ಶನಿವಾರ, ಮಾರ್ಚ್ 25, 2023
23 °C

ಅಡಿಕೆ ದರ: ಎರಡೇ ತಿಂಗಳಿಗೆ ₹ 15 ಸಾವಿರ ಕುಸಿತ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಡಿಕೆ ಧಾರಣೆ ಎರಡು ತಿಂಗಳ ಅಂತರದಲ್ಲಿ ₹ 15 ಸಾವಿರದಷ್ಟು ಕುಸಿದಿದೆ. ಮಳೆಯಿಂದಾಗಿ ಹೆಚ್ಚಾದ ಕೊಳೆ ರೋಗ, ಹಳದಿ ಎಲೆ ರೋಗ, ಎಲೆಚುಕ್ಕಿ ರೋಗಗಳ ಬಾಧೆಯಲ್ಲಿ ನಲುಗಿರುವ ರೈತರು ಬೆಲೆಕುಸಿತದ ಕಷ್ಟವನ್ನೂ ಅನುಭವಿಸುವಂತಾಗಿದೆ.

‍ಪ್ರಸಕ್ತ ವರ್ಷದ ಸೆಪ್ಟೆಂಬರ್‌ ಮೊದಲ ವಾರದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಬೆಳೆಯುವ ರಾಶಿ ಇಡಿ ಪ್ರಕಾರದ ಅಡಿಕೆ ಬೆಲೆ ಕ್ವಿಂಟಲ್‌ಗೆ ₹ 58 ಸಾವಿರ ಇತ್ತು. ಅಕ್ಟೋಬರ್‌ನಲ್ಲಿ ₹ 50 ಸಾವಿರದ ಆಸುಪಾಸು ಇತ್ತು. ನಂತರ ಪ್ರತಿ ವಾರವೂ ಕಡಿಮೆಯಾಗುತ್ತಾ ಸಾಗಿ, ಡಿಸೆಂಬರ್ ಎರಡನೇ ವಾರದಲ್ಲಿ ₹ 39 ಸಾವಿರಕ್ಕೆ ತಲುಪಿದೆ. 

2014–15ರಲ್ಲಿ ರಾಶಿ ಇಡಿ ಧಾರಣೆ ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ನಂತರ ಮತ್ತೆ ಕುಸಿತ ಕಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ₹ 50 ಸಾವಿರ ಆಸುಪಾಸಿನಲ್ಲೇ ಸ್ಥಿರತೆ ಕಂಡಿತ್ತು. 

ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 6 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 50ಕ್ಕಿಂತ ಹೆಚ್ಚಿದೆ. ರಾಜ್ಯದಲ್ಲಿ ಪ್ರತಿವರ್ಷ ಸುಮಾರು ₹ 30 ಸಾವಿರ ಕೋಟಿ ಮೌಲ್ಯದ ಅಡಿಕೆ ವಹಿವಾಟು ನಡೆಯುತ್ತದೆ.

ದಕ್ಷಿಣ ಏಷ್ಯಾದ ರಾಷ್ಟ್ರಗಳ ಮಧ್ಯೆ ಇರುವ ಪ್ರಾದೇಶಿಕ ಸಹಕಾರ ಒಪ್ಪಂದಗಳ ಲಾಭ ಪಡೆದು ಕಂಪನಿಗಳು ಭೂತಾನ್ ಸೇರಿದಂತೆ ಕೆಲವು ದೇಶಗಳಿಂದ ಅಗ್ಗದ ದರಕ್ಕೆ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಧಾರಣೆ ಕುಸಿತಕ್ಕೆ ಕಾರಣ ಎಂದು ಹೇಳುತ್ತಾರೆ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ.

ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಉತ್ತರ ಭಾರತದ ಗುಟ್ಕಾ, ಪಾನ್‌ಮಸಾಲ ಕಂಪನಿಗಳೇ ರಾಜ್ಯದ ಅಡಿಕೆಗೆ ಪ್ರಮುಖ ಮಾರುಕಟ್ಟೆ. ಅವಶ್ಯಕತೆ ಇರುವಷ್ಟು ದಾಸ್ತಾನು ಸಂಗ್ರಹವಾದ ನಂತರ ಖರೀದಿ ಸ್ಥಗಿತಗೊಳಿಸುತ್ತಾರೆ ಇದು ಸಹ ಧಾರಣೆ ಕುಸಿತಕ್ಕೆ ಕಾರಣ ಎನ್ನುವುದು ಅಡಿಕೆ ಮಂಡಿ ವರ್ತಕರ ವಿವರಣೆ.

–––

ವರ್ಷ; ಗರಿಷ್ಠ ಅಡಿಕೆ ಧಾರಣೆ  (₹ ಗಳಲ್ಲಿ)

2013; 28,797

2014; 99,190

2015; 87,575

2016; 39,650

2017; 36,499

2018; 33,869

2019; 35,899

2020; 42,299

2021; 47,599

2022; 58,699

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು