ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವರ್ಷಗಳಲ್ಲಿ ಖಾಸಗಿ ಪ್ರೌಢಶಾಲೆಗಳ ಪ್ರವೇಶಾತಿ ಶೇ 335 ಏರಿಕೆ!

13 ವರ್ಷಗಳಲ್ಲಿ ಸರ್ಕಾರಿ ಶಾಲೆ ಪ್ರವೇಶಾತಿ ಹೆಚ್ಚಿದ್ದು ಶೇ 30 ಮಾತ್ರ
Last Updated 27 ಡಿಸೆಂಬರ್ 2022, 15:56 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆ ಜಾರಿಯಾದ ನಂತರದ 13 ವರ್ಷಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಪ್ರವೇಶಾತಿ ಪ್ರಮಾಣದಲ್ಲಿ ಶೇಕಡ 30ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಖಾಸಗಿ ಪ್ರೌಢ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ 335ರಷ್ಟು ಹೆಚ್ಚಳವಾಗಿದೆ!

ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು(ಪಿಎಸಿ) ಆರ್‌ಎಂಎಸ್‌ಎ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ವರದಿಯನ್ನು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮಂಡಿಸಲಾಯಿತು. ಈ ವರದಿಯು ಸರ್ಕಾರಿ ಮತ್ತು ಖಾಸಗಿ ಪ್ರೌಢ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಹನ್ನೊಂದು ಪಟ್ಟು ವ್ಯತ್ಯಾಸ ಇರುವುದನ್ನು ಗುರುತಿಸಿದೆ.

2008–09ರಲ್ಲಿ ಆರ್‌ಎಂಎಸ್‌ಎ ಅನುಷ್ಠಾನ ಆರಂಭವಾದ ಬಳಿಕ 1.60 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಪ್ರೌಢ ಶಾಲೆಗಳಿಗೆ ದಾಖಲಾಗಿದ್ದಾರೆ. ಇದೇ ಅವಧಿಯಲ್ಲಿ 5.74 ಲಕ್ಷ ವಿದ್ಯಾರ್ಥಿಗಳು ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪ್ರೌಢ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯದ ಕೊರತೆ ಹಾಗೂ ಶಿಕ್ಷಣದ ಗುಣಮಟ್ಟದ ಕೊರತೆಯೇ ಇದಕ್ಕೆ ಕಾರಣ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಭಿಪ್ರಾಯಪಟ್ಟಿದೆ.

ಆರ್‌ಎಂಎಸ್‌ಎ ಅಡಿಯಲ್ಲಿ ಹೊಸ ಪ್ರೌಢ ಶಾಲೆಗಳನ್ನು ಆರಂಭಿಸಿದ ಬಳಿಕವೂ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯ ಹೆಚ್ಚಳ ಆಗಿರಲಿಲ್ಲ. ಆದರೆ, ಈ ಬಗ್ಗೆ ಶಿಕ್ಷಣ ಇಲಾಖೆಯು ಹೆಚ್ಚಿನ ಗಮನ ನೀಡಿರಲಿಲ್ಲ.

ಆರ್‌ಎಂಎಸ್‌ಎ ಅಡಿಯಲ್ಲಿ ಕೇಂದ್ರ ಸರ್ಕಾರವು ಹಿಂದಿನ ವರ್ಷಗಳಲ್ಲಿ ನೀಡಿದ್ದ ಅನುದಾನವನ್ನು ರಾಜ್ಯ ಸರ್ಕಾರವು ಬಳಕೆ ಮಾಡದೇ ಬಾಕಿ ಉಳಿಸಿಕೊಂಡಿತ್ತು. ಪರಿಣಾಮವಾಗಿ 2016–17ರಿಂದ 2018–19ರವರೆಗೆ ಈ ಯೋಜನೆಯಡಿ ಯಾವುದೇ ಅನುದಾನ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಪಿಎಸಿ ಹೇಳಿದೆ.

2008–09ರಲ್ಲಿ ರಾಜ್ಯದಲ್ಲಿ 4,010 ಸರ್ಕಾರಿ ಪ್ರೌಢ ಶಾಲೆಗಳಿದ್ದು, 5,19,470 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2,869 ಅನುದಾನಿತ ಪ್ರೌಢ ಶಾಲೆಗಳಲ್ಲಿ 4,46,790 ಹಾಗೂ 1,957 ಅನುದಾನರಹಿತ ಪ್ರೌಢ ಶಾಲೆಗಳಲ್ಲಿ 2,43,304 ವಿದ್ಯಾರ್ಥಿಗಳಿದ್ದರು.

2021–22ರ ಅವಧಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಸಂಖ್ಯೆ 4,738ಕ್ಕೆ ಏರಿಕೆಯಾಗಿದೆ. ಈ ಶಾಲೆಗಳಲ್ಲಿ 6,80,258 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದೇ ಅವಧಿಯಲ್ಲಿ 3,750 ಅನುದಾನಿತ ಪ್ರೌಢ ಶಾಲೆಗಳಲ್ಲಿ 5,01,635 ಹಾಗೂ 8,938 ಅನುದಾನರಹಿತ ಪ್ರೌಢ ಶಾಲೆಗಳಲ್ಲಿ 8,17,415 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ.

ಅನುಷ್ಠಾನದಲ್ಲಿ ಲೋಪ: ಸಾರ್ವಜನಿಕ ಶಿಕ್ಷಣ ಇಲಾಖೆಯು ಆರ್‌ಎಂಎಸ್‌ಎ ಅನುಷ್ಠಾನದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಈ ಯೋಜನೆಯಡಿ 448 ಶಾಲೆಗಳನ್ನು ಉನ್ನತೀಕರಣವನ್ನು ಸಕಾಲದಲ್ಲಿ ಪೂರ್ಣಗೊಳಿಸಿರಿಲಿಲ್ಲ. ಈ ಕಾರಣದಿಂದಾಗಿಯೇ ಕೇಂದ್ರ ಸರ್ಕಾರವು ರಾಜ್ಯದ ಹಲವು ಶಾಲೆಗಳ ಉನ್ನತೀಕರಣ ಪ್ರಸ್ತಾವವನ್ನು ತಿರಸ್ಕರಿಸಿತ್ತು ಎಂದು ಪಿಎಸಿ ಆಕ್ಷೇಪಿಸಿದೆ.

2,336 ಕಾಮಗಾರಿಗಳು ವಿಳಂಬ

ಆರ್‌ಎಂಎಸ್‌ಎ ಅಡಿಯಲ್ಲಿ 2009–10 ಮತ್ತು 2010–11ನೇ ಸಾಲಿನಲ್ಲಿ ಆರಂಭಿಸಿದ್ದ 2,336 ಕಾಮಗಾರಿಗಳನ್ನು ಈವರೆಗೂ ಪೂರ್ಣಗೊಳಿಸದೇ ಇರುವುದಕ್ಕೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ನಾಲ್ಕು ವರ್ಷಗಳವರೆಗೂ ನಿವೇಶನ ಹಸ್ತಾಂತರಿಸದೇ ಬಾಕಿ ಇರಿಸಿಕೊಂಡಿದ್ದ ಪ್ರಕರಣಗಳನ್ನೂ ಪಿಎಸಿ ಗುರುತಿಸಿದೆ. ಲೋಕೋಪಯೋಗಿ ಇಲಾಖೆಯ ಕೋಡ್‌ಗೆ ವಿರುದ್ಧವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT