ಮಂಗಳವಾರ, ಜೂನ್ 22, 2021
23 °C
ಸುರಕ್ಷಾ ಸಾಧನಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಇದೇ 24ಕ್ಕೆ ಆಶಾ ಕಾರ್ಯಕರ್ತರ ಆನ್‌ಲೈನ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಯೋಧರಿಗೆ ನೀಡುವಂತೆ ತಿಂಗಳಿಗೆ ₹ 5 ಸಾವಿರ ಪ್ರೋತ್ಸಾಹಧನ, ಗೌರವಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಸೋಮವಾರ (ಮೇ 24) ರಾಜ್ಯದಾದ್ಯಂತ ಆನ್‌ಲೈನ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ತಾಯಿ ಮತ್ತು ಮಕ್ಕಳ ಆರೋಗ್ಯದ ಕಾರ್ಯಕ್ರಮಗಳ ಜತೆಗೆ ಕೊರೊನಾ ಸೋಂಕಿತರ ಪತ್ತೆ, ಮನೆ ಮನೆ ಸಮೀಕ್ಷೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ನಿರತರಾಗಿದ್ದಾರೆ. ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕೆಲಸದ ಸ್ಥಳ ಅಥವಾ ಮನೆಯಿಂದ ಆನ್‌ಲೈನ್ ಮೂಲಕ ಪೋಸ್ಟರ್‌ ಚಳವಳಿ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗಿದ್ದಾರೆ.

‘ಆರೋಗ್ಯ ಇಲಾಖೆಯು ಕೊರೊನಾ ಯೋಧರಿಗೆ ನೀಡುವಂತೆ ಆಶಾ ಕಾರ್ಯಕರ್ತೆಯರಿಗೆ ಕೂಡ ವಿಶೇಷ ಪ್ರೋತ್ಸಾಹಧನ ತಿಂಗಳಿಗೆ ₹ 5 ಸಾವಿರ ನೀಡಬೇಕು. ಸೋಂಕಿತರಾದ ಕಾರ್ಯಕರ್ತರಿಗೆ ಕನಿಷ್ಠ ₹ 25 ಸಾವಿರ ಪರಿಹಾರ ಒದಗಿಸಬೇಕು. ಅಗತ್ಯವಿರುವಷ್ಟು ಮುಖಗವಸು, ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸರ್), ಕೈಗವಸುಗಳನ್ನು ನೀಡುವ ಮೂಲಕ ಮುಂಚೂಣಿ ಯೋಧರನ್ನು ರಕ್ಷಿಸಬೇಕು. ಬಾಕಿ ಇರುವ ಮೂರು ತಿಂಗಳ ಮಾಸಿಕ ಗೌರವಧನ ₹ 4 ಸಾವಿರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮೊದಲ ಅಲೆಯಲ್ಲಿ ಮೃತಪಟ್ಟ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ತಲಾ ₹ 50 ಲಕ್ಷ ಪರಿಹಾರ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ.

‘ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸುಮಾರು 30ರಿಂದ 40 ಆಶಾ ಕಾರ್ಯಕರ್ತೆಯರು ಈಗ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಐವರು ಮೃತಪಟ್ಟಿದ್ದಾರೆ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆಗೆ (ಸಾರಿ) ಒಳಗಾದವರ ಸಮೀಕ್ಷೆ, ಕೋವಿಡ್ ಕಿಟ್ ಹಾಗೂ ಮಾತ್ರೆ ಹಂಚಿಕೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಆಶಾ ಕಾರ್ಯಕರ್ತರು ತೊಡಗಿದ್ದಾರೆ. ಹಾಗಾಗಿ, ಈ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಅವರಿಗೆ ಸೂಕ್ತ ಸುರಕ್ಷತೆ ಹಾಗೂ ಪ್ರೋತ್ಸಾಹ ಸರ್ಕಾರ ನೀಡಬೇಕು’ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು