ಬುಧವಾರ, ಆಗಸ್ಟ್ 17, 2022
30 °C

‘ಐಕ್ಯ ಹೋರಾಟ ವೇದಿಕೆ’ ಕಾರ್ಯಕರ್ತರಿಂದ ರಾಜಭವನಕ್ಕೆ ಮುತ್ತಿಗೆ ಯತ್ನ: ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈತ ವಿರೋಧಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ‘ಐಕ್ಯ ಹೋರಾಟ ವೇದಿಕೆ’ ಕಾರ್ಯಕರ್ತರು ರಾಜಭವನಕ್ಕೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲೇ ಪ್ರತಿಭಟನಕಾರರನ್ನು ತಡೆದ ಪೊಲೀಸರು, ಮುತ್ತಿಗೆ ಯತ್ನಕ್ಕೆ ತಡೆಯೊಡ್ಡಿದರು.

ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೂಲಕ ಬಂದ ಮೆರವಣಿಗೆ, ಸ್ವಾತಂತ್ರ್ಯ ಉದ್ಯಾನ ಮಾರ್ಗವಾಗಿ ರಾಜಭವನದತ್ತ ಹೊರಟಿತ್ತು. ಸ್ಥಳದಲ್ಲಿದ್ದ ಪೊಲೀಸರು ಉದ್ಯಾನ ಎದುರೇ ಬ್ಯಾರಿಕೇಡ್‌ ಹಾಕಿ ನಿರ್ಬಂಧಿಸಿದರು. ಪರಸ್ಪರ ತಳ್ಳಾಟ ಹಾಗೂ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಬಂದು ರೈತರಿಗೆ ಬೆಂಬಲ ಸೂಚಿಸಿದರು. ರಸ್ತೆಯಲ್ಲೇ ಕುಳಿತ ಸಿದ್ದರಾಮಯ್ಯ, ರೈತ ಮುಖಂಡರ ಭಾಷಣಗಳನ್ನು ಆಲಿಸಿದರು. ಶಾಸಕರಾದ ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಜಮೀರ್ ಅಹಮ್ಮದ್, ಯು.ಟಿ.ಖಾದರ್ ಹಾಗೂ ಹಲವರು ಜತೆಗಿದ್ದರು.

‘ಹೋರಾಟ ಮಾಡುತ್ತಿರುವವರು ಡೋಂಗಿಗಳು’ ಎಂದ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ, ರೈತ ಮುಖಂಡರಾದ ಕುರಬೂರು ಶಾಂತಕುಮಾರ್ ಹಾಗೂ ಬಡಗಲಪುರ ನಾಗೇಂದ್ರ ಕಿಡಿಕಾರಿದರು. ‘ಜೆಡಿಎಸ್ ಪಕ್ಷದ ತೆನೆ ಹೊತ್ತ ರೈತ ಮಹಿಳೆ ಚಿಹ್ಹೆ ಬದಲಾಯಿಸಿ’ ಎಂದು ಒತ್ತಾಯಿಸಿದರು.

ಬಳಿಕ, ರಾಜಭವನಕ್ಕೆ ತೆರಳಿದ್ದ ಮುಖಂಡರ ನಿಯೋಗ, ‘ರೈತ ವಿರೋಧಿ ಕಾಯ್ದೆ ತಿದ್ದುಪಡಿಗೆ ಅಂಕಿತ ಹಾಕಬಾರದು’ ಎಂದು ಮನವಿ ಪತ್ರ ಸಲ್ಲಿಸಿತು.

ಸಾರಿಗೆ ನೌಕರರ ಬೃಹತ್ ಪ್ರತಿಭಟನೆ

‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿ ಸಾರಿಗೆ ನೌಕರರು, ತಮ್ಮ ಕುಟುಂಬದ ಸದಸ್ಯರ ಜೊತೆಯಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

ನಗರ ರೈಲು ನಿಲ್ದಾಣದಿಂದ ಮೆರವಣಿಗೆ ಆರಂಭಿಸಿದ್ದ ನೌಕರರು, ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು. ಸ್ವಾತಂತ್ರ್ಯ ಉದ್ಯಾನ ಬಳಿಯೇ ಅವರನ್ನು ಪೊಲೀಸರು ತಡೆದರು. ಸ್ಥಳದಲ್ಲಿ ರೈತರು ಸಹ ಪ್ರತಿಭಟನೆ ನಡೆಸುತ್ತಿದ್ದರು. ಅದರ ಪಕ್ಕದ ರಸ್ತೆಯಲ್ಲೇ ಕುಳಿತು ನೌಕರರು ಸಹ ಪ್ರತಿಭಟನೆ ಮುಂದುವರಿಸಿದರು. ‘ಸರ್ಕಾರದ ಆದಾಯ ವೃದ್ಧಿಸುವಲ್ಲಿ ಸಾರಿಗೆ ನೌಕರರ ಪಾತ್ರ ಮಹತ್ವದ್ದು. ಹೀಗಾಗಿ, ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು’ ಎಂದು ನೌಕರರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು