ಶನಿವಾರ, ಸೆಪ್ಟೆಂಬರ್ 25, 2021
30 °C
ಸಚಿವ ಸಂಪುಟ ವಿಸರ್ಜಿಸಿದ ರಾಜ್ಯಪಾಲ * ಜೋಶಿ, ಸಂತೋಷ್, ನಿರಾಣಿ, ರವಿ ಹೆಸರು ಮುಂಚೂಣಿಗೆ

ಬಿಎಸ್‌ವೈ ‘ಶಿಕಾರಿ’: ಯಾರಿಗೆ ಗರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ಯೊಂದಿಗೆ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯ ಕಸರತ್ತಿನ ಮೊದಲ ಅಂಕಕ್ಕೆ ತೆರೆಬಿದ್ದಿದೆ. ಆದರೆ, ನೂತನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಈಗ ಎದ್ದು ನಿಂತಿದೆ. ಗಾದಿ ಏರಲು ಹಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಬಿಜೆಪಿ ವರಿಷ್ಠರು ಎಲ್ಲರ ಲೆಕ್ಕಾಚಾರವನ್ನೂ ಬದಿಗೆ ಸರಿಸಿ ಅಚ್ಚರಿಯ ಹೆಸರು ಪ್ರಕಟಿಸುವ ಸಾಧ್ಯತೆಯೂ ಇದೆ.

ರಾಜೀನಾಮೆ ನೀಡದಂತೆ ವರಿಷ್ಠರಿಂದ ಸಂದೇಶ ಬರಬಹುದು ಎಂಬ ಕುತೂಹಲ ಉಳಿಸಿದ್ದ ಯಡಿಯೂರಪ್ಪ, ತಮ್ಮ ಸರ್ಕಾರದ ಎರಡನೇ ವರ್ಷದ ಸಂಭ್ರಮಾಚರಣೆಯಲ್ಲೇ ಪದತ್ಯಾಗದ ನಿರ್ಧಾರ ಪ್ರಕಟಿಸಿದರು. ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು. ಅದನ್ನು ಅಂಗೀಕರಿಸಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಇಡೀ ಸಂಪುಟವನ್ನೂ ವಿಸರ್ಜಿಸಿದ್ದಾರೆ.

ಈ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ಸರ್ಕಾರದ ಹೊಸ ನಾಯಕನ ಆಯ್ಕೆಗೆ ಬಿಜೆಪಿ ವರಿಷ್ಠರು ಪ್ರಕ್ರಿಯೆ ಆರಂಭಿಸಿದ್ದಾರೆ. ಜಾತಿ, ಪ್ರಾದೇಶಿಕತೆ, ಪ್ರಭಾವ, ಹೈಕಮಾಂಡ್‌ ಜತೆಗಿರುವ ನಂಟು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜತೆಗಿನ ಒಡನಾಟ ಸೇರಿದಂತೆ ಹಲವು ವಿಷಯಗಳು ಹೊಸ ಮುಖ್ಯಮಂತ್ರಿಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇವುಗಳ ಆಧಾರದಲ್ಲೇ ಹಲವರ ಹೆಸರುಗಳನ್ನು ಪರಿಶೀಲನೆಗೆ ಎತ್ತಿಕೊಂಡು, ಅಳೆದು, ತೂಗುವ ಕೆಲಸ ಮಾಡುತ್ತಿರುವ ಬಿಜೆಪಿ ವರಿಷ್ಠರು ಸದ್ಯವೇ ತಮ್ಮ ಆಯ್ಕೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ಸಂಘ ಪರಿವಾರದ ಮೂಲ ದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ವಾದ ಒಂದು ವಲಯದಲ್ಲಿದೆ.

ಇನ್ನೊಂದೆಡೆ ವೀರಶೈವ– ಲಿಂಗಾಯತ ಸಮುದಾಯದವರನ್ನೇ ಪರಿಗಣಿಸುವ ಮೂಲಕ ತಮ್ಮ ಮತ ಬ್ಯಾಂಕ್‌ ಅನ್ನು ಭದ್ರವಾಗಿ ಕಾಪಿಟ್ಟುಕೊಳ್ಳಬೇಕೆಂಬ ಚರ್ಚೆಯೂ ನಡೆದಿದೆ. ವ್ಯಕ್ತಿತ್ವದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಹೊಸ ಮುಖಕ್ಕೆ ಮನ್ನಣೆ ನೀಡಬೇಕೆಂಬ ಬೇಡಿಕೆಯೂ ಈಗ ಬಿಜೆಪಿಯಲ್ಲಿ ಮುನ್ನೆಲೆಗೆ ಬಂದಿದೆ.

ಜಾತಿ ಮತ್ತು ಕುಟುಂಬ ಆಧಾರಿತ ಕರ್ನಾಟಕದ ರಾಜಕಾರಣದ ಥೈಲಿಯನ್ನೇ ಬದಲಿಸಬೇಕು ಎಂಬ ಆಶಯ ಬಿಜೆಪಿಯ ವರಿಷ್ಠರದ್ದಾಗಿದೆ. ಅದೇ ದೃಢಪಟ್ಟರೆ, ಜಾತಿ–ಕುಟುಂಬ ಆಧಾರಿತ ರಾಜಕಾರಣ ಮಾಡದವರಿಗೆ ಆದ್ಯತೆ ಸಿಗುವ ಸಾಧ್ಯತೆಯೇ ಹೆಚ್ಚು ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.

ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಸದ್ಯದಲ್ಲೇ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಪನ್ಮೂಲ ಕ್ರೋಡೀಕರಣದ ಚರ್ಚೆಯೂ ನಡೆದಿದೆ. ಅದೇ, ಪ್ರಮುಖವಾದಲ್ಲಿ ಕಾರ್ಪೊರೇಟ್ ಶೈಲಿಯ ರಾಜಕಾರಣ ಗೊತ್ತಿರುವವರಿಗೆ ಆದ್ಯತೆ ಸಿಕ್ಕರೂ ಆಶ್ಚರ್ಯಯೇನಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಐವರು ಡಿಸಿಎಂ?

ಯಡಿಯೂರಪ್ಪ ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದರು. ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೂವರ ಬದಲಿಗೆ ಐವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ಬಿಜೆಪಿ ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

ಒಕ್ಕಲಿಗ ಅಥವಾ ಲಿಂಗಾಯತರು ಮುಖ್ಯಮಂತ್ರಿಯಾದರೆ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ಕೈತಪ್ಪಬಹುದು. ಗೋವಿಂದ ಕಾರಜೋಳ ಮುಂದುವರಿಯಬಹುದು.

ವೀರಶೈವ– ಲಿಂಗಾಯತ ಸಮುದಾಯಕ್ಕೆ ಸೇರಿಲ್ಲದವರು ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಅವರ ಹಿರಿಯ ಮಗ ಬಿ.ವೈ. ರಾಘವೇಂದ್ರ ಹಾಗೂ ಬಿ. ಶ್ರೀರಾಮುಲು ಅವರಿಗೂ ಉಪ ಮುಖ್ಯಮಂತ್ರಿ ಹುದ್ದೆ ದೊರೆಯಬಹುದು ಎಂದು ಗೊತ್ತಾಗಿದೆ.

ವಲಸಿಗರಲ್ಲಿ ಅರ್ಧದಷ್ಟು ಮಂದಿ ಹೊರಕ್ಕೆ?

2019ರಲ್ಲಿ ಯಡಿಯೂರಪ್ಪ ಅವರು ಸರ್ಕಾರ ರಚಿಸುವ ಮುನ್ನ ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ 17 ಮಂದಿಯಲ್ಲಿ 11 ಜನರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೊಸ ಸಂಪುಟದಲ್ಲಿ ವಲಸಿಗ ಶಾಸಕರ ಪೈಕಿ ಐದರಿಂದ ಆರು ಜನರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಯಾರಿಗೆ ಒಲಿಯಲಿದೆ ಪಟ್ಟ

ನಾಯಕತ್ವ ಬದಲಾವಣೆಯ ಕೂಗು ಎದ್ದ ದಿನಗಳಿಂದಲೂ ಸಂಭವನೀಯ ಮುಖ್ಯಮಂತ್ರಿ ಎಂದು ಹಲವರ ಹೆಸರುಗಳು ಚಾಲ್ತಿಯಲ್ಲಿವೆ. ವರಿಷ್ಠರ ಕೃಪಾಕಟಾಕ್ಷ ಯಾರಿಗೆ ಒಲಿಯಬಹುದು ಎಂಬ ಕುತೂಹಲ ಇದೆ.

ವೀರಶೈವ–ಲಿಂಗಾಯತ: ಮುರುಗೇಶ ನಿರಾಣಿ, ಜಗದೀಶ ಶೆಟ್ಟರ್, ಶಿವಕುಮಾರ್‌ ಉದಾಸಿ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ.

ಬ್ರಾಹ್ಮಣ: ಪ್ರಲ್ಹಾದ ಜೋಶಿ, ಬಿ.ಎಲ್‌. ಸಂತೋಷ್‌, ವಿಶ್ವೇಶ್ವರ ಹೆಗಡೆ ಕಾಗೇರಿ.

ಒಕ್ಕಲಿಗ: ಸಿ.ಟಿ. ರವಿ, ಡಾ.ಸಿ.ಎನ್‌. ಅಶ್ವತ್ಥನಾರಾಯಣ,ಆರ್‌. ಅಶೋಕ.

ಅಚ್ಚರಿ: ಶಾಸಕರ ಬಲಕ್ಕಿಂತಲೂ ಹೆಚ್ಚಾಗಿ ಪಕ್ಷದ ವರಿಷ್ಠರ ವಿಶ್ವಾಸಕ್ಕೆ ಪಾತ್ರರಾಗುವವರೇ ಆಯ್ಕೆಯಾಗಬಹುದು. ಭವಿಷ್ಯದ ಚುನಾವಣೆ ಸೇರಿದಂತೆ ಹಲವು ವಿಷಯ ಮುಂದಿಟ್ಟುಕೊಂಡಿರುವ ಬಿಜೆಪಿ ವರಿಷ್ಠರು, ಈಗ ಚರ್ಚೆಯಲ್ಲಿ ಇರದ ಹೆಸರೊಂದನ್ನು ಆಯ್ಕೆಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು