ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ವಿರೋಧಿ ಮಾನಸಿಕತೆ: ಸತೀಶ ಜಾರಕಿಹೊಳಿ ಹೇಳಿಕೆಗೆ ಕಟೀಲ್‌ ಟೀಕೆ

Last Updated 8 ನವೆಂಬರ್ 2022, 19:05 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ‘ಹಿಂದೂ’ ಪದದ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ಧೋರಣೆಗೆ ಮತ್ತೊಂದು ನಿದರ್ಶನ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದ್ದಾರೆ.

‘ಹಿಂದೂ ಧರ್ಮ ಮತ್ತು ಹಿಂದೂ ಗಳನ್ನು ಟೀಕಿಸುವ ಮಾನಸಿಕತೆಯನ್ನು ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದೆ. ಹಿಂದೂ ಗಳನ್ನು ಅವಮಾನಿಸುವುದು, ಕಡೆಗಣಿಸುವುದನ್ನು ಆ ಪಕ್ಷವು ಸಾಮಾನ್ಯ ಕಾರ್ಯಸೂಚಿಯಾಗಿ ಪಾಲಿಸುತ್ತಲೇ ಬಂದಿದೆ’ ಎಂದು ಆಕ್ಷೇಪಿಸಿದರು.

‘ಹಿಂದೂ ಎಂಬುದು ಭಾರತೀಯ ಜೀವನ ಪದ್ಧತಿ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಸತೀಶ ಜಾರಕಿಹೊಳಿ ಮಾತನಾಡುವುದನ್ನು ನೋಡಿದರೆ ಸುಪ್ರೀಂಕೋರ್ಟ್‌ಗಿಂತಲೂ ಅವರು ದೊಡ್ಡವರಿರಬೇಕು. ಹಿಂದೂ ಭಾವನೆಗಳಿಗೆ ಧಕ್ಕೆ ತಂದಿರುವ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಆರಗ ಜ್ಞಾನೇಂದ್ರ ಖಂಡನೆ: ‘ಹಿಂದೂ ಪದ ಎಂದರೆ ಕಾಂಗ್ರೆಸ್ ನಾಯಕರಿಗೆ ಅಶ್ಲೀಲ, ಅದೇ ರೀತಿಯಲ್ಲಿ ಕೇಸರಿ ಎಂದರೆ ಅವರಿಗೆ ಅಲರ್ಜಿ, ಈ ನಿಲುವು ಆ ಪಕ್ಷದ ಸಿದ್ಧಾಂತದ ಅವಿಭಾಜ್ಯ ಅಂಗವಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು.

‘ಕಾಂಗ್ರೆಸ್‌ನ ಹಿಂದೂ ವಿರೋಧಿ ನಡೆಯಿಂದಾಗಿ, ದೇಶದಲ್ಲಿ ಅಪ್ರಸ್ತುತವಾಗಿದೆ’ ಎಂದು ಹೇಳಿದರು.

ರಾಜ್ಯದ ಜನತೆ ಕ್ಷಮಿಸುವುದಿಲ್ಲ: ಹಿಂದೂಗಳನ್ನು ನಿಂದಿಸಿದ ಕಾಂಗ್ರೆಸ್‌ ಅನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಹೇಳಿದರು.

ಕಾಂಗ್ರೆಸ್‌ ಪಕ್ಷವು ಯಾವತ್ತೂ ನಮ್ಮ ಪ್ರಾಚೀನ–ಶ್ರೇಷ್ಠ ಸಂಸ್ಕೃತಿ ಮತ್ತು ಧರ್ಮವನ್ನು ಹೀಯಾಳಿಸುವ ಕೆಲಸ ಮಾಡುತ್ತದೆ. ಸತೀಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ ಪಕ್ಷ ಕ್ರಮ ತೆಗೆದುಕೊಳ್ಳಬೇಕು. ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ಹಿಂದೂಗಳ ಅವಹೇಳನ ಸಮರ್ಥಿಸಿದಂತೆ ಆಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇಂದು ಬಿಜೆಪಿ ಪ್ರತಿಭಟನೆ
ಬೆಂಗಳೂರು:
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿ ಬುಧವಾರ ಬೆಳಿಗ್ಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಆಯೋಜಿಸಿದೆ.

ಎಲ್ಲ ಜಿಲ್ಲೆಗಳ ಪ್ರಮುಖ ಕೇಂದ್ರಗಳಲ್ಲಿ ಪ್ರತಿಭಟನೆ ಆಯೋಜಿಸಬೇಕು. ಇದರಲ್ಲಿ ಪಕ್ಷದ ಕಾರ್ಯಕರ್ತರು, ಶಾಸಕರು, ಸಂಸದರು ಮತ್ತು ಸಚಿವರು ಭಾಗವಹಿಸಬೇಕು. ಭಾಷಣದ ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠರ ಕಚೇರಿಯಲ್ಲಿ ಸತೀಶ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಬೇಕು ಎಂದು ಪಕ್ಷದ ಉಪಾಧ್ಯಕ್ಷ ನಿರ್ಮಲ್‌ ಕುಮಾರ್ ಸುರಾನ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT