ಭಾನುವಾರ, ಮೇ 22, 2022
28 °C

ಚಿಕ್ಕಎಮ್ಮಿಗನೂರು| 88 ವರ್ಷದ ವೃದ್ಧೆ ಗ್ರಾ.ಪಂ ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಸಮೀಪದ ಚಿಕ್ಕಎಮ್ಮಿಗನೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 88 ವರ್ಷದ ವೃದ್ಧೆ ದ್ರಾಕ್ಷಾಯಣಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ದ್ರಾಕ್ಷಾಯಣಮ್ಮ ಅವರು ಜಿಲ್ಲೆಯಲ್ಲೇ ಹಿರಿಯ ವಯಸ್ಸಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಇದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ ಸದಸ್ಯೆಯಾಗಿದ್ದ ಅವರಿಗೀಗ ಅಧ್ಯಕ್ಷೆ ಪಟ್ಟ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ನಟರಾಜ್‌ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ 17 ಸದಸ್ಯರು ಮತದಾನ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದ್ರಾಕ್ಷಾಯಣಮ್ಮ 11 ಮತ, ಪ್ರತಿಸ್ಪರ್ಧಿ ಪದ್ಮಾವತಿ ಐದು ಮತಗಳನ್ನು ಪಡೆದರು.

‘ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಲು ಮಕ್ಕಳು ಹಾಗೂ ನೆರೆಹೊರೆಯವರ ಪ್ರೇರಣೆಯೇ ಕಾರಣ. ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಜನಸೇವೆ ಮಾಡಿದ್ದಾರೆ. ನಾನೂ ಜನಸೇವೆ ಮಾಡುವೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಸ್ಥಳೀಯ ಶಾಖೆಯ ಅಧಿಕಾರಿ ಬಿ.ನಾಗರಾಜ್‌ ಅವರ ಪ್ರೋತ್ಸಾಹ ಮರೆಯುವಂತಿಲ್ಲ’ ಎನ್ನುತ್ತಾರೆ ದ್ರಾಕ್ಷಾಯಣಮ್ಮ.

ಆಗಿನ ಕಾಲದಲ್ಲಿಯೇ ಲೋಯರ್‌ ಸೆಕಂಡರಿ (7ನೇ ತರಗತಿ) ಉತ್ತೀರ್ಣರಾಗಿರುವ ದ್ರಾಕ್ಷಾಯಣಮ್ಮ ಅವರು ಇಂಗ್ಲಿಷ್‌ನಲ್ಲೂ ಮಾತನಾಡುತ್ತಾರೆ. ಈ ಇಳಿವಯಸ್ಸಿನಲ್ಲೂ ಸಹಿ ಮಾಡುವಾಗ ಅವರ ಕೈ ನಡುಗುವುದಿಲ್ಲ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಅವರಿಗೆ ಮೂವರು ಗಂಡು, ಮೂವರು ಹೆಣ್ಣುಮಕ್ಕಳಿದ್ದಾರೆ. ಒಬ್ಬ ಮಗ ಬಿ.ಎಸ್‌. ಶಿವಕುಮಾರಸ್ವಾಮಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ. ಮತ್ತೊಬ್ಬ ಮಗ ಬಿ.ಎಸ್‌. ಶಿವಮೂರ್ತಿ ವಕೀಲ. ಇನ್ನೊಬ್ಬ ಮಗ ಬಿ.ಎಸ್‌. ವೀರಭದ್ರಪ್ಪ ಬೆಂಗಳೂರಿನ ಬಿಇಎಂಎಲ್‌ನಲ್ಲಿ ಉದ್ಯೋಗಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು