ಶನಿವಾರ, ಮಾರ್ಚ್ 25, 2023
27 °C
ಎಸ್ಸಿ-ಎಸ್ಟಿ ಗ್ರಾಹಕರಿಗೆ ಮಾಸಿಕ 75 ಯೂನಿಟ್‌ ಯೋಜನೆ ರದ್ದುಪಡಿಸಿಲ್ಲ: ಬೆಸ್ಕಾಂ

ಉಚಿತ ವಿದ್ಯುತ್‌ ಯೋಜನೆ ಅನುಷ್ಠಾನಕ್ಕೆ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ ಗೃಹ ಬಳಕೆಯ ‘ಅಮೃತ ಜ್ಯೋತಿ’ ಉಚಿತ ವಿದ್ಯುತ್‌ ಯೋಜನೆಯನ್ನು ರದ್ದು ಪಡಿಸಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಗಸ್ಟ್‌ 24ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ-ಆಡಳಿತ ಇಲಾಖೆಯು ಭಾಗಶಃ ಪರಿಷ್ಕರಿಸಿದೆ. ಆದ್ದರಿಂದ, ಈ ಸುತ್ತೋಲೆಯನ್ನು ಸೆಪ್ಟೆಂಬರ್‌ 3ರಂದು ಹಿಂಪಡೆಯಲಾಗಿದೆಯೇ ಹೊರತು, ಯೋಜನೆಯನ್ನು ರದ್ದುಪಡಿಸಿಲ್ಲ ಎಂದೂ ಹೇಳಿದೆ.

ಬಿಪಿಎಲ್‌ ಕುಟುಂಬದ ಎಸ್ಸಿ-ಎಸ್ಟಿ ಗ್ರಾಹಕರಿಗೆ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವ ಅಮೃತ ಜ್ಯೋತಿ ವಿದ್ಯುತ್‌ ಯೋಜನೆಯನ್ನು ರಾಜ್ಯ ಸರ್ಕಾರ ಮೇ 18ರಂದು ರಾಜ್ಯದಾದ್ಯಂತ ಜಾರಿಗೆ ತಂದಿತ್ತು.

ಈ ಯೋಜನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್‌ ಕುಟುಂಬಗಳಿಗೆ ಸುಲಭ ಮತ್ತು ಸುಲಲಿತವಾಗಿ ಅನುಷ್ಠಾನಗೊಳಿಸಲು ಇ-ಆಡಳಿತ ಇಲಾಖೆಯು ಹೊಸ ಆಪ್‌ ಅಭಿವೃದ್ದಿಪಡಿಸುತ್ತಿದೆ. 39 ಲಕ್ಷ ಬಿಪಿಎಲ್‌ ಕುಟುಂಬಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರಿಗೆ ಈ ಯೋಜನೆಯ ಲಾಭ ಸಿಗಲಿದೆ. ಈಗಾಗಲೇ 4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ.

ಮೇ ಮತ್ತು ಜೂನ್‌ ತಿಂಗಳ ವಿದ್ಯುತ್‌ ಬಿಲ್‌ ಮೊತ್ತವನ್ನು ಸುಮಾರು 15 ಸಾವಿರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಮರುಪಾವತಿಸಲಾಗಿದೆ. ಫಲಾನುಭವಿ ಗ್ರಾಹಕರಿಗೆ ತಾವು ಪಾವತಿಸಿದ ಒಟ್ಟು ವಿದ್ಯುತ್‌ ಬಿಲ್‌ನ ಮೊತ್ತದಲ್ಲಿ 75 ಯೂನಿಟ್‌ಗಳವರೆಗಿನ ವಿದ್ಯುತ್‌ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ.

ಈ ಹಿಂದೆ ಸುವಿಧಾ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬೇಕಿತ್ತು. ಅದರಲ್ಲಿ ಅರ್ಜಿ ಸಲ್ಲಿಕೆಗೆ ಕೆಲವು ಸಮಸ್ಯೆಗಳು ಇದ್ದವು. ಅವುಗಳನ್ನು ಸರಳೀಕರಿಸಿ ಹೆಚ್ಚು ಜನ ಇದರ ಪ್ರಯೋಜನ ಪಡೆಯಲು ನೆರವಾಗಲು ಹೊಸ ಆ್ಯಪ್‌ ಸಿದ್ಧಪಡಿಸಲೆಂದು ಸುತ್ತೋಲೆ ಹೊರಡಿಸಲಾಗಿತ್ತು ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್‌
ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು