37.20 ಕೋಟಿ ಯುನಿಟ್ ಸೌರ ವಿದ್ಯುತ್ ಉತ್ಪಾದನೆ ಗುರಿ: ಸಚಿವ ವಿ. ಸುನಿಲ್ ಕುಮಾರ

ಬೆಂಗಳೂರು: ‘ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ (2021–22) ಸೌರ ಚಾವಣಿ (ಸೋಲಾರ್ ರೂಪ್ ಟಾಪ್) ಮೂಲಕ 37.20 ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ’ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಎಂ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಮನೆಗಳ ಚಾವಣಿಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ’ ಎಂದರು.
‘ಪ್ರಸಕ್ತ ಸಾಲಿನಲ್ಲಿ ಬೆಸ್ಕಾಂ, ಮೆಸ್ಕಾಂ, ಸೆಸ್ಕ್, ಹೆಸ್ಕಾಂ, ಜೆಸ್ಕಾಂ ಈ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಜುಲೈವರೆಗೆ ಸೌರ ಚಾವಣಿಗಳಿಂದ ಉತ್ಪಾದನೆಯಾದ ವಿದ್ಯುತ್ ಕೇವಲ 4.88 ಕೋಟಿ ಯುನಿಟ್. ಇನ್ನಿರುವ ದಿನಗಳಲ್ಲಿ ಗುರಿ ಸಾಧನೆ ಸಾಧ್ಯವೇ’ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
‘ಸೌರ ಚಾವಣಿಯಿಂದ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಯೂ ಸೇರಿ ಸರ್ಕಾರಿ ಕಚೇರಿ ಕಟ್ಟಡಗಳ ಚಾವಣಿ ಯಲ್ಲಿ ಸೌರ ಶಕ್ತಿ ವಿದ್ಯುತ್ ಉತ್ಪಾದನೆಗೆ ಕ್ರಮಕೈಗೊಳ್ಳಲಾಗುವುದು. ಗುರಿ ತಲುಪಲು ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಸಚಿವರು ಹೇಳಿದರು.
‘ಸರ್ಕಾರಿ ಕಟ್ಟಡಗಳ ಚಾವಣಿಯಲ್ಲಿ ಸೌರಶಕ್ತಿ ವಿದ್ಯುತ್ ಘಟಕಗಳನ್ನು ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ವಿಕಾಸಸೌಧದ ಚಾವಣಿಯ ಮೇಲೆ ಈಗಾಗಲೇ 100 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಲಾಗಿದೆ. 13ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ವಿಧಾನಸೌಧ ಮತ್ತು ಎಂ.ಎಸ್ ಬಿಲ್ಡಿಂಗ್ ಚಾವಣಿಯ ಮೇಲೆ ಸೌರ ಶಕ್ತಿ ಘಟಕ ಅಳವಡಿಸಲು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ’ ಎಂದೂ ಸಚಿವರು ಮಾಹಿತಿ ನೀಡಿದರು.
‘ಪುರಾತತ್ವ ಇಲಾಖೆ: ಸಿಎಂ ಜೊತೆ ಚರ್ಚೆ’
ಬೆಂಗಳೂರು: ‘ಪ‍್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಪುರಾತತ್ವ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ತರುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಿಂದೆಯೂ ಈ ಬಗ್ಗೆ ಚರ್ಚೆ ನಡೆದಿದೆ. ಜೊತೆಗೆ, ಅಳಿವಿನಂಚಿನಲ್ಲಿರುವ ಹೊಯ್ಸಳ, ರಾಣಿ ಅಬ್ಬಕ್ಕ, ಕೆಳದಿ ಅರಸರ ಅರಮನೆಯೂ ಸೇರಿದಂತೆ ಕೋಟೆ, ಕೊತ್ತಳಗಳ ರಕ್ಷಣೆಗೂ ಸರ್ಕಾರ ಬದ್ಧ’ ಎಂದರು.
‘ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಅನುದಾನಕ್ಕೆ ಅನುಸಾರವಾಗಿ ಕ್ರಿಯಾಯೋಜನೆ ರೂಪಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ನಡುವೆಯೂ ಆನ್‌ಲೈನ್ ಮೂಲಕ 188 ಕಾರ್ಯಕ್ರಮಗಳನ್ನು ಪ್ರಾಧಿಕಾರ ಆಯೋಜಿಸಿದೆ’ ಎಂದು ಮಾಹಿತಿ ನೀಡಿದರು.
‘ರಾಜ್ಯದ 22 ವಿಶ್ವವಿದ್ಯಾಲಯಗಳಲ್ಲಿ 6,279 ವಿದ್ಯಾರ್ಥಿಗಳು ಕನ್ನಡವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡುತ್ತಿದ್ದಾರೆ’ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.