ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರಿಗೆ ₹ 3,000, ಡಿಪ್ಲೊಮಾ ಪದವೀಧರರಿಗೆ ₹1,500: ರಾಹುಲ್‌ ಗಾಂಧಿ ಘೋಷಣೆ

‘ನಿರುದ್ಯೋಗ ಭತ್ಯೆ ಗ್ಯಾರಂಟಿ’
Last Updated 20 ಮಾರ್ಚ್ 2023, 19:44 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿರುಸಿನ ಸಿದ್ಧತೆಯನ್ನು ನಡೆಸಿರುವ ಕಾಂಗ್ರೆಸ್‌ ಪಕ್ಷ ಸೋಮವಾರ ತನ್ನ ನಾಲ್ಕನೇ ಗ್ಯಾರಂಟಿ ಭರವಸೆಯಾಗಿ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿತು.

ಎರಡು ವರ್ಷಗಳವರೆಗೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹ 3,000, ಡಿ‍ಪ್ಲೊಮಾ ಪದವೀಧರ ರಿಗೆ ₹ 1,500 ಭತ್ಯೆ ನೀಡಲಾ
ಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಲ್ಲಿ ನಡೆದ ‘ಯುವ ಕ್ರಾಂತಿ’ ಸಮಾವೇಶದಲ್ಲಿ ಘೋಷಿಸಿ, ‘ಯುವನಿಧಿ’
ಗ್ಯಾರಂಟಿ ಕಾರ್ಡ್‌ ಬಿಡುಗಡೆ ಮಾಡಿದರು.

ಕಾಂಗ್ರೆಸ್‌ ಈಗಾಗಲೇ ಗ್ಯಾರಂಟಿ ಭರವಸೆಗಳಾಗಿ, ಪ್ರತಿ ಮನೆ ಯಜಮಾನಿಗೆ ಮಾಸಿಕ ₹ 2,000 ನೀಡುವ ‘ಗೃಹಲಕ್ಷ್ಮಿ’, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’, ಬಿಪಿಎಲ್‌ ಕುಟುಂಬದ ಪ್ರತಿ ವ್ಯಕ್ತಿಗೆ, ಮಾಸಿಕ ತಲಾ 10 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆ ಘೋಷಿಸಿದೆ.

ನಿರುದ್ಯೋಗಿ ಪದವೀಧರರಿಗೆ ಭತ್ಯೆ ಯನ್ನು ನೀಡುವ ಭರವಸೆಯನ್ನು ಕಾಂಗ್ರೆಸ್‌ ಪಕ್ಷ ಈಗಾಗಲೇ ಛತ್ತೀಸಗಡ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಜಾರಿಗೆ ತಂದಿದೆ.

ಯವಶಕ್ತಿ ಸಬಲೀಕರಣಕ್ಕೆ ಒತ್ತು: 18 ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿ ಜಿಲ್ಲೆಯಲ್ಲಿ ಬೃಹತ್‌ ಸಮಾವೇಶ ನಡೆಸುವುದರೊಂದಿಗೆ ಕಾಂಗ್ರೆಸ್‌ ಯವಶಕ್ತಿ ಸಬಲೀಕರಣದ ಅಭಯವನ್ನು ನೀಡಿತು.

‘ರಾಜ್ಯದ ಬಿಜೆಪಿ ಸರ್ಕಾರ ಉದ್ಯೋಗ ನೀಡಲು ವಿಫಲವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಯವ ಜನರನ್ನು ಕಡೆಗಣಿಸಿವೆ. ನಿರುದ್ಯೋಗ ದಿಂದ ತತ್ತರಿಸಿರುವ ಯುವಜನರಿಗೆ ಭರವಸೆಯ ಬೆಳಕಾಗಿ ‘ಯುವನಿಧಿ’ ಘೋಷಿಸುತ್ತಿದ್ದೇವೆ’ ಎಂದು ರಾಹುಲ್‌ಗಾಂಧಿ ಹೇಳಿದರು.

‘ನಮ್ಮ ಘೋಷಣೆ ಇಷ್ಟಕ್ಕೇ ನಿಲ್ಲದು. ರಾಜ್ಯದಲ್ಲಿ ಇನ್ನೂ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಕಾಂಗ್ರೆಸ್‌ ಸರ್ಕಾರ ರಚನೆ
ಯಾದ ವರ್ಷದೊಳಗೆ ಈ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡುತ್ತೇವೆ’ ಎಂದರು.

‘ಐದು ವರ್ಷ ಪೂರೈಸುವಷ್ಟರಲ್ಲಿ 10 ಲಕ್ಷ ಉದ್ಯೋಗ ನೀಡುತ್ತೇವೆ. ಯುವ ಸಶಕ್ತೀಕರಣವೇ ನಮ್ಮ ಮೊದಲ ಹೆಜ್ಜೆ ಆಗಲಿದೆ. ನಿರುದ್ಯೋಗದಿಂದ ಕಂಗಾಲಾದವರಿಗೆ ಆರ್ಥಿಕ ಶಕ್ತಿ ನೀಡುತ್ತೇವೆ’ ಎಂದೂ ಹೇಳಿದರು.

‘ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಮೌನ’: ‘ರಾಜ್ಯ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಪಡೆವ ಬಗ್ಗೆ ಗುತ್ತಿಗೆದಾರರ ಸಂಘದವರು ದಾಖಲೆ ಕೊಟ್ಟರೂ ಪ್ರಧಾನಿ ಏನೂ ಮಾತನಾಡಲು ಸಿದ್ಧರಿಲ್ಲ’ ಎಂದು ಟೀಕಿಸಿದರು.

‘ಭ್ರಷ್ಟ ಸರ್ಕಾರದ ಬೆನ್ನಿಗೆ ಕಾವಲಾಗಿ ನಿಂತಿದ್ದಾರೆ. ಪಿಎಸ್‌ಐ ನೇಮಕ, ಸಹಾಯಕ ಪ್ರಾಧ್ಯಾಪಕರ ನೇಮಕ, ಸಹಾಯಕ ಎಂಜಿನಿಯರ್‌ ನೇಮಕ ಹೀಗೆ ಪ್ರತಿ ನೇಮಕಾತಿಯಲ್ಲೂ ಹಗರಣ ನಡೆದಿವೆ. ಇದನ್ನು ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾದ ಕರ್ನಾಟಕದ ಯುವಜನರೇ ಹೇಳಿದ್ದಾರೆ’ ಎಂದೂ ಹೇಳಿದರು.

ಬೆಳಗಾವಿಗೆ ಮೋದಿ ಅವರ ಭೇಟಿ, ರೋಡ್ ಶೋ ಬಳಿಕ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿ ಅವರ ಐತಿಹಾಸಿಕ ಸಭೆಯೊಂದಿಗೆ ತಳಕು ಹಾಕಿ ಬೃಹತ್‌ ಯುವ ಕ್ರಾಂತಿ ಸಮಾವೇಶವನ್ನು ನಡೆಸಿತು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪಕ್ಷದ ಹಲವು ನಾಯಕರು ಮಾತನಾಡಿದರು.

‘ಭ್ರಷ್ಟ ಸರ್ಕಾರ ಕಿತ್ತೆಸೆಯೋಣ’

‘ಕರ್ನಾಟಕದ ಯುವಜನರು ಎಲ್ಲಿಗೆ, ಎಷ್ಟು ಬಾರಿ ಕರೆದರೂ ನಾನು ಬರುತ್ತೇನೆ. ಒಂದಾಗಿ ಚುನಾವಣೆ ಎದುರಿಸೋಣ. ಭ್ರಷ್ಟ ಸರ್ಕಾರ ಕಿತ್ತೆಸೆಯೋಣ’ ಎಂದು ರಾಹುಲ್‌ಗಾಂಧಿ ಅವರು ಕರೆ ನೀಡಿದರು.

‘ಈ ದೇಶ ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬರ ಆಸ್ತಿ. ಕೇವಲ ಅದಾನಿಗೆ ದೇಶ ಸೀಮಿತ ಎಂಬ ಭ್ರಮೆಯಿಂದ ಬಿಜೆಪಿ ಹೊರಬರಬೇಕು. ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರತಿಯೊಂದು ಗುತ್ತಿಗೆಯೂ ಅದಾನಿ ಒಬ್ಬರಿಗೇ ಏಕೆ ಹೋಗುತ್ತಿವೆ? ಎಂಬುದನ್ನು ಯುವಜನರ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಈಡೇರದ ಭರವಸೆಗಳಿವು: ಮುಖ್ಯಮಂತ್ರಿ

ಹುಬ್ಬಳ್ಳಿ: ‘ಕಾಂಗ್ರೆಸ್‌ನಿಂದ ಬೋಗಸ್ ಕಾರ್ಡ್ ಸರಣಿ ಮುಂದು ವರಿದಿದೆ. ಹಿಂದೆ ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿ ತಿಂಗಳು ₹3,500 ಭತ್ಯೆ ಕೊಡುತ್ತೇವೆ ಎಂದಿದ್ದರು, ಕೊಡಲಿಲ್ಲ. ಛತ್ತೀಸಗಡ, ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಹೀಗೆಯೇ ಬೋಗಸ್ ಭರವಸೆ ಗಳನ್ನು ನೀಡಿದ್ದರು. ಎಲ್ಲವೂ ಬೋಗಸ್’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ವ್ಯಂಗ್ಯವಾಡಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಗೆಲ್ಲಲು ಅಸಾಧ್ಯ ಎಂದು ಖಚಿತವಾಗಿರುವುದರಿಂದ ಕಾಂಗ್ರೆಸ್ ನಾಯಕರು ಹತಾಶ ಸ್ಥಿತಿಗೆ ತಲುಪಿದ್ದಾರೆ’ ಎಂದರು.

‘ಈಡೇರಿಸಲಾಗದ ಭರವಸೆ ನೀಡಿ, ಜನರನ್ನು ಮರುಳು ಮಾಡಲು ಮುಂದಾಗಿದ್ದಾರೆ. ಆದರೆ, ಜನ ನಂಬಲು ಸಿದ್ಧರಿಲ್ಲ’ ಎಂದರು.

ಛತ್ತೀಸಗಡದಲ್ಲಿ ಮಾಸಿಕ ₹2,500 ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಲಕ್ಷ ಮಂದಿಗೆ ವಾರ್ಷಿಕ ₹3 ಸಾವಿರ ಕೋಟಿ ಬೇಕಾಗುತ್ತದೆ. ಅಲ್ಲಿನ ಸರ್ಕಾರ ಇದುವರೆಗೆ ₹250 ಕೋಟಿ ಮಾತ್ರ ಮೀಸಲಿಟ್ಟಿದೆ. ಇನ್ನೂ ₹2,750 ಕೋಟಿ ಕೊರತೆ ಎದುರಾಗಿದೆ. ಇದು ಕಾಂಗ್ರೆಸ್ ಭರವಸೆಯ ವಾಸ್ತವ ಎಂದು ವ್ಯಂಗ್ಯವಾಡಿದರು.

ರಾಜಸ್ಥಾನದ ಚುನಾವಣೆಯಲ್ಲೂ ವಾರ್ಷಿಕ ₹3 ಲಕ್ಷ ಆದಾಯವಿರುವ ಕುಟುಂಬದ ನಿರುದ್ಯೋಗಿಗಳಿಗೆ ಮಾಸಿಕ ₹3,500 ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿತ್ತು. ರಾಜ್ಯದ 18.4 ಲಕ್ಷ ನಿರುದ್ಯೋಗಿಗಳ ಪೈಕಿ ಭತ್ಯೆಗೆ ಅರ್ಹವಾಗಿದ್ದು ಕೇವಲ 1.9 ಲಕ್ಷ ಮಂದಿ ಮಾತ್ರ. ಹೀಗೆ, ರಾಜಸ್ತಾನದ ನಿರುದ್ಯೋಗಿ ಯುವಜನರಿಗೆ ಕಾಂಗ್ರೆಸ್ ವಂಚಿಸಿತು ಎಂದು ವಿವರಿಸಿದರು.

ಹಿಮಾಚಲ ಪ್ರದೇಶದಲ್ಲಿ ಯುವಜನರನ್ನು ಸೆಳೆಯುವುದಕ್ಕಾಗಿ, ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಒಂದು ಲಕ್ಷ ಉದ್ಯೋಗ ನೇಮಕಾತಿಯ ಘೋಷಣೆಯನ್ನು ಕಾಂಗ್ರೆಸ್ ಮಾಡಿತ್ತು. ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ, ಭರವಸೆ ಮಾತ್ರ ಈಡೇರಿಲ್ಲ ಎಂದು ಉದಾಹರಣೆಗಳನ್ನು ನೀಡಿದರು.

‘ಹಿಂದೆ 10 ಕೆ.ಜಿ ಅಕ್ಕಿ ಕೊಡಲಾಗುತ್ತಿತ್ತು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ 5 ಕೆ.ಜಿಗೆ ಇಳಿಸಿ, ಚುನಾವಣೆ ಬಂದಾಗ 7 ಕೆ.ಜಿ.ಗೆ ಏರಿಸಿದರು. ಚುನಾವಣೆಗೆ ಬೋಗಸ್ ನೀತಿ ಮಾಡುವುದು, ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಗುಣಧರ್ಮ’ ಎಂದರು.

‘ರಾಹುಲ್ ಗಾಂಧಿ ಮಹಾನ್ ನಾಯಕರು. ದೇಶದ ಬಗ್ಗೆ ಬಹಳ ಅಭಿಮಾನ ಹೊಂದಿರುವವರು. ಆದರೆ, ಹೊರದೇಶದಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡುವ ಅವರಿಗೆ, ಕರ್ನಾಟಕದ ಬಗ್ಗೆ ಎಲ್ಲಿಂದ ಪ್ರೀತಿ–ವಿಶ್ವಾಸ ಬರಬೇಕು’ ಎಂದು ಕುಟುಕಿದರು.

***

ನಫರತ್‌ ಕಿ ಮಾರ್ಕೆಟ್‌ ಮೇ ಮೊಹಬ್ಬತ್‌ ಕಿ ದುಕಾನ್‌ (ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ) ಇಡುವುದಾಗಿ ಯುವಜನರು ಹೇಳಿದ್ದಾರೆ. ದೇಶದ ಜನ ಒಂದಾಗಿ ಬಾಳಲು ಇಚ್ಛಿಸಿದ್ದಾರೆ

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT