ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಮಳೆ, 25 ಮನೆಗಳಿಗೆ ಹಾನಿ

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ತಮ ಮಳೆ
Last Updated 6 ಅಕ್ಟೋಬರ್ 2022, 21:08 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಕಲಬುರಗಿ: ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಉತ್ತಮ ಮಳೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ 25 ಮನೆಗಳ ಗೋಡೆ ಕುಸಿದಿದೆ. ಕಲಬುರಗಿಯಲ್ಲಿ 7 ಸೆಂ.ಮೀ ಮಳೆ ಸುರಿದಿರುವುದು ದಾಖಲಾಗಿದೆ.

ವಿಜಯನಗರ, ಹುಬ್ಬಳ್ಳಿ, ಕಾರವಾರ, ಗದಗ, ಬೆಳಗಾವಿ ಸೇರಿ ಹಲವೆಡೆ ಮಳೆಯಾಗಿದೆ. ವಿಜಯನಗರ ಜಿಲ್ಲೆಹರಪನಹಳ್ಳಿ ತಾಲ್ಲೂಕಿನ ತಲುವಾಗಲುನಲ್ಲಿ ಮಲಿಯಮ್ಮ ದೇವಸ್ಥಾನ, ಒಂಬತ್ತು ಮನೆಗಳಿಗೆ ನೀರು ನುಗ್ಗಿದೆ. ಹೂವಿನಹಡಗಲಿ ತಾಲ್ಲೂಕಿನ ಸೋವೇನಹಳ್ಳಿಯಲ್ಲಿ ಶಿವನಕಟ್ಟೇಶ್ವರ ದೇಗುಲದ ಗೋಡೆ ಬಿರುಕುಬಿಟ್ಟಿದೆ.

ಕಟಾವು ಹಂತಕ್ಕೆ ಬಂದಿದ್ದ ನೂರಾರು ಎಕರೆ ಈರುಳ್ಳಿ, ಮೆಣಸಿನ ಕಾಯಿ ಬೆಳೆ ಹಾನಿಯಾಗಿದೆ. ಕೂಡ್ಲಿಗಿ ತಾಲ್ಲೂಕಿನ ಹಾರಕಭಾವಿ ಸರ್ಕಾರಿ ಶಾಲೆ ಜಲಾವೃತವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ, ಕುರುಗೋಡು, ಕಂಪ್ಲಿಯಲ್ಲೂ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕಾರವಾರದಲ್ಲಿ ಮುಂಜಾನೆ ದಟ್ಟವಾಗಿ ಕಾರ್ಮೋಡ ಕವಿದು, ಒಂದೆರಡು ಸಲ ಜೋರಾಗಿ ಸುರಿಯಿತು. ಗೋಕರ್ಣದ ಸುತ್ತಮುತ್ತ ಕೆಲವೆಡೆ ಭತ್ತ ಕಟಾವು ಆರಂಭವಾಗಿದ್ದು, ಮಳೆಯಿಂದಾಗಿ ಸ್ವಲ್ಪ ತೊಂದರೆಯಾಯಿತು.

ಉಳಿದಂತೆ ಕರಾವಳಿಯ ಎಲ್ಲೆಡೆ, ಶಿರಸಿ, ಸಿದ್ದಾಪುರ ಭಾಗದಲ್ಲಿ ಸಾಧಾರಣ, ಮುಂಡಗೋಡ, ಹಳಿಯಾಳ, ದಾಂಡೇಲಿ ಭಾಗದಲ್ಲಿ ತುಂತುರು ಮಳೆ ಸುರಿಯಿತು. ಹನಿಯಿತು. ಗದಗ ಜಿಲ್ಲೆಯಲ್ಲಿ ಗದಗ ಬೆಟಗೇರಿ ಅವಳಿ ನಗರ, ಮುಳಗುಂದ, ಲಕ್ಷ್ಮೇಶ್ವರ ಮತ್ತು ಮುಂಡರಗಿ ಭಾಗದಲ್ಲೂ ಜೋರು ಮಳೆ ಆಗಿದೆ. ಬೆಳಗಾವಿ ಜಿಲ್ಲೆ ಯಲ್ಲಿ ರಾಮದುರ್ಗ, ರಾಯಬಾಗ, ಸವದತ್ತಿ ಸೇರಿ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ದಿನಪೂರ್ತಿ ಮಳೆ
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಕೃಷಿ ಜಮೀನುಗಳು ಜಲಾವೃತವಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರಿನ ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ 140 ಕ್ವಿಂಟಲ್‌ ಮೆಕ್ಕೆಜೋಳ ನೀರಿನಲ್ಲಿ ಕೊಚ್ಚಿ ಹೋಗಿದೆ.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಕಲಬುರಗಜಿಲ್ಲೆಯಲ್ಲಿ ಅಕ್ಟೋಬರ್ 12ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಮತ್ತೆ ಮಳೆ ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯ ಕೆಲವೆಡೆ ಮಳೆ ಆರಂಭವಾಗಿದೆ. 15 ದಿನಗಳಿಂದ ಮಳೆ ಬಿಡುವು ನೀಡಿತ್ತು. ಕೊಳೆರೋಗದಿಂದ ಬಾಧಿತವಾಗಿರುವ ಕಾಫಿ, ಮೆಣಸಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸಲು ಬೆಳೆಗಾರರು ಸಿದ್ಧತೆ ನಡೆಸಿದ್ದರು. ಈಗ ನಿರಂತರವಾಗಿ ಸುರಿಯುತ್ತಿರುವ ಮಳೆ ತೊಡಕಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT