ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವಿವಿಧ ಕಾಮಗಾರಿಗಳ ₹75 ಸಾವಿರ ಕೋಟಿ ಬಿಲ್‌ ಬಾಕಿ- ಎಚ್‌.ಕೆ. ಪಾಟೀಲ

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆ: ಎಚ್‌.ಕೆ. ಪಾಟೀಲ ದೂರು
Last Updated 11 ಮಾರ್ಚ್ 2022, 20:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಇಲಾಖೆಗಳು ನಡೆಸಿದ ಕಾಮಗಾರಿಗಳಸುಮಾರು ₹75 ಸಾವಿರ ಕೋಟಿಯಷ್ಟು ಮೊತ್ತದ ಬಿಲ್‌ ಪಾವತಿ ಬಾಕಿ ಇದೆ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ದೂರಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ಈ ರೀತಿ ಬಿಲ್‌ ಬಾಕಿ ಉಳಿಸಿರುವುದರಿಂದ ಸರ್ಕಾರಕ್ಕೆ ಹೊರೆ ಹೆಚ್ಚಾಗಿದೆ ಎಂದು ಹೇಳಿದರು.

ವಿವಿಧ ನೀರಾವರಿ ನಿಗಮಗಳ ಬಿಲ್‌ ₹10 ಸಾವಿರ ಕೋಟಿ, ಲೋಕೋಪಯೋಗಿ ₹18 ಸಾವಿರ ಕೋಟಿ, ನಗರಾಭಿವೃದ್ಧಿ ₹18 ಸಾವಿರ ಕೋಟಿ, ಬಿಡಿಎ ಮತ್ತು ಬಿಬಿಎಂಪಿ ₹10 ಸಾವಿರ ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ₹12 ಸಾವಿರ ಕೋಟಿಯಷ್ಟು ಬಿಲ್‌ ಪಾವತಿಯಾಗಿಲ್ಲ ಎಂದರು.

ಅಷ್ಟೇ ಅಲ್ಲದೆ, ಬಜೆಟ್‌ನಿಂದ ಹೊರತಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು ₹ 2 ಲಕ್ಷ ಕೋಟಿ ಮೊತ್ತದಷ್ಟು ಕಾಮಗಾರಿಗಳು ನಡೆಯುತ್ತಿವೆ. ಉಳಿದ ಇಲಾಖೆಗಳದ್ದು ಸೇರಿದರೆ ಸುಮಾರು ₹5 ಲಕ್ಷ ಕೋಟಿಯಷ್ಟು ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳಿಗೆ ಎಲ್ಲೂ ಒಪ್ಪಿಗೆ ಪಡೆದಿಲ್ಲ. ಕೆಲವು ಕಡೆ ಕಾಮಗಾರಿಗಳಿಗೆ ಸಾವಿರಾರು ಕೋಟಿ ಮುಂಗಡವನ್ನೂ ನೀಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಪಾಟೀಲ ಹೇಳಿದರು.

ಸಚಿವಾಲಯ ಮಟ್ಟದಲ್ಲಿ ವಿವಿಧ ಇಲಾಖೆಗಳಿಗೆ ಸೇರಿದ ಸುಮಾರು 51 ಸಾವಿರ ಕಡತಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ. ಇ– ಆಡಳಿತ ಇದೆ, ಪಾರದರ್ಶಕ ಆಡಳಿತ ನಡೆಸುತ್ತೇವೆ ಎನ್ನುತ್ತೀರಿ. ಆದರೆ ಕಡತ ಪರಿಶೀಲನೆಗೆ ಸಮಯವೇ ಇಲ್ಲವಾಗಿದೆ. ಸುಮಾರು ಒಂದು ವರ್ಷದಿಂದ ಕಡತ ಬಾಕಿ ಉಳಿಸಿಕೊಳ್ಳಲು ಕಾರಣವೇನು ಎಂದೂ ಪಾಟೀಲಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಸುಮಾರು 3.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ, ಸರ್ಕಾರ ಅದನ್ನು ಭರ್ತಿ ಮಾಡದೇ ಹೊರಗುತ್ತಿಗೆ ನೀಡಿದೆ. ಹೊರಗುತ್ತಿಗೆ ಪಡೆದವರು ಮೀಸಲಾತಿ ನೀತಿಯನ್ನು ಪಾಲಿಸುತ್ತಿಲ್ಲ. 2020 ರಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದು, ನೇಮಕಾತಿ ಸಂಬಂಧಿಸಿದಂತೆ ಸಂವಿಧಾನದ ಉಲ್ಲಂಘನೆ ಆಗಬಾರದು ಎಂದು ತಿಳಿಸಿದೆ. ಅದನ್ನು ಸರ್ಕಾರ ಪಾಲಿಸಿದೆಯೇ ಎಂದು ಪಾಟೀಲ ಪ್ರಶ್ನಿಸಿದರು.

ಆನೆ ಹಾವಳಿ: ಜೆಡಿಎಸ್ ಶಾಸಕರ ಧರಣಿ

ಬೆಂಗಳೂರು: ಬೇಲೂರು ತಾಲ್ಲೂಕು ಅರೆಹಳ್ಳಿ ಹೋಬಳಿಯಲ್ಲಿ ಆನೆ ತುಳಿತಕ್ಕೆ ಒಳಗಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದನ್ನು ಜೆಡಿಎಸ್‌ ಶಾಸಕ ಕೆ.ಎಸ್‌. ಲಿಂಗೇಶ್‌ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಗಮನಸೆಳೆದರು.

ಸರ್ಕಾರ ಮೃತ ವ್ಯಕ್ತಿಗಳಿಗೆ ಪರಿಹಾರ ನೀಡುವುದರ ಜತೆಗೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಎಚ್‌.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ ಅವರು ವಿಷಯ ಪ್ರಸ್ತಾಪಿಸಲು ಎದ್ದು ನಿಂತಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಲಿಲ್ಲ. ಇದನ್ನು ಪ್ರತಿಭಟಿಸಿ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ ಧರಣಿ ನಡೆಸಿದರು. ಈ ವಿಷಯದ ಬಗ್ಗೆ ಬೇರೊಂದು ರೂಪದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ಕಾಗೇರಿ ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT