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್‌) ಪಟ್ಟಿಯಲ್ಲಿ ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತ, ಮೊದಲಿಯಾರ್ ಜಾತಿಗಳು ಮಾತ್ರ ಇವೆ ಎಂದೇ ಪರಿಗಣಿಸಲಾಗಿದೆ.
ಆದರೆ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜಾತಿ ಪಟ್ಟಿಗೆ ಸೇರದ ಎಲ್ಲ ಜಾತಿಗಳು, ಇಡಬ್ಲ್ಯುಎಸ್‌ ಪಟ್ಟಿಗೆ ಸೇರುವ ಅವಕಾಶ ಇದೆ. ಹೀಗಾಗಿ, ಆಯೋಗ ಸಲ್ಲಿಸಿದ ವರದಿಗಳ ಆಧಾರದಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ತೀರ್ಮಾನ ಮತ್ತು ಈಗಿರುವ ಪ್ರವರ್ಗಗಳ ಮರುವಿಂಗಡಣೆಯ ಬಳಿಕ ಇಡಬ್ಲ್ಯುಎಸ್‌ ಪಟ್ಟಿಗೆ ಇನ್ನು 30ಕ್ಕೂ ಹೆಚ್ಚು ಜಾತಿಗಳು ಸೇರುವ ಸಾಧ್ಯತೆ ಇದೆ’ ಎಂದೂ ಮೂಲಗಳು ಹೇಳಿವೆ.

ಅನಾಥ ಮಕ್ಕಳಿಗೂ ಮೀಸಲಾತಿ ಶಿಫಾರಸು

ಜಾತಿ ಯಾವುದೆಂದೇ ಗೊತ್ತಿಲ್ಲದ 5,280 ಅನಾಥ ಮಕ್ಕಳು ರಾಜ್ಯದಲ್ಲಿದ್ದಾರೆ.‌ ಈ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಲು ವಿಶೇಷ ವರದಿಯನ್ನು ಆಯೋಗ ಸಿದ್ಧಪಡಿಸಿದೆ.

ಇಂಥ ಮಕ್ಕಳಿಗೆ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ನೀಡಲಾಗುತ್ತಿದೆ. ದತ್ತು ಪಡೆದ ಮಕ್ಕಳಿಗೆ, ಪೋಷಕ ತಂದೆಯ
ಜಾತಿಯನ್ನೇ ಪರಿಗಣಿಸಲಾಗುತ್ತದೆ. ಅನಾಥ ಮಕ್ಕಳಿಗೆ ಜಾತಿ ಪರಿಗಣಿ
ಸಲು ಅವಕಾಶವೇ ಇಲ್ಲದಿರುವುದರಿಂದ, ಇತರ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ ಮೀಸಲಾತಿ ಕಲ್ಪಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಯಾರ ಅವಧಿಯಲ್ಲಿ ಎಷ್ಟು ಬಾಕಿ?

ಮೀಸಲಾತಿ: ಮತ್ತೆ 32 ವರದಿ

ವಿವಿಧ ಜಾತಿಗಳಿಗೆ ಸಂಬಂಧಿಸಿದ 32 ಅಧ್ಯಯನ ವರದಿಗಳು ಸಿದ್ಧವಾಗಿವೆ. ಕೆಲ ವರದಿಗಳ ಮುದ್ರಣ ಪೂರ್ಣಗೊಂಡಿದೆ. ಈ ಎಲ್ಲವನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತೇವೆ.

-ಕೆ.ಜಯಪ್ರಕಾಶ್ ಹೆಗ್ಡೆ,ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT