ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ನೇ ವೇತನ ಆಯೋಗಕ್ಕೆ ಸದಸ್ಯರ ನೇಮಕ; ಆರು ತಿಂಗಳೊಳಗೆ ಶಿಫಾರಸು ಮಾಡಲು ಸೂಚನೆ

Last Updated 18 ನವೆಂಬರ್ 2022, 18:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿರುವ ಏಳನೆ ವೇತನ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ಹಾಗೂ ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.

ಸುಧಾಕರರಾವ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಆಯೋಗದ ರಚನೆಗೆ ಶುಕ್ರವಾರ ಅನುಮೋದನೆ ನೀಡಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ ಬಿ. ವನಹಳ್ಳಿ ಸದಸ್ಯರಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸರ್ಕಾರದ ಸಂಪನ್ಮೂಲಗಳು, ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ–2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಆರು ತಿಂಗಳ ಒಳಗಾಗಿ ತನ್ನ ಶಿಫಾರಸು ಮಾಡುವಂತೆ ಆಯೋಗಕ್ಕೆ ಸೂಚಿಸಲಾಗಿದೆ.

ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತು ಪಡಿಸಿ) ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ, ಕಾರ್ಯಸಾಧುವಾದ ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡುವುದು, ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುವುದು, ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲಿಸಿ ಶಿಫಾರಸು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT