ಶುಕ್ರವಾರ, ಮಾರ್ಚ್ 5, 2021
30 °C
ದೇವಾಲಯಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿ

ಆಂಧ್ರ ಸಚಿವರಿಂದ ಪೇಜಾವರ ಶ್ರೀ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಸಚಿವ ವೇಲಂಪಳ್ಳಿ ಶ್ರೀನಿವಾಸ ರಾವ್‌ ಅವರು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಸೋಮವಾರ ಭೇಟಿ ಮಾಡಿದ್ದು, ತಮ್ಮ ರಾಜ್ಯದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಆಂಧ್ರಪ್ರದೇಶದ ವಿವಿಧೆಡೆ ಹಲವು ದಿನಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ನಡೆದಿದ್ದು, ರಥಕ್ಕೆ ಬೆಂಕಿ ಇಟ್ಟಿದ್ದು, ವಿಗ್ರಹಗಳ ಧ್ವಂಸದ ಪ್ರಕರಣಗಳು ನಡೆದಿದ್ದವು. ಅಂತಹ ಸ್ಥಳಗಳಿಗೆ ಕಳೆದ ವಾರ ಭೇಟಿ ನೀಡಿದ್ದ ಸ್ವಾಮೀಜಿ, ದಾಳಿ ನಿಯಂತ್ರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಈ  ಕಾರಣದಿಂದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಸೂಚನೆಯ ಮೇರೆಗೆ ಧಾರ್ಮಿಕ ದತ್ತಿ ಸಚಿವರು ಸ್ವಾಮೀಜಿಯನ್ನು ಭೇಟಿಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ದೇವಾಲಯಗಳ ಮೇಲಿನ ದಾಳಿಯ ಹಿಂದಿನ ನಿಖರ ಕಾರಣ ತಿಳಿಯಬೇಕು ಮತ್ತು ಎಲ್ಲ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಬೇಕು. ಈ ಪ್ರಕರಣಗಳು ಮತೀಯ ಗಲಭೆಗೆ ದಾರಿಯಾಗದಂತೆ ಎಚ್ಚರಿಕೆ ವಹಿಸಬೇಕು. ದಾಳಿಯಿಂದ ಹಾನಿಗೀಡಾದ ದೇವಾಲಯಗಳ ದುರಸ್ತಿಯನ್ನು ತಕ್ಷಣವೇ ಆರಂಭಿಸಬೇಕು. ದೇವಾಲಯಗಳ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸಬೇಕು’ ಎಂದು ಸ್ವಾಮೀಜಿ ಸಚಿವರಿಗೆ ಸಲಹೆ ನೀಡಿದ್ದಾರೆ.

‘ಎಲ್ಲ ಪ್ರಕರಣಗಳ ಆರೋಪಿಗಳನ್ನೂ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಹಾನಿಗೀಡಾದ ದೇವಾಲಯಗಳ ದುರಸ್ತಿ ಶೀಘ್ರದಲ್ಲಿ ಆರಂಭವಾಗಲಿದೆ. ದಾಳಿ ತಡೆ ಮತ್ತು ಆರೋಪಿಗಳ ಪತ್ತೆಗೆ ತಂತ್ರಜ್ಞಾನದ ನೆರವಿನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಈ ವಿಚಾರದಲ್ಲಿ ನೀವು ನೇರವಾಗಿ ಸರ್ಕಾರದ ಜತೆ ಸಂಪರ್ಕದಲ್ಲಿರಬೇಕು. ಹಾನಿಗೀಡಾದ ದೇವಸ್ಥಾನಗಳ ವೀಕ್ಷಣೆ ಬಳಿಕ ಸರ್ಕಾರದ ಜತೆ ಮಾಹಿತಿ ಹಂಚಿಕೊಳ್ಳಬೇಕು‘ ಎಂದು ಸಚಿವರು ಸ್ವಾಮೀಜಿಗೆ ಮನವಿ ಮಾಡಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟಿ ಡಿ.ಪಿ. ಅನಂತ್‌ ಭೇಟಿಯ ವೇಳೆ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು