ಶುಕ್ರವಾರ, ಮಾರ್ಚ್ 31, 2023
32 °C

ರೈತರಿಗೆ ₹721 ಕೋಟಿ ಬೆಂಬಲ ಬೆಲೆ ಬಿಡುಗಡೆ: ಎಸ್.ಟಿ. ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 4-5 ತಿಂಗಳ ಹಿಂದೆ ಖರೀದಿ ಮಾಡಲಾಗಿದ್ದ ರಾಗಿ, ಭತ್ತ ಹಾಗೂ ಗೋಧಿಗೆ ಬಾಕಿ ಹಣವು ಸುಮಾರು ₹721 ಕೋಟಿಯಷ್ಟಿದ್ದು, ಇದನ್ನು ಇನ್ನು 2-3 ದಿನಗಳಲ್ಲಿ ಪಾವತಿಸುವುದಾಗಿ ಎಂದು ಸಹಕಾರ ಸಚಿವರು ಹಾಗೂ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ನಾಲ್ಕೈದು ತಿಂಗಳ ಹಿಂದೆಯೇ ರಾಗಿ, ಭತ್ತ ಹಾಗೂ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲಾಗಿತ್ತು. ಆದರೆ, ಬೆಂಬಲ ಬೆಲೆ ಹಣ ಬಿಡುಗಡೆಯಾಗದೆ ಸಮಸ್ಯೆಯಾಗುತ್ತಿದೆ. ಕೂಡಲೇ ಬಾಕಿ ಹಣವನ್ನು ಪಾವತಿಸುವಂತೆ ಒತ್ತಡಗಳು ಬರುತ್ತಿದ್ದವು. ಇದೀಗ ಬಾಕಿ ₹721 ಕೋಟಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲು ಆದೇಶ ನೀಡಿದ್ದು, ಇನ್ನು 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಪ್ರಕ್ರಿಯೆ ಮತ್ತು ರೈತರಿಗೆ ಹಣ ಪಾವತಿಸುವ ಸಂಬಂಧ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳು ಸಾಕಷ್ಟಿದ್ದು, ಅವುಗಳ ಸಂಬಂಧ ಚರ್ಚೆ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಂದಿನ ಸಾಲಿನಲ್ಲಿ ಅಂದರೆ 2021-22ರ ಸಾಲಿನಲ್ಲಿ ಇಂತಹ ಸಮಸ್ಯೆಗಳು ತಲೆದೋರದಿರುವಂತೆ ಮಾಡಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಏನು ಮಾಡಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಇದೇ 29 ರಂದು ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ಕರೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಯಾವ ರೀತಿಯಾಗಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

'ಬೆಂಬಲ ಬೆಲೆ' ಪ್ರಥಮ ಸಭೆ:
ರೈತರಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಇಂದು ಪ್ರಥಮ ಸಭೆಯನ್ನು ನಡೆಸಲಾಯಿತು. ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಉಮೇಶ್ ಕತ್ತಿ ಅವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರು, ಪೌರಾಡಳಿತ ಮತ್ತು ಸಕ್ಕರೆ ಸಚಿವರಾದ ಶಂಕರ್ ಅವರು, ಪಶುಸಂಗೋಪನೆ ಸಚಿವರಾದ ಪ್ರಭು ಚೌವ್ಹಾಣ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ರೈತರಿಗಾಗುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಬೇಕಿರುವ ಪರಿಹಾರಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು