ಶುಕ್ರವಾರ, ಮೇ 20, 2022
19 °C
ಕೇಂದ್ರ ಸಚಿವರ ಕ್ಷೇತ್ರದಲ್ಲೂ ಆಯ್ಕೆಯಿಲ್ಲ l ಮೂರು ವರ್ಷಗಳಲ್ಲಿ 25 ಗ್ರಾಮಗಳಷ್ಟೇ ಆಯ್ಕೆ

ರಾಜ್ಯದ 11 ಸಂಸದರಿಂದ ಆದರ್ಶ ಗ್ರಾಮಕ್ಕೆ ಎಳ್ಳುನೀರು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕಳೆದ ಮೂರು ವರ್ಷಗಳಿಂದ ರಾಜ್ಯದ 11 ಸಂಸದರು ‘ಸಂಸದರ ಆದರ್ಶ ಗ್ರಾಮ’ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ! 2019–20ರಿಂದ ಇಲ್ಲಿಯವರೆಗೆ ಈ ಯೋಜನೆಯಡಿ ಗ್ರಾಮಗಳನ್ನು ಆಯ್ಕೆಯೇ ಮಾಡಿಲ್ಲ. 

ಪ್ರಧಾನಿ ನರೇಂದ್ರ ಮೋದಿ 2014ರ ಅ. 11ರಂದು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಿದರು.  ಗ್ರಾಮಗಳ ಸಮಗ್ರ ಅಭಿವೃದ್ಧಿಯ ಜತೆಗೆ ಸಂಸದರ ನಾಯಕತ್ವ, ಸಾಮರ್ಥ್ಯ ತೋರುವುದು ಯೋಜನೆಯ ಉದ್ದೇಶವಾಗಿದೆ. 

ಸಂಸದರ ಆದರ್ಶ ಗ್ರಾಮ ಯೋಜನೆ  ನಾಮಕಾವಾಸ್ತೆ ಯೋಜನೆ ಎನ್ನುವ ಟೀಕೆ ಹಿಂದಿನಿಂದಲೂ ಇದೆ. ತುಮಕೂರು ಸಂಸದ ಜಿ.ಎಸ್. ಬಸವರಾಜು ಮಾತ್ರ 2019–20 ಮತ್ತು 2020–21ರಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಿದ್ದಾರೆ. ಪ್ರಸಕ್ತ ಸಾಲಿನ ಆಯ್ಕೆ ಬಾಕಿ ಇದೆ. ಉಳಿದ ಸಂಸದರು ಒಂದು ವರ್ಷ ಆಯ್ಕೆ ಮಾಡಿದ್ದರೆ ಮತ್ತೊಂದು ವರ್ಷ ಯೋಜನೆಯಿಂದ ದೂರವೇ ಉಳಿದಿದ್ದಾರೆ.    

ಚಿತ್ರದುರ್ಗ, ಧಾರವಾಡ, ಉತ್ತರ ಕನ್ನಡ, ಹಾಸನ, ಚಾಮರಾಜನಗರ, ದಕ್ಷಿಣ ಕನ್ನಡ, ಬೀದರ್, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಹಾವೇರಿ, ಶಿವಮೊಗ್ಗ ಕ್ಷೇತ್ರದ ಸಂಸದರು ಮೂರು ವರ್ಷಗಳಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮಗಳ ಆಯ್ಕೆಗೆ ಮುಂದಾಗಿಲ್ಲ.  

ಹಾಸನ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಸಂಸದರೇ ಇದ್ದಾರೆ. ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಅವರ ಕ್ಷೇತ್ರಗಳಲ್ಲಿಯೇ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗೆ ಗ್ರಹಣ ಬಡಿದಿದೆ.

2019–20ನೇ ಸಾಲಿನಲ್ಲಿ ಬೆಳಗಾವಿ, ಬೆಂಗಳೂರು ಉತ್ತರ, ಚಿಕ್ಕೋಡಿ, ಕೊಪ್ಪಳ, ಕಲಬುರಗಿ, ತುಮಕೂರು, ದಾವಣಗೆರೆ, ಬಳ್ಳಾರಿ ಸಂಸದರು ಮಾತ್ರ ಗ್ರಾಮಗಳನ್ನು ಆಯ್ಕೆ ಮಾಡಿದ್ದಾರೆ. ಉಳಿದ 20 ಸಂಸದರ ಕ್ಷೇತ್ರಗಳಲ್ಲಿ ಆಯ್ಕೆ ನಡೆದಿಲ್ಲ.

2020–21ನೇ ಸಾಲಿನಲ್ಲಿ ಮಂಡ್ಯ, ಬಾಗಲಕೋಟೆ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ರಾಯಚೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು ಗ್ರಾಮಗಳನ್ನು ಆಯ್ಕೆ ಮಾಡಿದ್ದಾರೆ. ಉಳಿದ 21 ಸಂಸದರು ಯೋಜನೆಯನ್ನು ಕೈಚೆಲ್ಲಿದ್ದಾರೆ.

2021–22ನೇ ಸಾಲಿನಲ್ಲಿ ಮಂಡ್ಯ, ಬೆಳಗಾವಿ, ವಿಜಯಪುರ, ಉಡುಪಿ–ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಸಂಸದರು ಗ್ರಾಮಗಳನ್ನು ಆಯ್ಕೆ ಮಾಡಿದ್ದಾರೆ. ಉಳಿದ 21 ಸಂಸದರ ಕ್ಷೇತ್ರಗಳಲ್ಲಿ ಆಯ್ಕೆ ನಡೆದಿಲ್ಲ. ಈ ಮೂರು ವರ್ಷಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಒಟ್ಟು 25 ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿದ್ದಾರೆ.

ಪ್ರತಿಕ್ರಿಯಿಸದ ಸಚಿವರು, ಸಂಸದರು

ಈ ಬಗ್ಗೆ ಅಭಿಪ್ರಾಯ ಪಡೆಯಲು ಕೆಲವು ಸಂಸದರಿಗೆ ಎರಡು ದಿನಗಳಲ್ಲಿ ಹಲವು ಬಾರಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎ. ನಾರಾಯಣಸ್ವಾಮಿ ಕರೆ ಸ್ವೀಕರಿಸಲಿಲ್ಲ. ಅವರ ಸಹಾಯಕರಿಗೆ ಇಂತಹ ವಿಚಾರವಾಗಿ ಸಂಸದರನ್ನು ಸಂಪರ್ಕಿಸಬೇಕಿತ್ತು ಎಂದು ತಿಳಿಸಲಾಯಿತು. ನಾವೇ ಕರೆ ಮಾಡಿಸುತ್ತೇವೆ ಎಂದರು. ನಂತರ ‘ಆರೋಗ್ಯ ಸರಿ ಇಲ್ಲ, ಕೆಲಸದ ಒತ್ತಡದಲ್ಲಿ ಇದ್ದಾರೆ’ ಎಂದರು.

ಮತ್ತೊಬ್ಬ ಕೇಂದ್ರ ಸಚಿವ ಭಗವಂತ ಖೂಬಾ, ಎರಡು ಬಾರಿ ಕರೆ ಸ್ವೀಕರಿಸಿದರೂ, ‘ಈ ಬಗ್ಗೆ ನಂತರ ಮಾತನಾಡುವೆ’ ಎಂದು ಕರೆ ಕಡಿತಗೊಳಿಸಿದರು. ಹಾವೇರಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ ಸಂಸದರನ್ನು ನೇರವಾಗಿ ಮತ್ತು ಅವರ ಸಹಾಯಕರ ಮೂಲಕ ಸಂಪರ್ಕಕ್ಕೆ ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು