ಸೋಮವಾರ, ಮೇ 17, 2021
21 °C

ಅಕ್ರಮ ಡಿ–ನೋಟಿಫೈ ಆರೋಪ: ಬಿಎಸ್‌ವೈಗೆ ಮತ್ತೆ ಭೂಕಂಟಕ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐ.ಟಿ ಕಾರಿಡಾರ್‌ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ–ನೋಟಿಫೈ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

2008–2011ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಇಂತಹದೇ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸಿ ಅಧಿಕಾರಕಳೆದುಕೊಂಡಿದ್ದರು. ಈಗ ಮತ್ತೆ ಅದೇ ಮಾದರಿಯ ತನಿಖೆಗೆ ಗುರಿಯಾಗುವ ಸನ್ನಿವೇಶ ಯಡಿಯೂರಪ್ಪ ಎದುರಿಗೆ ಬಂದು ನಿಂತಿದೆ.

ಡಿ–ನೋಟಿಫೈಗೆ ಸಂಬಂಧಿಸಿದಂತೆ, ವಾಸುದೇವ ರೆಡ್ಡಿ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇವೆರಡನ್ನೂ ರದ್ದುಪಡಿಸುವಂತೆ 2019ರಲ್ಲಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು, ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಏಕ ಸದಸ್ಯ ಪೀಠ ತಿರಸ್ಕರಿಸಿ ಮಂಗಳವಾರ ಆದೇಶ ಹೊರಡಿಸಿದೆ.

‘ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿದ ಬಳಿಕ ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪ ಅರ್ಜಿದಾರರ (ಯಡಿಯೂರಪ್ಪ) ವಿರುದ್ಧ ಇದೆ. ಖಾಸಗಿ ದೂರು ಪರಿಶೀಲಿಸಿದಾಗ ಸಂಜ್ಞೇಯ ಅಪರಾಧ ಕೃತ್ಯಗಳು ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈ ಕುರಿತು ತನಿಖೆಯ ಅಗತ್ಯವಿದೆ’ ಎಂದು ಹೇಳಿದೆ.

ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಆರ್‌.ವಿ. ದೇಶಪಾಂಡೆ ವಿರುದ್ಧದ ವಿಚಾರಣೆ ಮತ್ತು ಎಫ್‌ಐಆರ್‌ ರದ್ದು ಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಅದೇ ಆದೇಶದ ಆಧಾರದಲ್ಲಿ ತಮ್ಮ ವಿರುದ್ಧದ ವಿಚಾರಣೆ ಮತ್ತು ತನಿಖೆಯನ್ನೂ ರದ್ದು ಮಾಡುವಂತೆ ಯಡಿಯೂರಪ್ಪ ಕೋರಿದ್ದರು. ಆದರೆ, ಇಬ್ಬರ ವಿರುದ್ಧದ ಆರೋಪಗಳು ವಿಭಿನ್ನವಾದುವು. ದೇಶಪಾಂಡೆ ಪ್ರಕರಣದ ಆದೇಶದ ಆಧಾರದಲ್ಲಿ ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನೂ ರದ್ದು ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

‘ಎಫ್‌ಐಆರ್ ಸಂಬಂಧ ಸಮರ್ಪಕ ತನಿಖೆ ನಡೆಸುವಂತೆ 2015ರ ಫೆಬ್ರುವರಿ 18ರಂದು ಲೋಕಾಯುಕ್ತ ನ್ಯಾಯಾಲಯ ಆದೇಶಿಸಿತ್ತು. 2019ರ ಜ.25ಕ್ಕೆ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಏ.2ರಂದು ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರ ನಡುವಿನ 4 ವರ್ಷ ತನಿಖೆ ನಡೆಸಲು ಯಾವುದೇ ಅಡ್ಡಿ ಇರಲಿಲ್ಲ. ಆದರೂ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿಲ್ಲ’ ಎಂದು ಪೀಠ ತರಾಟೆಗೆ ತೆಗೆದುಕೊಂಡಿದೆ.

ತನಿಖೆ ನಡೆಸದಿರುವುದಕ್ಕೆ ಮತ್ತು ಯಡಿಯೂರಪ್ಪ ಅರ್ಜಿ ಕುರಿತು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಆಕ್ಷೇಪಣೆ ಒಪ್ಪುವಂಥದ್ದಲ್ಲ. ಉನ್ನತ ಹುದ್ದೆಯಲ್ಲಿ ಇರುವವರ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ಪ್ರಗತಿ ಕಾಣದಿದ್ದರೆ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ– ವಿಶ್ವಾಸವನ್ನು ಸಾರ್ವಜನಿಕರು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ದೂರುದಾರರ ಪರ ವಕೀಲ ಕೆ.ವಿ.ಧನಂಜಯ ವಾದ ಮಂಡಿಸಿ, ‘ಐ.ಟಿ ಕಾರಿಡಾರ್ ಡಿನೋಟಿಫಿಕೇಷನ್ ಕುರಿತ ಆರ್‌.ವಿ. ದೇಶಪಾಂಡೆ ವಿರುದ್ಧದ ಪ್ರಕರಣವನ್ನು ಹಕೋರ್ಟ್ ರದ್ದುಪಡಿಸಿದೆ. ಅದನ್ನು ಪರಿಗಣಿಸಿ ಯಡಿಯೂರಪ್ಪ ವಿರುದ್ಧ ಎಫ್ಐಆರ್‌ಗೆ 2019ರ ಏ.9ರಂದು ತಡೆಯಾಜ್ಞೆ ನೀಡಿದೆ. ವಾಸ್ತವವಾಗಿ ಯಡಿಯೂರಪ್ಪ ಪ್ರಕರಣಕ್ಕೂ ದೇಶಪಾಂಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಬೇಕಿಲ್ಲ. ಹೀಗಾಗಿ, ಯಡಿಯೂರಪ್ಪ ಅರ್ಜಿ ವಜಾಗೊಳಿಸಬೇಕು’ ಎಂದು ಕೋರಿದ್ದರು.

ರಾಜೀನಾಮೆಗೆ ಆಗ್ರಹ
ಅಕ್ರಮ ಡಿ– ನೋಟಿಫೈ ಪ್ರಕರಣದಲ್ಲಿ ತನಿಖೆ ಮುಂದುವರಿಸುವಂತೆ ಹೈಕೋರ್ಟ್‌ ಆದೇಶ ಹೊರಡಿಸಿರುವುದರಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ.

‘ತನಿಖೆಯ ವೇಳೆ ಯಡಿಯೂರಪ್ಪ ಅವರನ್ನು ಬಂಧಿಸುವ ಅವಶ್ಯವೂ ಎದುರಾಗಬಹುದು. ನಿಷ್ಪಕ್ಷಪಾತ ತನಿಖೆ ನಡೆಸುವ ಮತ್ತು ಮುಖ್ಯಮಂತ್ರಿ ಹುದ್ದೆಯ ಘನತೆ ಉಳಿಸುವ ದೃಷ್ಟಿಯಿಂದ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಕರಣ ಏನು?
2000–2001ನೇ ಸಾಲಿನಲ್ಲಿ ನಗರದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುಮಾರು 500 ಎಕರೆಯನ್ನು ಐಟಿ ಕಾರಿಡಾರ್‌ ಆಗಿ ಸರ್ಕಾರ ಘೋಷಣೆ ಮಾಡಿತ್ತು. ಮಾರತ್‌ ಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ 434 ಎಕರೆ ಸ್ವಾಧೀನಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು.

‘ದೇವರಬೀಸನಹಳ್ಳಿ ಸರ್ವೆ ನಂಬರ್‌ 49ರಲ್ಲಿ 4 ಎಕರೆ 30 ಗುಂಟೆ, ಬೆಳ್ಳಂದೂರು ಗ್ರಾಮದ ಸರ್ವೆ ನಂಬರ್‌ 46/1ರಲ್ಲಿ 1 ಎಕರೆ 17 ಗುಂಟೆ, ಸರ್ವೆ ನಂಬರ್‌ 18ರಲ್ಲಿ 1 ಎಕರೆ 10 ಗುಂಟೆ, ಸರ್ವೆ ನಂಬರ್‌ 10ರಲ್ಲಿ 33 ಗುಂಟೆ ಜಾಗವನ್ನು ಅಕ್ರಮವಾಗಿ ಡಿ–ನೋಟಿಫೈ ಮಾಡಲು 2006ರ ಜೂನ್‌ನಲ್ಲಿ (ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದ ವೇಳೆ)  ಆದೇಶಿಸಲಾಗಿದೆ’ ಎಂದು ಆರೋಪಿಸಿ ವಾಸುದೇವರೆಡ್ಡಿ, 2013ರ ಜುಲೈ 10ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯ, ತನಿಖೆ ನಡೆಸುವಂತೆ ಆದೇಶಿಸಿತ್ತು. 2015ರ ಫೆ.21ರಂದು ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ದೇಶಪಾಂಡೆ ಅವರನ್ನು ಮೊದಲ ಆರೋಪಿಯನ್ನಾಗಿ, ಯಡಿಯೂರಪ್ಪ ಅವರನ್ನು 2ನೇ ಆರೋಪಿಯನ್ನಾಗಿಸಿದ್ದರು. 2019ರ ಜ.25ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಯಡಿಯೂರಪ್ಪ, ‘ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ದೂರಿದ್ದರು.

ನ್ಯಾಯಾಲಯದ ನಿಗಾದಲ್ಲಿ ತನಿಖೆ
ಈ ಪ್ರಕರಣವೂ ಸೇರಿದಂತೆ ಶಾಸಕರು, ಸಂಸದರು ಮತ್ತು ಇತರ ಚುನಾಯಿತ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳ ನ್ಯಾಯಾಲಯಗಳು ಹೊರಡಿಸುವ ಆದೇಶಗಳ ಅನುಸಾರ ನಡೆಯುವ ತನಿಖೆಗಳ ಮೇಲೆ ಲೋಕಾಯುಕ್ತ ನ್ಯಾಯಾಲಯ ನಿಗಾ ಇಡಬೇಕು ಎಂದು ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ನೇತೃತ್ವದ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು