ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ 9ರ ವರೆಗೆ ಎಲ್ಲರೂ ಪಾಸ್: ರಾಜ್ಯ ಸರ್ಕಾರ

ಬಡ್ತಿ ಪ್ರಕ್ರಿಯೆ 30ರೊಳಗೆ ಮುಗಿಸಲು ನಿರ್ದೇಶನ
Last Updated 20 ಏಪ್ರಿಲ್ 2021, 18:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರಗೊಂಡಿರುವುದರಿಂದ ಒಂದರಿಂದ ಒಂಬತ್ತನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ (ಮಾಲ್ಯಾಂಕನ) ನಡೆಸದೆ ಮುಂದಿನ ತರಗತಿಗೆ ಬಡ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ನಿಗದಿಪಡಿಸಿರುವಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್‌ 21ರಿಂದ ಜುಲೈ 5ರವರೆಗೆ ನಡೆಯಲಿದೆ.

ಒಂದರಿಂದ ಐದನೇ ತರಗತಿ ಮತ್ತು ಆರರಿಂದ ಒಂಬತ್ತನೇ ತರಗತಿವರೆಗಿನ ಮೌಲ್ಯಾಂಕನ ಕುರಿತು ಶಿಕ್ಷಣ ಇಲಾಖೆ ಎರಡು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮುಂದಿನ ತರಗತಿಗೆ ಬಡ್ತಿ ನೀಡುವ ಪ್ರಕ್ರಿಯೆಗಳನ್ನು ಇದೇ 30ರೊಳಗೆ ಪೂರ್ಣಗೊಳಿಸಬೇಕು ಎಂದೂ ನಿರ್ದೇಶನ ನೀಡಿದೆ.

‘ವಿದ್ಯಾರ್ಥಿಗಳನ್ನು ಉತ್ತೀರ್ಣ ಅಥವಾ ಅನುತ್ತೀರ್ಣ ಎಂದು ತೀರ್ಮಾನಿಸಲುಶಾಲೆಗಳಲ್ಲಿ ಮೌಲ್ಯಾಂಕನ ನಡೆಸುವುದಿಲ್ಲ. ಬದಲಾಗಿ, ಕಲಿಕೆಯಲ್ಲಿನ ಕೊರತೆ
ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತು ಬಂಧ’ (ಬ್ರಿಡ್ಜ್ ಕೋರ್ಸ್) ಮೂಲಕ ಕೊರತೆ ತುಂಬಲು ಶಾಲಾ ಯೋಜನೆ ತಯಾರಿಸುವ ಉದ್ದೇಶದಿಂದ ನಡೆಸಲಾಗುತ್ತದೆ’ ಎಂದು ಇಲಾಖೆ ಸ್ಪಷ್ಟಪಡಿಸಿದೆ.

1ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು, ಸಂವಹನ ಆಧರಿಸಿ ಕೆಲವು ಶಾಲೆಯವರು ಆನ್‍ಲೈನ್ ಮೂಲಕ ತರಗತಿ ನಿರ್ವಹಿಸಿದ್ದಾರೆ. ಆ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆ ಆಧರಿಸಿದ ಕೃತಿ ಸಂಪುಟ, ಚೈಲ್ಡ್ ಪ್ರೊಫೈಲ್, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ, ಶಾಲಾ ಹಂತದಲ್ಲಿಯೇ ಸಿಸಿಇ (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ) ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ.

ಒಂದರಿಂದ ಐದನೇ ತರಗತಿವರೆಗೆ ಶಾಲಾ ಹಂತದಲ್ಲಿ ಪ್ರಗತಿ ವಿಶ್ಲೇಷಿಸಿ, ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು ಎಂದು ಮಾರ್ಗ ಸೂಚಿಯಲ್ಲಿದೆ.

6ರಿಂದ 9ನೇ ತರಗತಿ ಗಳಿಗೆ ವಿದ್ಯಾಗಮ ಮತ್ತು ಶಾಲೆಗಳಲ್ಲಿ ತರಗತಿಗಳು ನಡೆದಿವೆ. ಅಲ್ಲದೆ, ಈ ತರಗತಿಯ ವಿದ್ಯಾರ್ಥಿಗಳು ಚಂದನವಾಹಿನಿಯ ಸಂವೇದ, ಇ-ಕಲಿಕಾ, ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಆಲಿಸಿದ್ದಾರೆ. ಅವರಿಗೆ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನ ನಿರ್ವಹಿಸಿದ ದಾಖಲೆ ಆಧರಿಸಿ, ಪಡೆದ ಅಂಕಗಳನ್ನು 100ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು ಎಂದೂ ಮಾರ್ಗಸೂಚಿಯಲ್ಲಿದೆ.

‘ಸೇತು-ಬಂಧ’

2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಆರಂಭವಾದ ನಂತರ, ಈ ಮಕ್ಕಳಿಗೆ ಕಳೆದ ಸಾಲಿನ ಕಲಿಕಾ ಸಾಮರ್ಥ್ಯಗಳ ಬಗ್ಗೆ ಪೂರ್ವ ಪರೀಕ್ಷೆ ನಡೆಸಿ, ಕಲಿಕಾ ಕೊರತೆ ಗುರುತಿಸಲಾಗುವುದು. ಈ ಕೊರತೆಗಳು ಹಾಗೂ ಹಿಂದಿನ ವರ್ಷ ಪಟ್ಟಿ ಮಾಡಿ ಇಟ್ಟುಕೊಂಡಿದ್ದ ಕಲಿಕಾ ಕೊರತೆಗಳನ್ನು ಆಧರಿಸಿ ಪ್ರತಿ ಮಗುವಿಗೆ ನಿರ್ದಿಷ್ಟ ತಂತ್ರಗಳನ್ನು ರೂಪಿಸಿ ‘ಸೇತು ಬಂಧ’ ಮೂಲಕ ಪರಿಹಾರ ಬೋಧನೆ ನಡೆಸಲಾಗುವುದು. ನಂತರ ಸಾಫಲ್ಯ ಪರೀಕ್ಷೆ ನಡೆಸಿ ಮಕ್ಕಳಲ್ಲಿ ಕಲಿಕೆ ಆಗಿರುವುದನ್ನು ದೃಢೀಕರಿಸಿ ಮುಂದಿನ ತರಗತಿಯ ಪಠ್ಯಾಧಾರಿತ ಕಲಿಕಾಂಶಗಳ ಬೋಧನೆ ಆರಂಭಿಸಲಾಗವುದು ಎಂದೂ ಸ್ಪಷ್ಟಪಡಿಸಲಾಗಿದೆ.

***

1–9 ತರಗತಿಯ ಮಕ್ಕಳಿಗೆ ಆನ್‍ಲೈನ್‌, ಆಫ್‍ಲೈನ್ ಮೂಲಕವೂ ಮೌಲ್ಯಾಂಕನ ಇಲ್ಲ. ಶಾಲೆಗಳಲ್ಲಿ ಮೌಲ್ಯಾಂಕನ ವಿಶ್ಲೇಷಿಸಿ, ಫಲಿತಾಂಶ ಪ್ರಕಟಿಸಿ, ಬಡ್ತಿ ನೀಡಲಾಗುವುದು
- ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಮೇ 1ರಿಂದ ಬೇಸಿಗೆ ರಜೆ

ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳಿಗೆ ಮೇ 1ರಿಂದ ಜೂನ್ 14ರವರೆಗೆ ಬೇಸಿಗೆ ರಜೆ ಘೋಷಿಸಿದೆ. ಈ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷ (2021-22) ಜೂನ್‌ 15ರಿಂದ ಆರಂಭವಾಗಲಿದೆ. ಪ್ರೌಢ ಶಾಲೆಗಳಿಗೆ (8 ಮತ್ತು 9ನೇ ತರಗತಿ) ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಆದರೆ, ಈ ಶಾಲೆಗಳ ಶಿಕ್ಷಕರಿಗೆ ಬೇಸಿಗೆ ರಜೆ ಜೂನ್‌ 15ರಿಂದ ಜುಲೈ 14ರವರೆಗೆ ಇರಲಿದೆ. ಈ ಶಾಲೆಗಳಿಗೆ ಶೈಕ್ಷಣಿಕ ವರ್ಷ ಜುಲೈ 15ರಿಂದ ಆರಂಭವಾಗಲಿದೆ. ಈ ವೇಳಾಪಟ್ಟಿ ತಾತ್ಕಾಲಿಕ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಐಸಿಎಸ್‌ಇ 10ನೇ ಪರೀಕ್ಷೆ ರದ್ದು

ನವದೆಹಲಿ (ಪಿಟಿಐ): ಐಸಿಎಸ್‌ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳು ನಂತರ ಪರೀಕ್ಷೆಗೆ ಹಾಜರಾಗಲು ನೀಡಿದ್ದ ಆಯ್ಕೆಯನ್ನೂ ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಜೆರಿ ಅರಾಥೂನ್ ಮಂಗಳವಾರ ತಿಳಿಸಿದ್ದಾರೆ. 12ನೇ ತರಗತಿ ಪರೀಕ್ಷೆಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಕಳೆದ ವಾರ ಮಂಡಳಿಯು ಮುಂದೂಡಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷವೂ ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು. ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿತ್ತು.

‘ನಾವು 10ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಲು ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ಮಾನದಂಡವನ್ನು ರೂಪಿಸಲು ಬದ್ಧರಾಗಿದ್ದೇವೆ. ಮಾನದಂಡ ಮತ್ತು ಘೋಷಣೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು’ ಎಂದು ಜೆರಿ ಹೇಳಿದ್ದಾರೆ.

ಈಗಾಗಲೇ ಪ್ರಾರಂಭಿಸಿಲ್ಲದಿದ್ದರೆ, 11ನೇ ತರಗತಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. 11ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಬೇಗನೆ ಪ್ರಾರಂಭಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ತಿಳಿಸಲಾಗಿದೆ.

ಕಳೆದ ವಾರ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿತ್ತು. ಹಲವಾರು ರಾಜ್ಯ ಮಂಡಳಿಗಳು ಸಹ ಪರೀಕ್ಷೆಗಳನ್ನು ಮುಂದೂಡುವ ಅಥವಾ ರದ್ದುಪಡಿಸುವ ಕ್ರಮ ತೆಗೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT