ಮಂಗಳವಾರ, ಜೂನ್ 15, 2021
22 °C
ಲಿಂಗಸುಗೂರು: ಸೇತುವೆ ಮುಳುಗಡೆ, ಪ್ರವಾಹ ಭೀತಿ

ಆಲಮಟ್ಟಿ: 2.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಪ್ರವಾಹದ ಭೀತಿ ಎದುರಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಭಾನುವಾರ ಸಂಜೆ 6ರಿಂದ ಎಲ್ಲ 26 ಗೇಟ್‌ಗಳನ್ನು ತೆರೆದು 2.20 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಏರುಗತಿಯಲ್ಲಿದೆ.

ಬೆಳಗಾವಿ ಜಿಲ್ಲೆಯ ರಾಜಾಪುರ ಬ್ಯಾರೇಜ್‌ನಿಂದ 90 ಸಾವಿರ ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 15ಸಾವಿರ ಕ್ಯುಸೆಕ್‌ ಸೇರಿ 1.05 ಲಕ್ಷ ಕ್ಯುಸೆಕ್‌ ನೀರು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರಿದೆ. ನಿಪ್ಪಾಣಿ ತಾಲ್ಲೂಕಿನ ಜತ್ರಾಟ-ಭೀವಶಿ ಸೇತುವೆ ಮುಳುಗಡೆ ಹಂತ ತಲುಪಿದೆ.

‘ಮಹಾರಾಷ್ಟ್ರದ ಕೊಯ್ನಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಭಾನುವಾರ ಅಲ್ಲಿಂದ 35ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಆ ರಾಜ್ಯದ ವಿವಿಧ ಜಲಾಶಯಗಳಿಂದ ಕರ್ನಾಟಕಕ್ಕೆ ಬರುತ್ತಿರುವ ನೀರಿನ ಪ್ರಮಾಣ ಮುಂದಿನ 48 ಗಂಟೆಗಳಲ್ಲಿ 2 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಲಿದೆ ಎಂದು ಮಹಾರಾಷ್ಟ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಬೆಳಗಾವಿ ಜಿಲ್ಲಾಡಳಿತ ತಿಳಿಸಿದೆ.

ಸವದತ್ತಿ ತಾಲ್ಲೂಕಿನ ಮಲಪ್ರಭಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವು
ರಿಂದ ಮುನವಳ್ಳಿಯ ಹಳೆಯ ಸೇತುವೆ ಮುಳುಗಡೆಯಾಗಿದೆ.

ಹಿಡಕಲ್‌ ಜಲಾಶಯದಿಂದಲೂ ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿರುಸಿನ ಮಳೆಯಾಗಿದೆ. 

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುವುದು ಎಂದು ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ಲಕಮಾಪುರಕ್ಕೆ ಪ್ರವಾಹ ಭೀತಿ: ಗದಗ ಜಿಲ್ಲೆಯ ನರಗುಂದದಲ್ಲಿ ಮಲಪ್ರಭೆಯ ನವಿಲುತೀರ್ಥ ಜಲಾಶಯ ಭರ್ತಿ ಯಾಗಲು ನಾಲ್ಕು ಅಡಿ ಬಾಕಿ ಇದ್ದು ತಾಲ್ಲೂಕಿನ ಮಲಪ್ರಭಾ ಹೊಳೆ ಅಂಚಿ ನಲ್ಲಿರುವ ಲಕಮಾಪುರ ಗ್ರಾಮ ಪ್ರವಾಹದ ಭೀತಿ ಎದುರಿಸುತ್ತಿದೆ. ಜಲಾಶಯದ ಒಳ ಹರಿವು ಹೆಚ್ಚಾಗುತ್ತಿರುವುದಿಂದ ಭಾನುವಾರ 23 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗಿದೆ.

ಆತಂಕ ಸೃಷ್ಟಿ: ನಾರಾಯಣಪುರ ಜಲಾಶಯಕ್ಕೆ 1.90 ಲಕ್ಷ ಕ್ಯುಸೆಕ್‍ ಹರಿದು ಬರುತ್ತಿದೆ. ಜಲಾಶಯದ ಕ್ರಸ್ಟ್‌ಗೇಟ್‍ ಮೂಲಕ 2.37ಲಕ್ಷ ಕ್ಯುಸೆಕ್‍ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.  ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳು ಗಿದೆ. ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರಿನಲ್ಲಿ ಮಳೆ ಆಗಿದೆ. 

ಉತ್ತಮ ಮಳೆ: ಕರಾವಳಿ ಮತ್ತು ಬಯಲುಸೀಮೆಯಲ್ಲಿ ಸಾಧಾರಣ , ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆ ಯಲ್ಲಿ ಉತ್ತಮ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು