ಸೋಮವಾರ, ಅಕ್ಟೋಬರ್ 18, 2021
22 °C
ವಿಧಾನಸಭೆಯಲ್ಲಿ ಕಾಂಗ್ರೆಸ್ ಆರೋಪ l ತಲಾ ₹5 ಲಕ್ಷ ಪರಿಹಾರ ನೀಡಲು ಒತ್ತಾಯ

ಕೋವಿಡ್‌ನಿಂದ 4 ಲಕ್ಷ ಸಾವು; ಸತ್ಯ ಮುಚ್ಚಿಟ್ಟ ಸರ್ಕಾರ: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿಗೆ ಒಳಗಾದವರು ಹಾಸಿಗೆ, ವೆಂಟಿಲೇಟರ್, ಆಮ್ಲಜನಕ, ಔಷಧ ಇಲ್ಲದೇ ಆಸ್ಪತ್ರೆಗಳು, ಬೀದಿ– ಬೀದಿಗಳಲ್ಲಿ ಬಿದ್ದು ದಾರುಣವಾಗಿ ಸತ್ತರು. ಈ ರೀತಿ ಸುಮಾರು 3 ರಿಂದ 4 ಲಕ್ಷ ಮಂದಿ ಮೃತಪಟ್ಟಿದ್ದು, ಸರ್ಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ನಿಯಮ 69 ರಡಿ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯರು ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ತಲಾ ₹5 ಲಕ್ಷ ದಂತೆ ಪರಿಹಾರವನ್ನು ನೀಡಬೇಕು. ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೇ 36 ಮಂದಿ ಮೃತಪಟ್ಟ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಕೋವಿಡ್‌ನ ಎರಡು ಅಲೆಗಳಿಂದ ಒಟ್ಟು 37,603 ಮಂದಿ ಸತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅರವಿಂದ್‌ ಸುಬ್ರಹ್ಮಣ್ಯ ಅವರ ವರದಿ ಪ್ರಕಾರ ಕರ್ನಾಟಕದಲ್ಲಿ 3 ರಿಂದ 4 ಲಕ್ಷ ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನೀವು ಸತ್ಯ ಏಕೆ ಮುಚ್ಚಿಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ಸುವರ್ಣ ಆರೋಗ್ಯ ಟ್ರಸ್ಟ್‌ ಮಾಹಿತಿಯ ಪ್ರಕಾರ, ಮೊದಲ ಅಲೆಯ ಸಂದರ್ಭದಲ್ಲಿ 1.32 ಲಕ್ಷ ಮತ್ತು 2 ನೇ ಅಲೆಯ ಸಂದರ್ಭ ಈವರೆಗೆ 1.19 ಲಕ್ಷ ಕ್ಲೈಮ್‌ಗಳು ಬಂದಿವೆ. ಆದ್ದರಿಂದ ಸಾವುಗಳ ಪರಿಶೋಧನೆ (ಡೆಟ್‌ ಆಡಿಟ್‌) ಮಾಡಿಸಬೇಕು’ ಎಂದು ಆಗ್ರಹಿಸಿದರು.

‘ಕರ್ನಾಟಕದಲ್ಲಿ ಆಮ್ಲಜನಕ ಇಲ್ಲದೇ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದೆ. ಆದರೆ, ಚಾಮರಾಜನಗರದಲ್ಲಿ ನಡೆದ ದುರಂತವೇನು? ಅಲ್ಲಿ ಆಮ್ಲಜನಕ ಸಿಗದೇ 36 ಜನ ಮೃತಪಟ್ಟಿಲ್ಲವೇ? ನನಗೆ, ನನ್ನ ಪತ್ನಿ ಮತ್ತು ಮಗನಿಗೂ ಕೋವಿಡ್‌ ಆಗಿತ್ತು. ಅಂತಹ ಕಾಯಿಲೆ ಯಾರಿಗೂ ಬರಬಾರದು, ಆದಷ್ಟು ಬೇಗ ಕಾಯಿಲೆ ತೊಲಗಲಿ’ ಎಂದರು.

‘ಕೋವಿಡ್‌ನಿಂದ ಸಾಕಷ್ಟು ಬಡವರು ಸತ್ತಿದ್ದಾರೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು ಅನಾಥರಾಗಿದ್ದು, ಅವರ ಭವಿಷ್ಯವೇನು? ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದೆ’ ಎಂದು ಪ್ರಶ್ನಿಸಿದ ಅವರು, ‘ಮೊದಲ ಅಲೆ ಮುಗಿಯುತ್ತಿದ್ದಂತೆ ಆರಾಮವಾಗಿಬಿಟ್ಟಿರಿ. ಅದರ ಪರಿಣಾಮ ಎರಡನೇ ಅಲೆಯಲ್ಲಿ ದುರಂತ ಕಾಣಬೇಕಾಯಿತು. ಆಸ್ಪತ್ರೆಗಳಿಂದ ಹಾಸಿಗೆ, ಐಸಿಯು ಹಾಸಿಗೆ, ವೆಂಟಿಲೇಟರ್‌ ತೆರವುಗೊಳಿಸಿದಿರಿ. ಚುನಾವಣೆ ನಡೆಸಿದಿರಿ, ಕುಂಭಮೇಳ ನಡೆಸಿದಿರಿ. ಇದರಿಂದಾಗಿಯೇ ಕೋವಿಡ್‌ ಎರಡನೇ ಅಲೆ ಬಂತು’ ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.

ಡಿ.ಕೆ.ಶಿವಕುಮಾರ್‌, ‘ಚಾಮರಾಜನಗರದ ದುರಂತಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಅಧಿಕಾರಿಯ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. ಈಗಲಾದರೂ ಮೃತಪಟ್ಟ 36 ಜನರ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಬಳಿಕ ನೇಮಕಾತಿ ನಿಯಮಾವಳಿ ಪ್ರಕಾರ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಕೆಪಿಸಿಸಿ ವತಿಯಿಂದ ನಡೆಸಿರುವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕೋವಿಡ್‌ನಿಂದ 3.27 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ನಮ್ಮ ಸಮೀಕ್ಷೆ ತಂಡ ಮನೆ ಮನೆಗೆ ಹೋಗಿ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬಂದಿದೆ. ಸರ್ಕಾರ ಮಾತ್ರ ಕೋವಿಡ್‌ನಿಂದ ಮೃತಪಟ್ಟವರಿಗೆ ಕೋವಿಡ್‌ನಿಂದ ಸಾವು ಎಂಬ ಪ್ರಮಾಣಪತ್ರವನ್ನು ನೀಡಿಲ್ಲ’ ಎಂದು ಟೀಕಿಸಿದರು.

ಎಚ್‌.ಕೆ.ಪಾಟೀಲ, ‘ಮೃತ ವ್ಯಕ್ತಿಗಳ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ನೀಡಬೇಕು. ಔಷಧ ಮತ್ತು ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಆಗಿರುವ ಹಗರಣದ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನೀಡಿರುವ ವರದಿಯನ್ನು ಸದನದಲ್ಲಿ ಮಂಡಿಸಬೇಕು’ ಎಂದು ಒತ್ತಾಯಿಸಿದರು.

ರಾಮಲಿಂಗಾರೆಡ್ಡಿ, ‘ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಅಲೆ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಯಿತು. ಎರಡನೇ ಅಲೆ ಎದುರಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಿಲ್ಲ’ ಎಂದು ಅವರು ದೂರಿದರು.

ಇಕ್ಕಟ್ಟಿಗೆ ಸಿಲುಕಿದ ಸಚಿವ ಶ್ರೀರಾಮುಲು
‘ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಒಂದು ಪೈಸೆ ಪರಿಹಾರವನ್ನು ಕೊಟ್ಟಿಲ್ಲ’ ಎಂಬ ಡಿ.ಕೆ.ಶಿವಕುಮಾರ್ ಅವರ ಟೀಕಾ ಪ್ರಹಾರಕ್ಕೆ ಉತ್ತರ ನೀಡಲು ಹೋಗಿ ಸಚಿವ ಬಿ.ಶ್ರೀರಾಮುಲು ಇಕ್ಕಟ್ಟಿಗೆ ಸಿಲುಕಿದರು.

‘ಮೃತ ಪಟ್ಟ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಲಾಗುತ್ತಿದೆ. ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ’ ಎಂದು ರಾಮುಲು ಆವೇಶ ಭರಿತರಾಗಿ ತಿರುಗೇಟು ನೀಡಲು ಹೋಗಿ ಪೇಚಿಗೆ ಸಿಲುಕಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿಯವರಿಗಾಗಿ ಉದ್ಯಮ ಚಟುವಟಿಕೆ ನಡೆಸಲು ತಲಾ ₹ 4 ಲಕ್ಷ ನೀಡುವುದಾಗಿ ಹೇಳಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಯಾರಿಗೂ ಆ ನೆರವು ಸಿಕ್ಕಿಲ್ಲ ಎಂದು ಶಿವಕುಮಾರ್‌ ಹೇಳಿದಾಗ, ‘ಇಲ್ಲ ಸರ್ಕಾರ ₹ 1 ಲಕ್ಷ ನೀಡಿದೆ’ ಎಂದು ಸಚಿವರು ಪುನಃ ಸಮರ್ಥಿಸಿಕೊಂಡರು. ಇದು ಮತ್ತೆ ಗದ್ದಲಕ್ಕೆ ಕಾರಣವಾಯಿತು.

ಆಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು, ‘ಯಡಿಯೂರಪ್ಪ ಸರ್ಕಾರ ತಲಾ ₹1 ಲಕ್ಷ ನೀಡುವುದಾಗಿ ಪ್ರಕಟಿಸಿ, ಆದೇಶ ಮಾಡಿದೆ. ಅದು ಕಾರ್ಯಗತ ಆಗಬೇಕಾಗಿದೆ’ ಎಂದು ಹೇಳಿದರೂ ಶ್ರೀರಾಮುಲು ಅವರಿಗೆ ಮನವರಿಕೆ ಆಗಲಿಲ್ಲ.

ಬಳಿಕ ಸಮಜಾಯಿಷಿ ನೀಡಿದ ಯಡಿಯೂರಪ್ಪ, ‘ರಾಮುಲು ಹೇಳಿದ್ದು ತಪ್ಪಾಗಿದೆ. ನನ್ನ ಅವಧಿಯಲ್ಲಿ ಹಣ ಘೋಷಿಸಿ, ₹300 ಕೋಟಿ ತೆಗೆದಿರಿಸಲಾಗಿದೆ ಪ್ರತಿ ಮನೆಗೆ ಹೋಗಿ ಪರಿಹಾರ ವಿತರಿಸಲಾಗುವುದು’ ಎಂದು ಗದ್ದಲಕ್ಕೆ ತೆರೆ ಎಳೆದರು.

ಕಳಪೆ ಸ್ಯಾನಿಟೈಸ್‌ ಪ್ರದರ್ಶನ
‘ಸುಮಾರು ₹ 9ಕೋಟಿ ಮೌಲ್ಯದಷ್ಟು ಕ್ಯಾನ್‌ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ ಖರೀದಿಸಿದ್ದು, ಕಳಪೆ ಗುಣಮಟ್ಟದ್ದು ಎಂದು ಔಷಧ ನಿಯಂತ್ರಕರು ಅದನ್ನು ತಿರಸ್ಕರಿಸಿದ್ದಾರೆ. ಈ ಸ್ಯಾನಿಟೈಸರ್‌ನ ಬಣ್ಣ ಬದಲಾಗುತ್ತದೆ’ ಎಂದು ಸಿದ್ದರಾಮಯ್ಯ ಸ್ಯಾನಿಟೈಸರ್‌ ಬಾಟಲಿಗಳನ್ನು ಪ್ರದರ್ಶಿಸಿದರು. ‘ಇದೊಂದು ಹಗರಣ, ಇದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

 **

ಪ್ರಧಾನಿಯನ್ನು ಟೀಕಿಸುವುದರಿಂದ ಕೋವಿಡ್‌ ವಾಸಿ ಆಗುವುದಾದರೆ, ಟೀಕೆ ಮಾಡೋಣ, ಪ್ರಧಾನಿ ಇಲ್ಲಿಗೆ ಬಂದು ಉತ್ತರ ಕೊಡಲು ಆಗಲ್ಲ, ವೃಥಾ ಕೆಸರೆರಚಾಟ ಬೇಡ.
-ಎಚ್‌.ಡಿ.ರೇವಣ್ಣ, ಜೆಡಿಎಸ್‌ ಶಾಸಕ

**

ಕೊರೊನಾ ಅವಧಿಯಲ್ಲಿ ಚಿಕಿತ್ಸೆಗೆ ಹಣವಿಲ್ಲದೆ ನಾಲ್ಕು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ₹ 4.17 ಲಕ್ಷ ಕೋಟಿ ಮೌಲ್ಯದ 1,500 ಮೆಟ್ರಿಕ್ ಟನ್ ಚಿನ್ನದ ಒಡವೆ ಗಿರವಿಯಿಟ್ಟಿದ್ದಾರೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು