ಶನಿವಾರ, ಸೆಪ್ಟೆಂಬರ್ 18, 2021
30 °C

ವರಿಷ್ಠರಿಂದ ಮುಖ್ಯಮಂತ್ರಿಯೊಂದಿಗೆ ಇನ್ನೊಮ್ಮೆ ಸಮಾಲೋಚನೆ ಬಳಿಕ ಸಂಪುಟ ವಿಸ್ತರಣೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳದ ಬಿಜೆಪಿ ವರಿಷ್ಠರು, ಮುಖ್ಯಮಂತ್ರಿಯೊಂದಿಗೆ ಇನ್ನೊಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಸಂಪುಟ ಸೇರುವವರ ಪಟ್ಟಿಯನ್ನು ಅಂತಿಮಗೊಳಿಸಲು ನಿರ್ಧರಿಸಿದ್ದಾರೆ.

ಶುಕ್ರವಾರ ಪ್ರಮುಖರೊಂದಿಗಿನ ಭೇಟಿಯ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 21 ಜನ ಪ್ರಮುಖರ ಪಟ್ಟಿಯೊಂದನ್ನು ನೀಡಿ ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಕೋರಿದರು ಎನ್ನಲಾಗಿದೆ. ಆದರೆ, ಆ ಪಟ್ಟಿಗೆ ಒಪ್ಪಿಗೆ ದೊರೆತಿಲ್ಲ.

ಕೆಲವು ಮುಖಂಡರು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಕಾರಣ, ಯಡಿಯೂರಪ್ಪ ಸಂಪುಟದಲ್ಲಿದ್ದ ಯಾರನ್ನೆಲ್ಲ ಕೈಬಿಡಬೇಕು, ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು’ ಎಂಬ ನಿರ್ಧಾರ ಕೈಗೊಳ್ಳಲಾಗಲಿಲ್ಲ.

ಈ ಸಂಬಂಧ ಗೊಂದಲಗಳಿಗೆ ಆಸ್ಪದ ನೀಡದಂತೆ ಸೂಕ್ಷ್ಮವಾಗಿ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಎರಡೆರಡು ಬಾರಿ ಭೇಟಿ ಮಾಡಿ ಚರ್ಚೆ ನಡೆಸಿದ ಬೊಮ್ಮಾಯಿ, ಶನಿವಾರವೂ ಈ ಸಂಬಂಧ ಮತ್ತೆ ಚರ್ಚೆ ನಡೆಸಿದರಾದರೂ, ಮಧ್ಯಾಹ್ನದೊಳಗೆ ಪಟ್ಟಿ ದೊರೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದರಿಂದ ಬೆಂಗಳೂರಿಗೆ ಖಾಲಿ ಕೈಯಿಂದ ಮರಳಿದರು.

ಸಂಪುಟದಲ್ಲಿ ಅನುಭವ, ಜಾತಿ ಮತ್ತು ಪ್ರಾದೇಶಿಕತೆಗೆ ಪ್ರಾಶಸ್ತ್ಯ ದೊರೆಯಲಿದೆ. ಮಹಿಳೆಯರಿಗೆ, ಯುವಕರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಮತ್ತೊಂದು ಸಂಭವನೀಯ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಅವರು ಸೂಚಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಮಂತ್ರಿಯವರು ಮತ್ತೆ ದೆಹಲಿಗೆ ಬಂದು ಈ ಸಂಬಂಧ ಚರ್ಚಿಸುವ ಸಾಧ್ಯೆತಗಳೂ ಇವೆ. ಅಥವಾ, ಮಂಗಳವಾರ ಸಂಜೆಯ ವೇಳೆಗೆ ವರಿಷ್ಠರೇ ಸಂಪುಟಕ್ಕೆ ಸೇರಿಕೊಳ್ಳಲಿರುವವರ ಪಟ್ಟಿ ಸಿದ್ಧಪಡಿಸಿ ಕಳುಹಿಸಿದರೂ ಆಶ್ಚರ್ಯವಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌– ಜೆಡಿಎಸ್‌ ತೊರೆದು ಬಂದು ಸರ್ಕಾರ ರಚನೆಗೆ ಕಾರಣ ಆದವರಿಗೆ, ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವವರಿಗೆ ಹಾಗೂ ಅನಗತ್ಯ ವಿವಾದಗಳಿಗೆ ಆಸ್ಪದವಾಗುವ ಹೇಳಿಕೆ ನೀಡುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತೂ ಇನ್ನಷ್ಟೇ ಪರಾಮರ್ಶೆ ನಡೆಯಬೇಕಿದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ, ವಿಧಾನಸಭೆ ಚುನಾವಣೆಯ ಲೆಕ್ಕಾಚಾರದೊಂದಿಗೆ, ಮುಖ್ಯಮಂತ್ರಿ ಅಭಿಪ್ರಾಯವನ್ನೂ ಪರಿಗಣಿಸಿಯೇ ಸಂಪುಟ ರಚನೆ ಅಂತಿಮಗೊಳಿಸಲಾಗುತ್ತದೆ ಎಂದು ಅವರು ಒತ್ತಿಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು