ಶನಿವಾರ, ಜನವರಿ 28, 2023
15 °C

ಎಸಿಬಿಯ ಅರ್ಧದಷ್ಟು ಹುದ್ದೆಗಳು ಲೋಕಾಯುಕ್ತಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸ್‌ ಮತ್ತು ಆಡಳಿತ ವಿಭಾಗದಲ್ಲಿನ ಒಟ್ಟು ಮಂಜೂರಾದ ಹುದ್ದೆಗಳ ಪೈಕಿ ಅರ್ಧದಷ್ಟನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನವೆಂಬರ್‌ 19ರಂದು ಆದೇಶ ಹೊರಡಿಸಿದೆ.

ಎಸಿಬಿಯಲ್ಲಿ 121 ಪೊಲೀಸ್‌ ಅಧಿಕಾರಿಗಳು, 324 ಕಾನ್‌ಸ್ಟೆಬಲ್‌ಗಳು ಮತ್ತು ಆಡಳಿತ ವಿಭಾಗದಲ್ಲಿನ ವಿವಿಧ ವೃಂದದ 79 ಹುದ್ದೆಗಳ ಮಂಜೂರಾತಿ ಇತ್ತು. ಈ ಎಲ್ಲ ಹುದ್ದೆಗಳನ್ನೂ ಲೋಕಾಯುಕ್ತದಲ್ಲಿ ವಿಲೀನಗೊಳಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಬೇಡಿಕೆ ಇಟ್ಟಿದ್ದರು. ಈ ಕುರಿತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಅಭಿಪ್ರಾಯ ಪಡೆದ ಬಳಿಕ ಹುದ್ದೆಗಳ ಮರುಹಂಚಿಕೆ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತೀರ್ಮಾನ ಕೈಗೊಂಡಿದೆ.

ಐದು ಎಸ್‌ಪಿ, 18 ಡಿವೈಎಸ್‌ಪಿ, 38 ಪೊಲೀಸ್‌ ಇನ್‌ಸ್ಪೆಕ್ಟರ್‌ ಹುದ್ದೆಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಎಲ್ಲ ವೃಂದಗಳಲ್ಲಿ ಬಹುತೇಕ ಅರ್ಧದಷ್ಟು ಹುದ್ದೆಗಳನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ಒಟ್ಟು 524 ಹುದ್ದೆಗಳಲ್ಲಿ 266 ಹುದ್ದೆಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಉಳಿದ 258 ಹುದ್ದೆಗಳನ್ನು ಪೊಲೀಸ್‌ ಇಲಾಖೆಯ ವಶಕ್ಕೆ ನೀಡಿದ್ದು, ಮರು ಸ್ಥಳ ನಿಯುಕ್ತಿ ನೀಡುವಂತೆ ಸೂಚಿಸಲಾಗಿದೆ.

‘ಎಸಿಬಿಯಿಂದ ಕಡತಗಳನ್ನು ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಲೋಕಾಯುಕ್ತಕ್ಕೆ ಇನ್ನೂ ಹೆಚ್ಚಿನ ಅಧಿಕಾರಿಗಳು, ಸಿಬ್ಬಂದಿ ಬೇಕಿದೆ. ಸಿಬ್ಬಂದಿ ಬಲ ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸಿ, ಪ್ರಸ್ತಾವ ಸಿದ್ಧಪಡಿಸಲು ಸಮಿತಿಯೊಂದನ್ನು ನೇಮಿಸಿದ್ದೇವೆ. ಸಮಿತಿಯ ವರದಿ ಆಧರಿಸಿ ಸಿಬ್ಬಂದಿ ಬಲ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಲೋಕಾಯುಕ್ತರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.